ಬಾಲಿವುಡ್‌ನ ಖ್ಯಾತ ನಟ ರಾಹುಲ್ ಬೋಸ್ ಮತ್ತೂಮ್ಮೆ ಕನ್ನಡ ಸಿನಿಪ್ರಿಯರ ಮುಂದೆ ಬರುವ ತಯಾರಿಯಲ್ಲಿದ್ದಾರೆ.
ಹೌದು, ಸುಮಾರು ಎಂಟು ವರ್ಷಗಳ ಹಿಂದೆ ಭಾವನಾ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದ “ನಿರುತ್ತರ’ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗಿದ್ದ ರಾಹುಲ್ ಬೋಸ್ ಅದಾದ ನಂತರ ಯಾವ ಕನ್ನಡ ಸಿನಿಮಾಗಳಲ್ಲೂ ಕಾಣಿಸಿಕೊಂಡಿರಲಿಲ್ಲ. ಇದೀಗ ಶಿವರಾಜಕುಮಾರ್ ಅಭಿನಯದ “ಭೈರತಿ ರಣಗಲ್’ ಸಿನಿಮಾದ ಮೂಲಕ ರಾಹುಲ್ ಬೋಸ್ ಮತ್ತೆ ಕನ್ನಡ ಪ್ರೇಕ್ಷಕರ ಮುಂದೆ ಬರಲಿದ್ದಾರೆ ಎನ್ನಲಾಗುತ್ತಿದೆ.
ಇತ್ತೀಚೆಗಷ್ಟೇ “ಭೈರತಿ ರಣಗಲ್’ ಸಿನಿಮಾದ ಮುಹೂರ್ತವನ್ನು ನೆರವೇರಿಸಿರುವ ಚಿತ್ರತಂಡ, ಸದ್ಯ ಸಿನಿಮಾದ ಚಿತ್ರೀಕರಣಕ್ಕೆ ಅಂತಿಮ ಹಂತದ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಇದೇ ಜೂನ್ 10ರಿಂದ ಶೂಟಿಂಗ್ ಶುರುವಾಗಲಿದೆ. ಇನ್ನು “ಭೈರತಿ ರಣಗಲ್’ ಸಿನಿಮಾದಲ್ಲಿ ನಾಯಕ ನಟ ಶಿವರಾಜಕುಮಾರ್ ಅವರಿಗೆ ಖಡಕ್ ಎದುರಾಳಿಯಾಗಿ ನಟ ರಾಹುಲ್ ಬೋಸ್ ಕಾಣಿಸಿಕೊಳ್ಳಲಿದ್ದಾರಂತೆ.
“ಭೈರತಿ ರಣಗಲ್’ ಸಿನಿಮಾದ ಕಥೆ ಮತ್ತು ತಮ್ಮ ಪಾತ್ರವನ್ನು ಕೇಳಿ ಮೆಚ್ಚಿಕೊಂಡಿರುವ ರಾಹುಲ್ ಬೋಸ್ ಈ ಸಿನಿಮಾದಲ್ಲಿ ಅಭಿನಯಿಸಲು ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂಬುದು ಚಿತ್ರತಂಡದ ಮೂಲಗಳ ಮಾಹಿತಿ.
“ಗೀತಾ ಪಿಕ್ಚರ್’ ಬ್ಯಾನರಿನಲ್ಲಿ ನಿರ್ಮಾಣವಾಗುತ್ತಿರುವ “ಭೈರತಿ ರಣಗಲ್’ ಸಿನಿಮಾ “ಮಫ್ತಿ” ಸಿನಿಮಾದ ಪ್ರೀಕ್ವೆಲ್ ಆಗಿ ಮೂಡಿ ಬರುತ್ತಿದ್ದು, ನರ್ತನ್ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ.