Advertisement

ರಾಗಿ ಬೀಸಿ, ಭತ್ತ ಕುಟ್ಟಿದ ಮಕ್ಕಳು

12:26 PM Nov 18, 2018 | |

ಬೆಂಗಳೂರು: ಅಲ್ಲಿ ಕಾಂಕ್ರೀಟ್‌ ಕಾಡಿನಲ್ಲಿ ಮರೆಯಾಗುತ್ತಿರುವ ದೇಶಿ ಸೊಗಡು ಮೇಳೈಸಿತ್ತು. ಹಳ್ಳಿಯಲ್ಲಿ ಕಾಗೆ ಓಡಿಸಲು ಬಳಕೆ ಮಾಡುವ ಚಾಟಿ ಬಿಲ್ಲು ವಿದ್ಯೆ, ಹಸುಕರುವಿನ ಹಾಲು ಕರೆಯುವ ಸಂಸ್ಕೃತಿ. ಎತ್ತಿನಗಾಡಿನ ಓಟ, ಬಣ್ಣದ ಬುಗರಿ ಜತೆ ಗೋಲಿಯಾಟ.., ಹೀಗೆ ಹತ್ತಾರು ಬಗೆಯ ಜನಪದ ಆಟಗಳು ಹಳ್ಳಿಗಾಡಿನ ನೂರಾರು ಹಸಿರು ನೆನಪುಗಳನ್ನು ತೆರದಿಟ್ಟವು.

Advertisement

ಕಾಂಕ್ರೀಟ್‌ ಕಾಡಿನಲ್ಲಿ ಬೆಂದು ಹೋಗಿರುವ ಪುಟಾಣಿ ಮಕ್ಕಳಿಗೆ ಹಳ್ಳಿಯ ಆಟಗಳು ಖುಷಿಕೊಟ್ಟರೆ, ಅತ್ತ ಮಕ್ಕಳ ಪೋಷಕರಿಗೆ ತಾವಾಡಿದ ಆಟಗಳು ಮತ್ತೆ ಮನದಲ್ಲಿ ಸುಳಿದು, ಹಳ್ಳಿಯ ಹಳೆ ನೆನಪಿನ ಜೋಕಾಲಿಯಲ್ಲಿ ತೇಲಿಸಿದವು.ನಗರದ ಮಲ್ಯರಸ್ತೆಯ ಸೆಂಟ್‌ ಜೋಸೆಫ್ ಶಾಲೆ (ಸಿಬಿಎಸ್‌ಇ) ಶನಿವಾರ “ಆಟ-ಊಟ-ನೋಟ’ ಶೀರ್ಷಿಕೆಯಡಿ ಹಮ್ಮಿಕೊಂಡಿದ್ದ “ಹಳ್ಳಿ ಹಬ್ಬ’ ಕಾರ್ಯಕ್ರಮದಲ್ಲಿ ಹಳ್ಳಿಗಾಡಿನ ಪಡಸಾಲೆಯಲ್ಲಿ ಕಾಣುತ್ತಿದ್ದ ವಾತಾವರಣ ಸೃಷ್ಟಿಯಾಗಿತ್ತು.

ಹೊಸಕೋಟೆಯ ವಿದ್ಯಾರಣ್ಯ ಸಂಸ್ಥೆಯ ಅನ್ನಪೂರ್ಣಮ್ಮ ಅವರು, ಕೈಯಲ್ಲಿ ಓನಕೆ ಹಿಡಿದು ರಾಗಿ ಬೀಸುವ ಮತ್ತು ಭತ್ತ ಕುಟ್ಟುವ ಪದ್ಧತಿಯನ್ನು ವಿದ್ಯಾರ್ಥಿಗಳಿಗೆ ಹೇಳಿಕೊಟ್ಟರು. ಕುತೂಹಲಗೊಂಡ ಸೆಂಟ್‌ ಜೋಸೆಫ್ ಶಾಲೆಯ ಪುಟಾಣಿಗಳು ಕೂಡಲೇ ರಾಗಿ ಕಲ್ಲಿನಲ್ಲಿ ರಾಗಿ ಹಾಕಿ ಬೀಸಿದರು. ಕ್ಷಣ ಮಾತ್ರದಲ್ಲಿ ರಾಗಿ ಹಿಟ್ಟಿನ ರೂಪದಲ್ಲಿ ಹೊರಬರುತ್ತಿದ್ದಂತೆ ಅವರ ಆನಂದಕ್ಕೆ ಪಾರವೇ ಇರಲಿಲ್ಲ.

ಈ ಖುಷಿಯಲ್ಲೇ ಮಜ್ಜಿಗೆ ಕಡೆಯುವ ಕೇಂದ್ರಕ್ಕೂ ಭೇಟಿ ನೀಡಿದ ಪುಟಾಣಿಗಳು ಮೊಸರಿನಿಂದ ಹಳ್ಳಿಯಲ್ಲಿ ಹೇಗೆ ಮಜ್ಜಿಗೆ ಕಡೆಯುತ್ತಾರೆ ಎಂಬುವುದನ್ನು ನೋಡಿ ಆನಂದಿಸಿದರು. ಗದಮಟ್ಟೆ ಆಟದಲ್ಲಿ ಪೋಷಕರು ಮಕ್ಕಳೊಂದಿಗೆ ಆಡಿ ಖುಷಿಪಟ್ಟರೆ, ಕುಂಟುಬಿಲ್ಲೆಯಾಟದಲ್ಲಿ ವಿದ್ಯಾರ್ಥಿನಿಯರು ಸ್ನೇಹಿತರೊಡಗೂಡಿ ಆ ಮಣೆೆ, ಈ ಮಣೆ ಕಡೆ ಜಿಗಿದು ನಲಿದರು. ಕೆಲವು ಪುಟಾಣಿಗಳು ತೆಂಗಿನ ಗರಿಯಿಂದ ಮಾಡಿದ ಪೀಪಿ ಊದಿ, ವಾಚ್‌ ಕಟ್ಟಿ ಸಂಭ್ರಮಿಸಿದರು. ಇನ್ನೂ ಹಲವು ಮಕ್ಕಳು ಕೈಲಿಯಲ್ಲಿ ಹಗ್ಗ ಹಿಡಿದು ಬುಗುರಿ ಸುತ್ತುವುದರಲ್ಲಿ ಮಗ್ನರಾಗಿದ್ದರು.

ಹಳ್ಳಿಯ ಸಂಸ್ಕೃತಿಯನ್ನು ನೆನಪಿಸಲು ಸಲುವಾಗಿಯೇ ಪುಟ್ಟ ಗುಡಿಸಲುಗಳನ್ನು ತೆರೆಯಲಾಗಿತ್ತು. ಈ ಗುಡಿಸಲಿನಲ್ಲಿ ಹಳ್ಳಿಯಾಟದ ವಿದ್ಯೆ ಹೇಳುವ ಕೆಲಸ ಸಾಗಿತ್ತು. ಹೀಗಾಗಿ, ಬೆಳಗ್ಗಿನಿಂದ ಸಂಜೆ ವರೆಗೆ ವಿದ್ಯಾರ್ಥಿಗಳು ಪಗಡೆ, ಗೋಲಿ, ಚಿನ್ನಿಮಣೆ ಸೇರಿದಂತೆ ಹಲವು ರೀತಿಯ ಆಟಗಳನ್ನು ಬೆಳಗ್ಗೆಯಿಂದ ಸಂಜೆ ವರೆಗೂ ಆಡಿ ಸಂಭ್ರಮಿಸಿದರು. ಬೊಂಬೆ ಕುಣಿತ, ಡೊಳ್ಳು ಕುಣಿತಗಳಿಗೆ ಹೆಜ್ಜೆ ಹಾಕಿದರು.

Advertisement

“ಉದಯವಾಣಿ’ಯೊಂದಿಗೆ ಮಾತನಾಡಿದ ಸೆಂಟ್‌ ಜೋಸೆಫ್ ಶಾಲೆಯ ವಿದ್ಯಾರ್ಥಿ ನಿಹಾಲ್‌, ಸಿಟಿಯಲ್ಲಿ ಅಪ್ಪ -ಅಮ್ಮ ವಾಸವಾಗಿದ್ದರಿಂದ ಹಳ್ಳಿಯ ಆಟ ಮತ್ತು ಸಂಸ್ಕೃತಿಯ ಬಗ್ಗೆ  ಅಷ್ಟೊಂದು ತಿಳಿವಳಿಕೆ ಇಲ್ಲ. ಆದರೆ, ಹಳ್ಳಿಹಬ್ಬವು ಹಳ್ಳಿಯ ಸೊಗಡನ್ನು ಪರಿಚಯಿಸಿತು ಎಂದು ಖುಷಿಪಟ್ಟರು. ಹಾಸನ ಮೂಲದ ವಿದ್ಯಾರ್ಥಿ ಪೋಷಕರೊಬ್ಬರು ಪ್ರತಿಕ್ರಿಯಿಸಿ, ಹಳ್ಳಿಯಲ್ಲಿದ್ದಾಗ ಇಂತಹ ಆಟಗಳನ್ನು ಆಡಿದ್ದೆ. ಆದರೆ, ಉದ್ಯೋಗಕ್ಕಾಗಿ ಬೆಂಗಳೂರಿಗೆ ಸೇರಿಕೊಂಡಾಗ ಜನಪದ ಆಟ ಸೇರಿದಂತೆ ಎಲ್ಲವು ಮರೆತು ಹೋಗಿತ್ತು. ಈಗ ಮತ್ತೆ ಹಳ್ಳಿ ನೆನಪಾಗುತ್ತಿದೆ ಎಂದರು.

ಎತ್ತಿಗಾಡಿನ  ಏರಲು ಪೈಪೋಟಿ: ಎತ್ತಿನಗಾಡಿಯನ್ನು ಏರಲು ಮಕ್ಕಳು ನಾ ಮುಂದು, ತಾ ಮುಂದು ಎಂಬ ರೀತಿಯಲ್ಲಿ ಪೈಪೋಟಿಗೆ ಇಳಿದಿದು,ª ಕಂಡು ಬಂತು. ಎತ್ತಿನಗಾಡಿ ಸವಾರಿಗಾಗಿಯೇ ಸೆಂಟ್‌ ಜೋಸೆಫ್ ಶಾಲೆಯ ಆಡಳಿತ ಮಂಡಳಿ ವಿಶೇಷ ವ್ಯವಸ್ಥೆ ಮಾಡಿತ್ತು. ಗ್ರಾಮೀಣ ಪ್ರದೇಶದಲ್ಲಿ ಇನ್ನೂ ಜೀವಂತವಾಗಿರುವ ಮಡಕೆ ಮಾಡುವ ಪದ್ಧತಿಯನ್ನು ಮಕ್ಕಳಿಗೆ ತಿಳಿಸಿ ಹೇಳುವ ಕಾರ್ಯ ಕೂಡ ನಡೆದಿತ್ತು. ಗುಂಪು ಗುಂಪಾಗಿ ಮಕ್ಕಳು ಮಡಕೆ ಮಾಡುವ ಪದ್ಧತಿಯನ್ನು ಗಮನಿಸುತ್ತಿದ್ದ ದೃಶ್ಯ ಕಂಡು ಬಂತು.

ನಗರ ದಿನೇ ದಿನೆ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ಹಳ್ಳಿಯ ಸೊಗಡು ಮರೆಯಾಗುತ್ತಿದೆ. ಮತ್ತೆ ಹಳ್ಳಿಯತ್ತ ಜನರು ಮುಖ ಮಾಡಲಿ ಎಂಬ ಕಾರಣಕ್ಕಾಗಿ ಹಳ್ಳಿ ಹಬ್ಬ ಕಾರ್ಯಕ್ರಮವನ್ನು  ಹಮ್ಮಿಕೊಳ್ಳಲಾಗಿದೆ.
-ಫಾದರ್‌ ಸುನಿಲ್‌ ಫ‌ರ್ನಾಂಡೀಸ್‌, ಪ್ರಾಚಾರ್ಯರು ಸೆಂಟ್‌ ಜೋಸೆಫ್ ಶಾಲೆ.

Advertisement

Udayavani is now on Telegram. Click here to join our channel and stay updated with the latest news.

Next