ನವದೆಹಲಿ: ಕರ್ನಾಟಕದ ಬಂಡೀಪುರ ಹುಲಿ ರಕ್ಷಿತಾರಣ್ಯದ ಮೂಲಕ ಕೇರಳಕ್ಕೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 766ರಲ್ಲಿ ವಿಧಿಸಲಾಗಿರುವ ರಾತ್ರಿ ಸಂಚಾರ ನಿಷೇಧವನ್ನು ತೆರವುಗೊಳಿಸಿ, ಕೇರಳಿಗರಿಗೆ ಈ ಮಾರ್ಗದಲ್ಲಿ ದಿನದ 24 ಗಂಟೆಗಳೂ ಸಂಚಾರ ಸಂಪರ್ಕ ಕಲ್ಪಿಸಬೇಕೆಂದು ವಯನಾಡ್ ಸಂಸದ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕೇರಳ ಸಿಎಂ ಪಿಣರಾಯಿ ವಿಜಯನ್ ಅವರನ್ನು ಆಗ್ರಹಿಸಿದ್ದಾರೆ.
ಮಂಗಳವಾರ, ವಿಜಯನ್ ಅವರನ್ನು ಕೇರಳ ಹೌಸ್‌ನಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ ಅವರು, ನಿರ್ಬಂಧ ತೆರವು ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ನಂತರ ಮಾಧ್ಯ ಮಗಳೊಂದಿಗೆ ಮಾತನಾಡಿ, ಕೇಂದ್ರ ಸಚಿವರ ಜತೆಗೆ ಮಾತನಾಡಿ ಸಮಸ್ಯೆ ಇತ್ಯರ್ಥಗೊಳಿಸುವುದಾಗಿ ಆಶ್ವಾಸನೆ ನೀಡಿದ್ದಾರೆ.
ಸತ್ಯಾಗ್ರಹ: ಈ ನಡುವೆ, ರಕ್ಷಿತಾರಣ್ಯದ ಹೆದ್ದಾರಿಯಲ್ಲಿ ರಾತ್ರಿ ಸಂಚಾರ ನಿಷೇಧ ತೆರವುಗೊಳಿಸುವಂತೆ ಆಗ್ರಹಿಸಿ, ವಯನಾಡ್‌ನ ಸಮರ ಸಮಿತಿ ಸಂಘಟ ನೆಯ ಯುವ ಕಾರ್ಯಕರ್ತರು ನಡೆಸುತ್ತಿರುವ ಉಪವಾಸ ಸತ್ಯಾಗ್ರಹ 7ನೇ ದಿನಕ್ಕೆ ಕಾಲಿಟ್ಟಿದೆ. ಅ. 3ರಂದು ವಯನಾಡ್‌ಗೆ ಭೇಟಿ ನೀಡಲಿರುವ ರಾಹುಲ್, ಸತ್ಯಾಗ್ರಹಿಗಳನ್ನು ಭೇಟಿ ಯಾಗಿ ಬೆಂಬಲ ಸೂಚಿಸಲಿದ್ದಾರೆಂದು ಕಾಂಗ್ರೆಸ್ ಪ್ರಕಟಿಸಿದೆ.
ಪಾದಯಾತ್ರೆ: ಹುಲಿ ರಕ್ಷಿತಾರಣ್ಯ ಸಂಚಾರ ನಿರ್ಬಂಧ ತೆರವಿಗೆ ಆಗ್ರಹಿಸಿ, ಮಂಗಳವಾರ ಕೇರಳದ ಸುಲ್ತಾನ್ ಬತೇರಿ ಯಿಂದ ಕರ್ನಾಟಕದ ಕೊನೆಯ ಹಳ್ಳಿ ಯಾದ ಮೂಲ ಹಳ್ಳಿಯವರೆಗೆ ನಡೆ ಸಲಾದ ಪಾದಯಾತ್ರೆಯಲ್ಲಿ ಸಾವಿರಾರು ವಿದ್ಯಾರ್ಥಿ ಗಳು, ರೈತರು, ಮಹಿಳೆಯರು ಭಾಗವಹಿಸಿದ್ದರು.
ಕೇಂದ್ರದ ಭರವಸೆ: ಬಂಡೀಪುರ ಹುಲಿ ರಕ್ಷಿತಾರಣ್ಯ ಸಂಚಾರ ನಿರ್ಬಂಧ ಸಮಸ್ಯೆಯನ್ನು ಅಧ್ಯಯನ ಮಾಡಲು ತಜ್ಞರ ಸಮಿತಿಯೊಂದನ್ನು ನೇಮಿಸುವುದಾಗಿ ಕೇಂದ್ರ ಸರ್ಕಾರ ಹೇಳಿದೆ. ಸಮಿತಿಯು ನೀಡುವ ವರದಿ ಯನ್ವಯ ಸಮಸ್ಯೆಯನ್ನು ಇತ್ಯರ್ಥಗೊಳಿಸುವುದಾಗಿ ಭರವಸೆ ನೀಡಿದೆ. ಮಂಗಳವಾರ, ಕೇರಳ ಸಿಎಂ ಪಿಣರಾಯಿ ವಿಜಯನ್ ಹಾಗೂ ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವಡೇಕರ್ ನಡುವಿನ ಮಾತುಕತೆಯ ನಂತರ, ಕೇಂದ್ರದಿಂದ ಈ ಪ್ರಕಟಣೆ ಹೊರಬಿದ್ದಿದೆ.