Advertisement
ಜೂನ್ -ಜುಲೈ ತಿಂಗಳಲ್ಲಿ ಬಹುತೇಕವಾಗಿ ಕಾಲೇಜುಗಳು ಆರಂಭವಾಗುತ್ತವೆ. ಹೊಸ ಹೊಸ ಕನಸುಗಳನ್ನು ಹೊತ್ತ ಹುಚ್ಚ ಖೋಡಿ ಮನಸಿಗೆ ಕಾಲೇಜಿನ ಮೆಟ್ಟಿಲೇರುವಂತೆ ರಾಗಿಂಗ್ ಎನ್ನುವ ಪಿಡುಗು ಮುಖಾಮುಖೀಯಾದರೆ ರಂಗುಬಿರಂಗಿ ಹಗಲುಗನಸುಗಳನ್ನು ಹೊಸೆಯುತ್ತಲೇ ಕಾಲೇಜು ಪ್ರವೇಶಿಸಿದ ವಿದ್ಯಾರ್ಥಿಗಳು ಅದರ ಹಾವಳಿಗೆ ಹೈರಾಣಾಗಿ ಹೋಗುತ್ತಾರೆ. ಹೊಸದಾಗಿ ಕಾಲೇಜನ್ನು ಪ್ರವೇಶಿಸುವ ಮುಗ್ಧ ಅಮಾಯಕ ವಿದ್ಯಾರ್ಥಿಗಳನ್ನು ಗುರಿ ಮಾಡುವ ಈ ಪೀಡಕರ ತಂಡ ಮೊದಲ ದಿನವೇ ಹೊಸ ವಿದ್ಯಾರ್ಥಿಗಳಿಗೆ ನರಕದರ್ಶನ ಮಾಡಿಸುತ್ತದೆ. ರಾಗಿಂಗ್ ಎಂದರೆ ಹೊಸ ವಿದ್ಯಾರ್ಥಿಗಳನ್ನು ಪೀಡಿಸುವ ಆಚರಣೆ, ಅವರಿಗೆ ದೈಹಿಕ ಹಾಗೂ ಮಾನಸಿಕ ಕಿರಿಕಿರಿಯನ್ನು ನೀಡುವ ಕುಕೃತ್ಯ. ಈ ಬಗೆಯ ಕಿರುಕುಳವನ್ನು ಸಹಿಸಲಾರದೇ ಅನೇಕ ವಿದ್ಯಾರ್ಥಿಗಳು ಕಾಲೇಜನ್ನು ಅರ್ಧದಲ್ಲಿ ಬಿಟ್ಟದಿದೆ. ಕೆಲವರಂತೂ ಆತ್ಮಹತ್ಯೆ ಮಾಡಿಕೊಂಡಿರುವುದೂ ಇದೆ. ಕಳೆದ ವರ್ಷ ಮಹಾರಾಷ್ಟ್ರದ ಔರಂಗಾಬಾದನ ಸರಕಾರಿ ವೈದ್ಯಕೀಯ ಕಾಲೇಜಿನಲ್ಲಿ 13 ಸೀನಿಯರ್ ವಿದ್ಯಾರ್ಥಿಗಳು ಒಬ್ಬ ವಿದ್ಯಾರ್ಥಿಯ ಮೇಲೆ ರಾಗಿಂಗ್ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಆ 13 ವಿದ್ಯಾರ್ಥಿಗಳಿಗೂ ತಲಾ 25,000 ರೂಪಾಯಿ ದಂಡ ವಿಧಿಸಲಾಯಿತು. ಮಳೆ ಬರುವಾಗಲೂ ಕ್ರಿಕೆಟ್ ಆಡುವಂತೆ ಜ್ಯುನಿಯರ್ ವಿದ್ಯಾರ್ಥಿಯನ್ನು ಸತಾಯಿಸಿದ ಹಿನ್ನೆಲೆಯಲ್ಲಿ ಆ ವಿದ್ಯಾರ್ಥಿ ಮರುದಿನ ಹಾಸಿಗೆ ಹಿಡಿಯಬೇಕಾಯಿತು. ಈ ಬಗೆಯ ಘಟನೆ ಕೇವಲ ಪುಣೆ, ಹೈದರಾಬಾದ್, ದಿಲ್ಲಿ, ಹರ್ಯಾಣಕ್ಕೆ ಮಾತ್ರ ಸೀಮಿತವಾಗಿರದೆ ನಗರಗಳಲಿರುವ ದೊಡ್ಡ ಇಂಜನಿಯರಿಂಗ್ ಮತ್ತು ಮೆಡಿಕಲ್ ಕಾಲೇಜುಗಳಲ್ಲಿ ರಾಗಿಂಗ್ ಪಿಡುಗಿದೆ.
Related Articles
Advertisement
ರಾಗಿಂಗ್ ಎಂದರೇನು?: ಯು.ಜಿ.ಸಿ. ನಿಯಮಗಳ ಪ್ರಕಾರ ಇದೊಂದು ರೀತಿಯ ಕೆಟ್ಟ ವರ್ತನೆಯಾಗಿದ್ದು ಇದರ ಮೂಲಕ ಜೂನಿಯರ್ ವಿದ್ಯಾರ್ಥಿಗಳಿಂದ ಅಸಹ್ಯವೆನಿಸಬಹುದಾದ ಕೆಲಸ ಕಾರ್ಯಗಳನ್ನು ಮಾಡಲು ಹೇಳುವುದು, ಅವರನ್ನು ಹೀಯಾಳಿಸುವುದು, ಬೈಯುವುದು, ಹೊಡೆಯುವುದು ಇನ್ನಿತರ ಯಾವುದೇ ಬಗೆಯ ದೈಹಿಕ ಹಾಗೂ ಮಾನಸಿಕ ಕಿರಕಿರಿಗಳ ಮೂಲಕ ಭಯವನ್ನುಂಟು ಮಾಡುವುದು.
ನಿಯಂತ್ರಣ ಮಂಡಳಿ : ಈ ಬಗೆಯ ಚಟುವಟಿಕೆಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯಗಳ ಮಟ್ಟದಲ್ಲಿ ಒಂದು ಸಮಿತಿಯನ್ನು ರಚಿಸಬೇಕು. ಹಾಗೆಯೇ ವಿಶ್ವವಿದ್ಯಾಲಯ ಮತ್ತು ಕಾಲೇಜು ಹಂತದಲ್ಲಿಯೂ ಉಪ ಕುಲಪತಿ ಮತ್ತು ಪ್ರಾಚಾರ್ಯರ ಮುಂದಾಳತ್ವದಲ್ಲಿ ಸಮಿತಿಯನ್ನು ರಚಿಸಬೇಕು. ಈ ಸಮಿತಿಯಲ್ಲಿ ಯಾರನ್ನು ಒಳಗೊಂಡಿರಬೇಕು ಎನ್ನುವ ಬಗ್ಗೆ ನಿಯಮಗಳಿವೆ. ಅವುಗಳಿಗೆ ಒಳಪಟ್ಟೇ ಸಮಿತಿಯನ್ನು ರಚಿಸಬೇಕು.
ಯಾವ ರೀತಿಯ ದುರ್ವರ್ತನೆಗಳನ್ನು ಗಮನಿಸಬೇಕು? ರಾಗಿಂಗ್ಗೆ ಪುಸಲಾಯಿಸುವುದು, ರಾಗಿಂಗ್ ಸಲುವಾಗಿ ಪಿತೂರಿ ಮಾಡುವುದು, ಗುಂಪು ಸೇರಿಸಿ ಗದ್ದಲವೆಬ್ಬಿಸುವುದು, ಸಾರ್ವಜನಿಕರಿಗೆ ಕಿರುಕುಳ ನೀಡುವುದು,ಅಸಹ್ಯವಾದ ವರ್ತನೆ,ದೇಹಕ್ಕೆ ಗಾಯ ಉಂಟುಮಾಡುವುದು,ಅಪರಾಧಿ ಕೃತ್ಯದಲ್ಲಿ ತೊಡಗುವುದು,ಹಲ್ಲೆ ಮತ್ತು ಲೈಂಗಿಕ ಕಿರುಕುಳ,ಅಪರಾಧಿಗಳ ಸಹವಾಸ ದಲ್ಲಿರುವುದು,ದೈಹಿಕ, ಮಾನಸಿಕ ಹಿಂಸೆ ಇವೆಲ್ಲವುಗಳೊಂದಿಗೆ ರಾಗಿಂಗ್ ವ್ಯಾಪ್ತಿಯಲ್ಲಿ ಬರಬಹುದಾದ ಇತರ ವರ್ತನೆಗಳು. ಕೈಗೊಳ್ಳಬೇಕಾದ ಕ್ರಮಗಳು: ಸಂಬಂಧಿಸಿದ ಸಂಸ್ಥೆಗಳು ಯಾವುದೇ ಮುಲಾಜಿಲ್ಲದೇ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು. ಕಾಲೇಜಿನ ಕ್ಯಾಂಪಸ್ ಮಾತ್ರವಲ್ಲದೆ ಹೊರಗಡೆಯೂ ಆ ಬಗೆಯ ಕೃತ್ಯದಲ್ಲಿ ತೊಡಗಿದ್ದರೆ ಕ್ರಮ ತೆಗೆದುಕೊಳ್ಳಬೇಕು. ಪ್ರವೇಶಾತಿಯ ಸಂದರ್ಭದಲ್ಲಿಯೂ ಇದನ್ನು ಪ್ರತಿಯೊಬ್ಬ ವಿದ್ಯಾರ್ಥಿಯ ಗಮನಕ್ಕೆ ತರಬೇಕು.ರಾಗಿಂಗ್ ಗೆ ಸಂಬಂಧಿಸಿದ ನಿಯಮಾವಳಿಗಳನ್ನು ಕಾಲೇಜಿನ ಪರಿಚಯ ಪುಸ್ತಕದಲ್ಲಿ ಮುದ್ರಿಸುವುದು, ಪ್ರತಿಯೊಬ್ಬ ವಿದ್ಯಾರ್ಥಿಯಿಂದ ಪ್ರವೇಶಾತಿಯ ಸಂದರ್ಭದಲ್ಲಿ ಯಾವುದೇ ಸಂದರ್ಭದಲ್ಲಿ ಅನುಚಿತ ವರ್ತನೆಗಳು ಕಂಡು ಬಂದರೆ ಕ್ರಮಕೈಗೊಳ್ಳಬಹುದು ಎನ್ನುವ ಮುಚ್ಚಳಿಕೆ ಪತ್ರವನ್ನು ಬರೆಯಿಸಿಕೊಳ್ಳುವುದು. ಈ ಪತ್ರಕ್ಕೆ ಪಾಲಕರಿಂದಲೂ ಸಹಿ ಪಡೆಯಬೇಕು. ನಡತೆಯ ಪ್ರಮಾಣಪತ್ರವನ್ನು ಕಡ್ಡಾಯಗೊಳಿಸ ಬೇಕು. ಹಾಸ್ಟೆಲ್ ಸೇರಬಯಸುವ ವಿದ್ಯಾರ್ಥಿಯಿಂದಲೂ ಮುಚ್ಚಳಿಕೆ ಬರೆಯಿ ಸಿಕೊಳ್ಳಬೇಕು. ಸಂಸ್ಥೆಯ ಮುಖ್ಯಸ್ಥರು ಆಗಾಗ ಸಭೆಗಳನ್ನು ನಡೆಸಿ ರಾಗಿಂಗ್ ಬಗ್ಗೆ ಚರ್ಚಿಸಬೇಕು. ರಾಗಿಂಗ್ ಹಾಗೂ ಅದಕ್ಕೆ ಸಂಬಂಧಿಸಿದ ಕಟ್ಟು ನಿಟ್ಟಾದ ನಿಯಮಗಳ ಭಿತ್ತಿಪತ್ರವನ್ನು ಅಲ್ಲಲ್ಲಿ ಅಂಟಿಸುವುದು.ಸಮೂಹ ಮಾಧ್ಯಮಗಳ ನೆರವಿನೊಂದಿಗೆ ವ್ಯಾಪಕ ಪ್ರಚಾರ ಮಾಡುವುದು. ಇಂಥ ಇನ್ನೂ ಅನೇಕ ಕ್ರಮಗಳನ್ನು ಯು.ಜಿ.ಸಿ. ತನ್ನ 2009ರ ನಿಯಮಾವಳಿಗಳಲ್ಲಿ ಸೂಚಿಸಿದೆ. ಕಾಲೇಜು ಹಾಗೂ ವಿಶ್ವ ವಿದ್ಯಾಲಯಗಳ ಕ್ಯಾಂಪಸನ್ನು ರಾಗಿಂಗ್ ಮುಕ್ತಗೊಳಿಸುವ ನಿಟ್ಟಿನಲ್ಲಿ ಅತ್ಯಂತ ಜಾಗೃತರಾಗಿ ಕ್ಯಾಂಪಸಲ್ಲಿರುವವರೆಲ್ಲಾ ಕಾರ್ಯನಿರ್ವಹಿಸಬೇಕಾಗಿದೆ. ಸೀನಿಯರ್ ಹಾಗೂ ಜ್ಯೂನಿಯರ್ ವಿದ್ಯಾರ್ಥಿಗಳ ಮಧ್ಯೆ ಸಾಮರಸ್ಯವನ್ನು ಸ್ಥಾಪಿಸುವ ದಿಶೆಯಲ್ಲಿ ಆಗಾಗ ಸೌಹಾರ್ದಯುತ ಸಮಾರಂಭಗಳನ್ನು ಏರ್ಪಡಿಸಬೇಕು. ಬನ್ನಿ ರಾಗಿಂಗ್ ಓಡಿಸೋಣ – ಕ್ಯಾಂಪಸ್‌ಗಳನ್ನು ಆರೋಗ್ಯಕರವಾಗಿ ರೂಪಿಸೋಣ. – ಡಾ| ಎಸ್.ಬಿ.ಜೋಗುರ