ಮುಂಬಯಿ : 19ರ ಕೆಳಹರೆಯದ ಪ್ರವಾಸಿ ಇಂಗ್ಲಂಡ್ ಎದುರು ಇದೀಗ ಜಾರಿಯಲ್ಲಿರುವ ತವರಿನ ಸರಣಿಯಲ್ಲಿ ಪಾಲ್ಗೊಳ್ಳುತ್ತಿರುವ ಭಾರತೀಯ ಕ್ರಿಕೆಟ್ ತಂಡದ ಸದಸ್ಯರು ಮತ್ತು ಕೋಚ್ ರಾಹುಲ್ ದ್ರಾವಿಡ್‌ಗೆ ಕ್ರಿಕೆಟ್ ಮಂಡಳಿಯಿಂದ ನಿತ್ಯದ ಭತ್ಯೆ ಸಿಗುತ್ತಿಲ್ಲ; ಹಾಗಾಗಿ ಊಟದ ಖರ್ಚನ್ನು ಭರಿಸುವುದಕ್ಕೆ ಕೂಡ ಅವರ ಕೈಯಲ್ಲಿ ಹಣವಿಲ್ಲ !
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯಲ್ಲಿ ಸುಪ್ರೀಂ ಕೋರ್ಟ್ ತಂದಿರುವ ಸುಧಾರಣಾ ಕ್ರಮಗಳ ಫಲಶ್ರುತಿ ಇದಾಗಿದೆ.
ಬಿಸಿಸಿಐ ಮಾಜಿ ಕಾರ್ಯದರ್ಶಿಅಜಯ್ ಶಿರ್ಕೆ ಅವರನ್ನು ಹುದ್ದೆಯಿಂದ ತೆಗೆದು ಹಾಕಿದ ಬಳಿಕ ಆಟಗಾರರಿಗೆ ಹಣ ಪಾವತಿಸುವ ಚೆಕ್ಕುಗಳಿಗೆ ಸಹಿ ಹಾಕುವವರೇ ಇಲ್ಲವಾಗಿದೆ. ಮೇಲಾಗಿ ನೋಟು ನಿಷೇಧದ ಕ್ರಮವನ್ನು ಅನುಸರಿಸಿ ಹೇರಲಾಗಿರುವ ಬ್ಯಾಂಕ್ ಹಣ ವಿತ್ ಡ್ರಾ ಮಿತಿಯಿಂದಾಗಿ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದೆ.
ಜೂನಿಯರ್ ಕ್ರಿಕೆಟ್ ಆಟಾಗಾರರಿಗೆ ಸಿಗಬೇಕಾದ ದಿನವಹಿ ಭತ್ಯೆ 6,800 ರೂ. ಈಗ ಸಿಗುತ್ತಿಲ್ಲ. ಇದರ ಪರಿಣಾಮವಾಗಿ ಆಟಗಾರರು ತಮ್ಮ ಊಟದ ಖರ್ಚನ್ನು ತಾವೇ ಭರಿಸಬೇಕಾದ ದುಸ್ಥಿತಿ ಒದಗಿದೆ. ಕೆಲವು ಆಟಗಾರರು ಈ ಅಗತ್ಯ ಖರ್ಚಿಗಾಗಿ ತಮ್ಮ ಹೆತ್ತವರನ್ನೇ ಅವಲಂಬಿಸಿದ್ದಾರೆ. ಆಟಗಾರರಿಗೆ ಹಣ ಪಾವತಿಸುವ ಚೆಕ್ಕುಗಳಿಗೆ ಸಹಿ ಮಾಡುವ ಹೊಸ ವ್ಯಕ್ತಿಗೆ ಅಧಿಕಾರ ನೀಡಲು ಬಿಸಿಸಿಐ ಸದಸ್ಯರು ಹೊಸ ಠರಾವನ್ನು ಪಾಸು ಮಾಡಬೇಕಾಗುತ್ತದೆ. ಈ ಪ್ರಕ್ರಿಯೆ ಇನ್ನೂ ನಡೆದಿಲ್ಲ.
19ರ ಕೆಳಹರೆಯದವರ ಪ್ರವಾಸಿ ಇಂಗ್ಲಂಡ್ ಎದುರಿನ ಸರಣಿ ಮುಗಿದೊಡನೆಯೇ ನಾವು ಆಟಗಾರರಿಗೆ ಮತ್ತು ಸಿಬಂದಿಗಳಿಗೆ ಕೊಡಬೇಕಿರುವ ಡಿಎ ಮತ್ತಿತರ ಹಣವನ್ನು ನೇರವಾಗಿ ಅವರ ಖಾತೆಗೆ ಜಮೆ ಮಾಡುತ್ತೇವೆ. ಈಗ ಚೆಕ್ಕುಗಳಿಗೆ ಸಹಿ ಹಾಕುವ ಅಧಿಕಾರಸ್ಥರು ಇಲ್ಲದಿರುವುದರಿಂದ ನಾವೇನೂ ಮಾಡುವಂತಿಲ್ಲ ಎಂದು ಬಿಸಿಸಿಐ ಅಧಿಕಾರಿಯೋರ್ವರು ಹೇಳಿದ್ದಾರೆ.
“ನಾವಿಲ್ಲಿ ಮುಂಬಯಿಯಲ್ಲಿ ಪಾಶ್ ಹೊಟೇಲ್ ಒಂದರಲ್ಲಿ ಉಳಿದುಕೊಂಡಿದ್ದೇವೆ. ಇಲ್ಲಿ ಬರೇ ಒಂದು ಸ್ಯಾಂಡ್‌ವಿಚ್‌ಗೆ 1,500 ರೂ. ಇದೆ. ಹಾಗಾಗಿ ಊಟಕ್ಕಾಗಿ ನಾವು ಹೊರಗೆ ಅಗ್ಗದ ಹೊಟೇಲುಗಳಿಗೆ ಹೋಗುವುದು ಅನಿವಾರ್ಯವಾಗಿದೆ’ ಎಂದು ಭಾರತದ 19ರ ಕೆಳಹರೆಯದವರ ತಂಡದ ಸದಸ್ಯರೋರ್ವರು ಹೇಳುತ್ತಾರೆ.
ಪ್ರವಾಸಿ ಬಾಂಗ್ಲಾದೇಶ ತಂಡದೆದುರು ಏಕೈಕ ಟೆಸ್ಟ್ ಪಂದ್ಯವನ್ನು ಆಡಲು ಸದ್ಯ ಭಾರತೀಯರ ಹಿರಿಯರ ತಂಡ ಹೈದರಾಬಾದಿನಲ್ಲಿದೆ. ಅವರಿಗೆ ಮಾತ್ರ ಈ ಬಗೆಯ ಹಣಕಾಸು ತೊಂದರೆಗಳು ಯಾವುದೂ ಇಲ್ಲ; ಕಾರಣ ಬಿಸಿಸಿಐ ಆಡಳಿತ ಸಮಿತಿಯು ಸಿಇಓ ರಾಹುಲ್ ಜೋಹ್ರಿ ಅವರಿಗೆ ಆಟಗಾರರ ದಿನನಿತ್ಯದ ಎಲ್ಲ ಖರ್ಚುವೆಚ್ಚಗಳನ್ನು ಭರಿಸುವಂತೆ ಸೂಚನೆ ನೀಡಿದೆ.