Advertisement

ಕೈಕೊಟ್ಟ ಮಳೆ: ನಾಶದತ್ತ ರಾಗಿ ಪೈರು

06:10 PM Sep 14, 2021 | Team Udayavani |

ತಿಪಟೂರು: ತಾಲೂಕಿನಲ್ಲಿ ರಾಗಿ ಬಿತ್ತನೆ ಸಮಯದಲ್ಲಿ ಉತ್ತಮ ಮಳೆಯಾದ ಪರಿಣಾಮ ಈ ಬಾರಿ ರಾಗಿಯನ್ನು ಹೆಚ್ಚಾಗಿ ಬಿತ್ತನೆ ಮಾಡಲಾಗಿದೆ. ಈಗ ಮಳೆರಾಯ ಕೈಕೊಟ್ಟಿರುವುದರಿಂದ ಬೆಳೆ ಒಣಗುತ್ತಿದ್ದು, ರೈತರು ಮಳೆಗಾಗಿ ನಿತ್ಯವೂ ಆಕಾಶ ನೋಡುವಂತಾಗಿದೆ.

Advertisement

ಈ ವರ್ಷ ತಾಲೂಕಿಗೆ ಉತ್ತಮ ಮಳೆ ಬಾರದ ಕಾರಣ ಬರಗಾಲದ ಆತಂಕ ಎದುರಾಗಿದ್ದು, ರೈತರು ಚಿಂತೆಗೀಡಾಗುವಂತಾಗಿದೆ. ಮಳೆಗಾಲ
ಆರಂಭವಾದಗಿನಿಂದಲೂ ತಾಲೂಕಿನ ನೊಣವಿನಕೆರೆ ಹೋಬಳಿ ಭಾಗಕ್ಕೆ ತುಸು ಮಳೆಯಾಗಿರುವುದು ಬಿಟ್ಟರೆ, ಉಳಿದಂತೆ ಕಸಬಾ, ಹೊನ್ನವಳ್ಳಿ ಮತ್ತು ಕಿಬ್ಬನಹಳ್ಳಿ ಹೋಬಳಿಗಳಿಗೆ ಮಳೆಯಾಗದೇ ಬರಗಾಲ ಆವರಿಸಿದೆ.

ರೈತರಿಗೆ ಆತಂಕ: ಖುಷ್ಕಿ ಬೆಳೆಗಳಾದ ರಾಗಿ, ಅವರೆ, ಹೆಸರು, ಉದ್ದು ಸೇರಿದಂತೆ ಯಾವುದೇ ಬೆಳೆಗಳನ್ನು ಬೆಳೆಯದಂತ ಪರಿಸ್ಥಿತಿ ಬಂದಿದ್ದು, ರೈತರು ಆತಂಕದಲ್ಲಿದ್ದಾರೆ. ಆದರೆ, ಅಲ್ಪಸ್ವಲ್ಪ ಬಿದ್ದಿದ್ದ ಸೋನೆ ಮಳೆಗೆ ರೈತರು ಸಾಲಸೂಲ ಮಾಡಿಕೊಂಡು ಒಣಭೂಮಿಗೆ ರಾಗಿ ಮತ್ತಿತರೆ ಬೆಳೆಗಳನ್ನು ಬಿತ್ತಿದ್ದರು. ಆದರೆ, ಆಗಾಗ್ಗೆ ಹನಿಯುತ್ತಿದ್ದ ಸೋನೆ ಮಳೆಗೆ ಪೈರು ಹಚ್ಚ ಹಸಿರಾಗಿ ಬೆಳೆಯುತ್ತಿತ್ತು. ಈಗ ಮಳೆರಾಯ ಸಂಪೂರ್ಣ ಕೈಕೊಟ್ಟ ಪರಿಣಾಮ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಹಸಿರಾಗಿದ್ದ ಪೈರು ಒಣಗುತ್ತಿದೆ: ಇನ್ನೇನು ರಾಗಿ ಹೂವಾಗಿ, ತೆನೆಯಾಗುವ ಈ ಹಂತದಲ್ಲಿ ಮಳೆ ಹೆಚ್ಚು ಬೇಕಾಗಿದ್ದು, ಮಳೆಯೇ ಬರುತ್ತಿಲ್ಲ. ಅದರ ಬದಲು ವಿಪರೀತ ಗಾಳಿ, ಬಿಸಿಲು ಪ್ರಾರಂಭವಾಗಿದ್ದು, ಹಸಿರಾಗಿದ್ದ ಪೈರುಗಳು ಬತ್ತಿ ಒಣಗಲು ಆರಂಭಿಸಿದೆ. ಈ ಭಾಗದಲ್ಲಿ ವಾಣಿಜ್ಯ ಬೆಳೆ ತೆಂಗು ಬಿಟ್ಟರೆ, ರಾಗಿಯೇ ಪ್ರಮುಖ ಬೆಳೆಯಾಗಿದೆ. ಹೀಗಾಗಿ ರಾಗಿ ಸಂಪೂರ್ಣ ಒಣಗಿ ಹೋಗುತ್ತಿರುವುದರಿಂದ ರೈತರಿಗೆ ದಿಕ್ಕು ತೋಚದಂತಾಗಿದೆ.

ಇದನ್ನೂ ಓದಿ:ಚಿಕ್ಕಮಗಳೂರು : 40 ವರ್ಷಗಳಿಂದ ಈ ರಸ್ತೆಗೆ ದುರಸ್ತಿ ಭಾಗ್ಯವೇ ಸಿಕ್ಕಿಲ್ಲ

Advertisement

ಕೃಷಿ ಕಾಯಕಕ್ಕೆ ಹೊಡೆತ: ಕೃಷಿ ಯಾವತ್ತೂ ಲಾಭದಾಯಕವಾಗಲಾರದು ಎಂಬುದನ್ನು ರಾಗಿ ಬೆಳೆ ಮತ್ತೆ ಮತ್ತೆ ಸಾಬೀತುಪಡಿಸುತ್ತಿರುವುದು ನೋಡಿದರೆ, ಈಗಾಗಲೇ ಅಳಿವಿನಂಚಿನಲ್ಲಿರುವ ಕೃಷಿ ಕಾಯಕಕ್ಕೆ ಮತ್ತಷ್ಟು ಹೊಡೆತ ಬೀಳುವ ಆತಂಕ ಕಾಡುತ್ತಿದೆ. ಸಾವಿರಾರು ರೂಪಾಯಿ
ಸಾಲ ತಂದು ದುಬಾರಿ ಕೃಷಿ ವೆಚ್ಚದೊಂದಿಗೆ ಉಳುಮೆ ಮಾಡಿ, ಬೀಜ- ಗೊಬ್ಬರ ಖರೀದಿಸಿ ಹಗಲಿರುಳು ಜೋಪಾನ ಮಾಡಿದ್ದ ತಾಲೂಕಿನ ಜನ-ಜಾನುವಾರುಗಳ ಪ್ರಮುಖ ರಾಗಿ ಬೆಳೆ, ಈ ವರ್ಷವೂ ಕೈಕೊಟ್ಟಿರುವುದು ರೈತನ ಭವಿಷ್ಯಕ್ಕೆ ಕೃಷಿ ಯಾವತ್ತೂ ಲಾಭದಾಯಕವಲ್ಲ ಅನ್ನುವುದನ್ನು ನಿಜ ಮಾಡುತ್ತಿದೆ.

ಮಳೆ, ಮೋಡಗಳ ಚಲ್ಲಾಟ: ಒಂದೆರಡು ತಿಂಗಳುಗಳಿಂದಲೂ ಮಳೆ, ಮೋಡಗಳುರೈತರ ಜೊತೆ ಒಂದು ರೀತಿಯ ಚಲ್ಲಾಟ ವಾಡುವಂತಿದೆ. ನಿತ್ಯವೂ ಮೋಡ, ಭೂಮಿಗೆ ಬೀಳಲೋ ಬೇಡವೋ ಎಂದು ಸಣ್ಣಗೆ ಉದುರುವ ಮಳೆ ಹನಿಗಳು ರೈತರ ಪಾಲಿಗೆ ನಿತ್ಯವೂ ನಿರಾಸೆ ತರುತ್ತಿವೆ. ಕೇವಲ ಆಸೆ- ನಿರಾಸೆಗಳನ್ನೇ ಮಳೆ, ಮೋಡಗಳು ಹಾಗೂ ಮಳೆರಾಯ ತೋರುತ್ತಿರುವುದು ತಾಲೂಕಿನ ಜನತೆಗೆ ತೀವ್ರ ನಿರಾಸೆ ತಂದೊಡ್ಡಿದ್ದು, ಪ್ರಮುಖ ರಾಗಿ ಬೆಳೆ ಬತ್ತಿ ಒಣಗುತ್ತಿದೆ

ತಿಪಟೂರು ತಾಲೂಕಿನಲ್ಲಿ 20 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ರಾಗಿ ಬಿತ್ತನೆಯಾಗಿದೆ. ಮಳೆ ಇಲ್ಲದೆ ರಾಗಿ ಒಣಗಲು ಪ್ರಾರಂಭಿಸಿದ್ದು, 3-4 ದಿನಗಳೊಳಗೆ ಮಳೆ ಬಂದರೂ, ರಾಗಿ ಪೈರು ಹಚ್ಚ ಹಸಿರಾಗಲಿದೆ. ರೈತರು ಗೊಬ್ಬರವಾಗಿಯೂರಿಯಾ ನೀಡಿರುವುದರಿಂದ ಮಳೆ ಅವಶ್ಯ ಹೆಚ್ಚಾಗಿದೆ. ಈ ವಾರದೊಳಗೆ ಮಳೆ ಬಾರದಿದ್ದರೆ ಇಳುವರಿಯಲ್ಲಿ ಬಾರಿ ಕುಂಠಿತವಾಗಲಿದೆ.
– ಪೂಜಾ, ಸಹಾಯಕ ಕೃಷಿ
ನಿರ್ದೇಶಕರು, ತಿಪಟೂರು

ಈ ವರ್ಷವೂ ಮಳೆರಾಯ ಕೈಕೊಟ್ಟಿದ್ದು, ರಾಗಿಹೂಬಿಟ್ಟು ತೆನೆಯಾಗುವ ಈ ಹಂತದಲ್ಲೇ ಮಳೆ ಇಲ್ಲದ ಪರಿಣಾಮ ಇತ್ತ ರಾಗಿಯೂ ಇಲ್ಲ. ಅತ್ತ ದನ ಕರುಗಳಿಗೆ ಮೇವುಇಲ್ಲ ಎಂಬಂತಾಗಿದೆ. ರೈತರಿಗೆ ಮೇವು ಮತ್ತು ರಾಗಿಎರಡೂ ಮುಖ್ಯವಾಗಿದ್ದು,ಬರಗಾಲದ ಛಾಯೆ ಆವರಿಸಿದ್ದು,  ರೈತರು ಜೀವನ ನಡೆಸುವುದು ದುಸ್ತರವಾಗಿದೆ.
– ಬಸವರಾಜು, ರೈತ, ನಾಗತೀಹಳ್ಳಿ

-ಬಿ.ರಂಗಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next