ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದ ನಟಿ ರಾಗಿಣಿ ಹಾಗೂ ಸಂಜನಾ ಗಲ್ರಾನಿ ಶನಿವಾರ ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿರುವ ಎನ್‌ಡಿಪಿಎಸ್ ವಿಶೇಷ ನ್ಯಾಯಾಲಯಕ್ಕೆ ಹಾಜರಾದರು. ಅಲ್ಲದೆ, ಜೈಲಿನಿಂದ ಬಿಡುಗಡೆಯಾದ ಬಳಿಕ ಇದೇ ಮೊದಲ ಬಾರಿಗೆ ಇಬ್ಬರು ಮುಖಾಮುಖೀ ಭೇಟಿಯಾಗಿದ್ದು, ಪರಸ್ಪರ ಅಪ್ಪಿಕೊಂಡು ಕೆಲ ಕಾಲ ಕುಶಲೋಪರಿ ವಿಚಾರಿಸಿದರು.
ನ್ಯಾಯಾಲಯದಲ್ಲಿ ವಿಚಾರಣೆ ಆರಂಭವಾಗುತ್ತಿದ್ದಂತೆ ರಾಗಿಣಿ ಮತ್ತು ಸಂಜನಾ ಕೋರ್ಟ್‌ಗೆ ಆಗಮಿಸಿ ಜಾಮೀನು ಷರತ್ತುಗಳನ್ನು ಪೂರ್ಣಗೊಳಿಸಿದರು. ಮುಂದಿನ ವಿಚಾರಣೆಯನ್ನು ನ್ಯಾಯಾಲಯ ಫೆ.15 ಮುಂದೂಡಿದ್ದು, ಇಬ್ಬರು ಮತ್ತೆ ವಿಚಾರಣೆಗೆ ಹಾಜರಾಗಲಿದ್ದಾರೆ.
ಜೈಲಿನಲ್ಲಿ ಕಿತ್ತಾಟ, ಕೋರ್ಟ್ ಆವರಣದಲ್ಲಿ ಅಪ್ಪುಗೆ!: ಪ್ರಕರಣದಲ್ಲಿ ಸಿಲುಕಿ ಜೈಲು ಸೇರಿದ ಬಳಿಕ ಇಬ್ಬರು ನಟಿಯರು ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಪರಸ್ಪರ ಹೊಡೆದಾಡಿಕೊಂಡಿದ್ದರು. ಕೆಲ ದಿನಗಳ ಕಾಲ ಪ್ರತ್ಯೇಕ ಸೆಲ್‌ಗಳಲ್ಲಿ ಇರಿಸಲಾಗಿತ್ತು. ಅನಂತರ ಆಪ್ತರಾದ ನಟಿಯರು ಇದೀಗ ಕೋರ್ಟ್ ವಿಚಾರಣೆ ಮುಗಿದು ಹೊರಬರುತ್ತಿದ್ದಂತೆ ಅಪ್ಪಿಕೊಂಡು ಕೆಲ ಕಾಲಕುಶಲೋಪರಿ ವಿಚಾರಿಸಿಕೊಂಡರು.
ಉಸಿರಾಡಲು ಸಮಯ ಕೊಡಿ
ಕಾನೂನು ಪ್ರಕಾರ ಕೋರ್ಟ್‌ಗೆ ಹಾಜರಾಗಬೇಕಿತ್ತು. ಹೀಗಾಗಿ ಹಾಜರಾಗಿದ್ದೇನೆ. ಪ್ರಕರಣದ ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತೇನೆ. ದಯವಿಟ್ಟು ಉಸಿರಾಡಲು ಸಮಯ ಕೊಡಿ. ನಮ್ಮ ನ್ಪೋರಿ ಏನಿದೆ? ಏನು ನಡೆಯುತ್ತಿದೆ? ಅದನ್ನು ಯಾರು ಕೇಳ ಬೇಕೆಂತಿಲ್ಲ. ಈಗಾಗಲೇ ಮಾಧ್ಯಮ ಎಲ್ಲ ರೀತಿಯ ಸುದ್ದಿಗಳನ್ನು ಪ್ರಸಾರ ಮಾಡಿವೆ. ನಾವು ಮಾತನಾಡಲು ಸಮಯ ಕೊಡಿ ಎಂದು ನಟಿ ರಾಗಿಣಿ ತಿಳಿಸಿದರು.
12 ವರ್ಷಗಳಿಂದ ಕರ್ನಾಟದಲ್ಲಿದ್ದೇನೆ. ರಾಗಿಣಿ ಯಾರು ಎಂದು ಎಲ್ಲರಿಗೂ ಗೊತ್ತಿದೆ. ನನ್ನ ಬಗ್ಗೆ ಹೇಳಿಕೊಳ್ಳುವ ಅಗತ್ಯವಿಲ್ಲ. ವ್ಯವಸ್ಥೆ ಮೇಲೆ ನಂಬಿಕೆ ಇದೆ. ಮೊದಲಿನಿಂದಲೂ ನಾನು ಮುಗ್ಧೆ. ಈಗಲೂ ಮುಗ್ಧೆ. ಪ್ರಕರಣ ಕುರಿತು ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ಹೇಳಿದರು.