ಹೊಸದಿಲ್ಲಿ : ರಫೇಲ್ ಫೈಟರ್ ಜೆಟ್ ಡೀಲ್‌ನಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿ ಕೇಂದ್ರ ಸರಕಾರಕ್ಕೆ ಕ್ಲೀನ್ ಚಿಟ್ ನೀಡಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಮತ್ತು ಅದರ ಅಧ್ಯಕ್ಷ ರಾಹುಲ್ ಗಾಂಧಿ ಅವರು ಸುಳ್ಳು ಆರೋಪ ಮಾಡಿದುದಕ್ಕೆ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ಇಂದು ಶುಕ್ರವಾರ ಆಗ್ರಹಿಸಿದೆ.
36 ರಫೇಲ್ ಫೈಟರ್ ಜೆಟ್ ಗಳ ಖರೀದಿಯಲ್ಲಿ ಭಾರೀ ಅಕ್ರಮ ನಡೆದಿದೆ ಮತ್ತು ಇದರ ತನಿಖೆ ನಡೆಸುವ ಸಲುವಾಗಿ ಎಫ್ಐಆರ್ ದಾಖಲಿಸುವಂತೆ ಸಿಬಿಐ ಗೆ ನಿರ್ದೇಶ ನೀಡಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಎಲ್ಲ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಇಂದು ವಜಾ ಮಾಡಿದೆ.
ರಫೇಲ್ ಖರೀದಿಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ; ಇದರ ಖರೀದಿ ನಿರ್ಧಾರ ಪ್ರಕ್ರಿಯೆಯನ್ನು ಸಂದೇಹಿಸುವುದಕ್ಕೆ ಕಾರಣವೇ ಇಲ್ಲ ಎಂದು ಸುಪ್ರೀಂ ಕೋರ್ಟ್ ಇಂದು ನೀಡಿದ ತನ್ನ ತೀರ್ಪಿನಲ್ಲಿ ಹೇಳಿದೆ.
ಸುಪ್ರೀಂ ಕೋರ್ಟಿನ ಈ ತೀರ್ಪನ್ನು ಸ್ವಾಗತಿಸಿದ ಬಿಜೆಪಿ ವಕ್ತಾರ ಶಹನವಾಜ್ ಹುಸೇನ್ ಅವರು, “ಪ್ರತಿಯೊಂದು ಡೀಲ್ ಬೊಫೋರ್ಸ್ ಡೀಲ್ ಅಲ್ಲ’ ಎಂದು ಕಾಂಗ್ರೆಸ್ ವಿರುದ್ಧ ಚಾಟಿ ಬೀಸಿದರು.
“ಈ ರೀತಿಯ ಡೀಲ್‌ಗಳಲ್ಲಿ ದೇಶದ ಭದ್ರತೆಯ ವೆಚ್ಚದಲ್ಲಿ ಹಣ ಕೊಳ್ಳೆ ಹೊಡೆಯುವುದು ಕಾಂಗ್ರೆಸ್ ಉನ್ನತ ನಾಯಕರ ಸಂಸ್ಕೃತಿ ಮತ್ತು ಸಂಪ್ರದಾಯವಾಗಿದೆ’ ಎಂದವರು ಟೀಕಿಸಿದರು.
ರಫೇಲ್ ಡೀಲ್ ವಿಷಯದಲ್ಲಿ ಪ್ರಧಾನಿಯವರ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿ ಅವರ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ನರೇಂದ್ರ ಮೋದಿ ಅವರಲ್ಲಿ ಕ್ಷಮೆಯಾಚಿಸಬೇಕು ಎಂದು ಶಹನವಾಜ್ ಆಗ್ರಹಿಸಿದರು.