ಸಿಡ್ನಿ : ಇಂದು ಕ್ರಿಕೆಟ್ ಜಗತ್ತಿನಲ್ಲಿ ಭಾರತ ರಾಜನಂತೆ ಮೆರೆಯುತ್ತಿದ್ದರೆ ಅದಕ್ಕೆ ಮಾಜಿ ಆಟಗಾರ ರಾಹುಲ್ ದ್ರಾವಿಡ್ ಅವರೇ ಕಾರಣ ಎಂಬುದಾಗಿ ಆಸ್ಟ್ರೇಲಿಯದ ಮಾಜಿ ನಾಯಕ ಗ್ರೆಗ್ ಚಾಪೆಲ್ ಹೇಳಿದ್ದಾರೆ.
ಆಸ್ಟ್ರೇಲಿಯದ ಕ್ರಿಕೆಟ್ ವೆಬ್ ಸೈಟ್ ಜತೆಗಿನ ಸಂದರ್ಶನವೊಂದಲ್ಲಿ ಮಾತನಾಡಿದ ಚಾಪೆಲ್, “ಆಸ್ಟ್ರೇಲಿಯದಲ್ಲಿ ಪ್ರತಿಭೆಗಳಿಗೆ ಕೊರತೆಯೇ ಇಲ್ಲ ಎಂಬ ಮಾತಿಗೆ ಈಗ ಬೆಲೆ ಇಲ್ಲ. ಆದರೆ ಭಾರತ ತಂಡ ಪ್ರತಿಭೆಯ ಮಹಾಪೂರವನ್ನೇ ಹೊಂದಿದೆ. ಇದಕ್ಕೆ ರಾಹುಲ್ ದ್ರಾವಿಡ್ ಅವರ ಕಠಿನ ಪರಿಶ್ರಮವೇ ಕಾರಣ’ ಎಂದು ಹೇಳಿದ್ದಾರೆ.
“ಇತಿಹಾಸವನ್ನು ಗಮನಿಸಿದರೆ ಕೇವಲ ಆಸ್ಟ್ರೇಲಿಯದಲ್ಲಿ ಮಾತ್ರ ಪ್ರತಿಭೆಗಳನ್ನು ಗುರುತಿಸಿ ಅವರನ್ನು ಪೋಷಿಸುವ ಕೆಲಸ ಮಾಡಲಾಗುತ್ತಿತ್ತು. ಆದರೆ ಕಳೆದ ಕೆಲವು ವರ್ಷಗಳಲ್ಲಿ ಎಲ್ಲವೂ ಬದಲಾಗಿದೆ. ಇಂದು ಆಸ್ಟ್ರೇಲಿಯದಲ್ಲಿ ಪ್ರತಿಭಾನ್ವಿತ ಆಟಗಾರರು ಕಳೆದುಹೋಗುತ್ತಿದ್ದಾರೆ. ಆಟಗಾರರನ್ನು ಈ ರೀತಿ ಕಳೆದುಕೊಳ್ಳುವುದು ಸರಿಯಲ್ಲ’ ಎಂದು ಚಾಪೆಲ್ ಬೇಸರ ವ್ಯಕ್ತಪಡಿಸಿದರು.
ಬಲಾಡ್ಯ ಮೀಸಲು ಸಾಮರ್ಥ್ಯ
“ರಾಹುಲ್ ದ್ರಾವಿಡ್ ಭಾರತ “ಎ’ ಹಾಗೂ ಭಾರತ ಕಿರಿಯರ ತಂಡದ ಕೋಚ್ ಆಗಿ ಭವಿಷ್ಯದ ಆಟಗಾರರನ್ನು ರೂಪಿಸುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಹೀಗಾಗಿ ಇಂದು ಟೀಮ್ ಇಂಡಿಯಾದ ಮೀಸಲು ಸಾಮರ್ಥ್ಯ ಅತ್ಯಂತ ಶಕ್ತಿಶಾಲಿಯಾಗಿದೆ. ಒಬ್ಬರನ್ನೊಬ್ಬರು ಮೀರಿಸುವಂತಹ ಪ್ರಚಂಡ ಆಟಗಾರರು ತಂಡದಲ್ಲಿ ಇದ್ದಾರೆ’ ಎಂದು ಚಾಪೆಲ್ ಪ್ರಶಂಸಿಸಿದರು.
“ಇದಕ್ಕೆ ಅತ್ಯುತ್ತಮ ನಿದರ್ಶನವೆಂದರೆ, ಭಾರತ ತಂಡದ ಕಳೆದ ಆಸ್ಟ್ರೇಲಿಯ ಪ್ರವಾಸ. ತಂಡ ಪ್ರಮುಖ ಆಟಗಾರರ ಸೇವೆಯನ್ನು ಕಳೆದುಕೊಂಡೂ ಯುವ ಪ್ರತಿಭೆಗಳ ಬಲದಿಂದ 2-1 ಅಂತರದಲ್ಲಿ ಸರಣಿ ಗೆದ್ದು ಇತಿಹಾಸ ನಿರ್ಮಿಸಿತ್ತು. ಇದರ ಹಿಂದೆ ದ್ರಾವಿಡ್ ಅವರ ಪರಿಶ್ರಮ ಅಪಾರ. ಇಂದು ಭಾರತ ತಂಡದಲ್ಲಿ ಮಿಂಚುತ್ತಿರುವ ಪ್ರತಿಯೊಬ್ಬ ಯುವ ಆಟಗಾರನೂ ದ್ರಾವಿಡ್ ಗರಡಿಯಲ್ಲಿ ಪಳಗಿದವನೇ ಆಗಿದ್ದಾನೆಂಬುದು ವಿಶೇಷ’ ಎಂದು ಗ್ರೆಗ್ ಚಾಪೆಲ್ ಹೇಳಿದರು.