Advertisement

Ayodhya Ram Mandir: ರಘುರಾಮನ ಅಯೋಧ್ಯಾಗಮನ; ಶತಶತಮಾನಗಳ ಕಾಯುವಿಕೆಗೆ ಪೂರ್ಣವಿರಾಮ

10:37 AM Jan 22, 2024 | Team Udayavani |

ಜನವರಿ 22 ಇಡೀ ಹಿಂದೂ ಸಮಾಜವೇ ಸಂತಸ ಪಡುವ ಶುಭ ದಿನ. ಅಯೋಧ್ಯೆಯ ಪುಣ್ಯ ಭೂಮಿಯಲ್ಲಿ ಮರ್ಯಾದಾ ಪುರುಷೋತ್ತಮ, ರಘುನಂದನ ಶ್ರೀ ರಾಮಚಂದ್ರನ ಪ್ರಾಣ ಪ್ರತಿಷ್ಠೆಯಾಗುತ್ತಿರುವುದು ಹಿಂದೂ ಬಾಂಧವರಿಗೆ ಸಂಭ್ರಮವಲ್ಲದೆ ಇನ್ನೇನು. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಬೇಕೆಂಬ ಕನಸು ನಿನ್ನೆ ಮೊನ್ನೆಯದ್ದಲ್ಲ. ಶತಮಾನಗಳಿಂದ ರಾಮ ಜನ್ಮಭೂಮಿಯ ಹೋರಾಟದಲ್ಲಿ ಅದೆಷ್ಟೋ ಕರಸೇವಕರು, ರಾಮಭಕ್ತರು ಪ್ರಾಣವನ್ನು ಒತ್ತೆ ಇಟ್ಟು ಹೋರಾಡಿದ್ದಾರೆ. ಅಂದು ಅಯೋಧ್ಯೆಗಾಗಿ ಕರಸೇವಕರ ಹೋರಾಟ ಕೇವಲ ರಾಮನಿಗಾಗಿ ಇತ್ತೇ  ಹೊರತು ತಮ್ಮ ಸ್ವಾರ್ಥಕ್ಕಾಗಲಿ, ರಾಜಕೀಯ ಲಾಭಕ್ಕಾಗಲಿ ಇರಲಿಲ್ಲ. ರಾಮನ ಜನ್ಮಸ್ಥಳವನ್ನು ಪುನಃ ರಾಮನಿಗೆ ದೊರಕಿಸಿಕೊಡುವುದೊಂದೇ ರಾಮ ಭಕ್ತರ ಮೂಲಮಂತ್ರವಾಗಿತ್ತು. ನಿಸ್ವಾರ್ಥ ಭಾವನೆಯಿಂದ ಜೀವವನ್ನು ರಾಮನಿಗೆಂದೇ ಮುಡಿಪಾಗಿಟ್ಟ ಅವರೆಲ್ಲರ ತ್ಯಾಗ ಬಲಿದಾನ ಅವಿಸ್ಮರಣೀಯ. ಇವೆಲ್ಲದರ ಫಲವಾಗಿ ಮತ್ತೆ ರಾಮ ತನ್ನ ಜನ್ಮಭೂಮಿಯಲ್ಲೇ ನೆಲೆಸುವಂತಾಗಿದೆ.

Advertisement

ಹೀಗೆ ಕಳೆದ ಕೆಲ ದಿನಗಳಿಂದ ದೇಶದ ಮೂಲೆ ಮೂಲೆಯಲ್ಲಿ ರಾಮನ ಸ್ಮರಣೆಯನ್ನು ಮಾಡಲಾಗುತ್ತಿದೆ. ಎಲ್ಲೆಲ್ಲೂ ರಾಮ ಮಂತ್ರ. ಪ್ರತಿ ಅಂಗಡಿಯಲ್ಲೂ ರಾಮನ ಚಿತ್ರವಿರುವ ಕೇಸರಿ ಧ್ವಜ. ಬೀಸೋ ಗಾಳಿಗೆ ಮೆಲ್ಲನೆ ಹಾರುವ ಬಾವುಟವನ್ನು ನೋಡಿದರೆ ಮನದಲ್ಲಿ ಏನೋ ಒಂದು ಭಕ್ತಿಯ ಭಾವ. ಎಲ್ಲೆಲ್ಲೂ ರಾಮ್ ಜೈ ಜೈ ರಾಮ್ ಹಾಡುಗಳು. ಹಳ್ಳಿ ಪ್ರದೇಶಗಳಲ್ಲಂತೂ ಸಣ್ಣಸಣ್ಣ ಗೂಡಂಗಡಿಯ ಬಳಿ ಕುಳಿತು ರಾಮ ಮಂದಿರದ ಕುರಿತಾಗಿಯೇ ಚರ್ಚಿಸುತ್ತಿರುವ ಜನರು. ಇನ್ಸ್ಟಾಗ್ರಾಮ್, ಫೇಸ್ ಬುಕ್ ತೆರೆದರೆ ಸಾಕು ಸಾಲು ಸಾಲು ರಾಮನ ಕುರಿತಾದ ವಿಡಿಯೋಗಳು, ವಾಟ್ಸಾಪ್ ನಲ್ಲಂತೂ “ಮೇರೇ ರಾಮ್ ಆಯೇಂಗೆ “, “ಹಮ್ ಕಥಾ ಸುನಾತೆ ” ಪದ್ಯಗಳು. ರಾಮನ ವ್ಯಕ್ತಿತ್ವವೇ ಅಂತಹದ್ದು. ಎಲ್ಲರಿಗೂ ಬೇಗ ಹತ್ತಿರವಾಗಬಲ್ಲ, ಎಲ್ಲರ ಮನಸ್ಸಿನಲ್ಲಿ ಚಿರಕಾಲ ಇರಬಲ್ಲ. ಪ್ರಭು ಶ್ರೀರಾಮನಿಂದ ಕಲಿಯಬೇಕಾದ ಗುಣಗಳು ಸಾಕಷ್ಟಿವೆ. ಗುಣಗಳ ಗಣಿ ಶ್ರೀರಾಮಚಂದ್ರನ ವ್ಯಕ್ತಿತ್ವ ನೋಡಿ ಕಲಿತರೆ ಎಂತಹ ಕಷ್ಟಗಳಿಂದಲೂ ಪಾರಾಗಬಹುದು.

ಕಾಲೇಜಿನಲ್ಲೂ ಹತ್ತು ದಿನಗಳ ಕಾಲ ರಾಮೋತ್ಸವ ಎಂಬ ಸರಣಿ ಕಾರ್ಯಕ್ರಮವನ್ನು ಆಚರಿಸಲಾಗಿತ್ತು. 10 ದಿನ ರಾಮ ಭಜನೆ, ರಾಮತಾರಕ ಮಂತ್ರ ಹಾಗೂ ಪ್ರತಿ ದಿನ ಒಂದೊಂದು ವಿಷಯದ ಕುರಿತಾದ ಪ್ರಸ್ತುತಿ. ಈ ಮೂಲಕ ರಾಮನ ಆದರ್ಶ ಗುಣಗಳ ಬಗ್ಗೆ ಆಳವಾಗಿ ಅರಿವಾಯಿತು. ಈಗ ರಾಮನ ಮಂತ್ರಗಳು ಬಾಯಿ ಪಾಠವಾಗಿಬಿಟ್ಟಿದೆ. ರಾಮ ರಾಮ ಅನ್ನುವ ಎರಡಕ್ಷರವೇ ಮನಸ್ಸಿನಲ್ಲಿ ಉಳಿದಿದೆ.

ಮೊನ್ನೆ ಹೀಗೆ ಕಾಲೇಜಿನಿಂದ ಮನೆಗೆ ಬರುತ್ತಿದ್ದೆ. ಬಸ್ಸಿನಲ್ಲಿ ಕುಳಿತಿದ್ದ ಜನ ತಮ್ಮ ಜಂಗಮವಾಣಿಯನ್ನು ನೋಡುತ್ತಿದ್ದಾಗ ಬರಿ ರಾಮನ ಹಾಡುಗಳೇ ಕಿವಿಯನ್ನಪ್ಪಳಿಸುತ್ತಿದ್ದವು. ಸೀಟ್ ನಲ್ಲಿ ಕುಳಿತಿದ್ದ ವಯಸ್ಕರೊಬ್ಬರು ತನ್ನ ಪಕ್ಕದಲ್ಲಿದ್ದವನಲ್ಲಿ “ಅಂತೂ ಆಯ್ತಪ್ಪ ರಾಮ ಮಂದಿರ. ನಾನು ನನ್ನ ಜೀವನದಲ್ಲಿ ನೋಡುತ್ತೇನೋ ಇಲ್ಲವೋ ಎಂದುಕೊಂಡಿದ್ದೆ. ಕೊನೆಗೂ ರಾಮ ಕಣ್ಬಿಟ್ಟ. ನಮ್ಮ ನಂಬಿಕೆಯನ್ನು ಸುಳ್ಳು ಮಾಡಲಿಲ್ಲ” ಎಂದೆಲ್ಲಾ ಸಂಭ್ರಮದ ನುಡಿಗಳನ್ನಾಡುತ್ತಿದ್ದರು. ಅವರ ಮಾತನ್ನು ಕೇಳಿದ ನನಗೆ, ಆ ಜೀವ ರಾಮಮಂದಿರ ನಿರ್ಮಾಣವಾಗಲು ಎಷ್ಟೊಂದು ಕಾತುರದಿಂದ ಕಾದಿರಬಹುದು ಅನಿಸಿತು.

ಸಂಜೆ ಮನೆಗೆ ಬಂದಾಗ ಅಮ್ಮ ಮನೆ ಕ್ಲೀನ್ ಮಾಡುತ್ತಿದ್ದರು. ಆಸಕ್ತಿಯಿಂದ ಒಂದ್ ಪ್ರಶ್ನೆ ಕೇಳ್ದೆ. “ಏನಮ್ಮಾ ಮನೆ ಕ್ಲೀನ್ ಮಾಡ್ತಾ ಇದ್ದೀರಾ? ನನ್ಗೆ ಹೇಳದೆ ಏನಾದ್ರು ಸ್ಪೆಷಲ್ ಇದ್ಯಾ” ಅಂತ. ಅದಕ್ಕೆ ಅಮ್ಮ “ಸ್ಪೆಷಲ್ ಏನಿಲ್ಲ. ರಾಮ ಮಂದಿರದಲ್ಲಿ ರಾಮನ ಪ್ರಾಣ ಪ್ರತಿಷ್ಠೆಯಾಗ್ತಿದೆ. ಮಂತ್ರಾಕ್ಷತೆ ಮನೆ ಮನೆಗೆ ಬರ್ತಿದೆ. ಅದರ ಜೊತೆ ರಾಮನೂ ಬರಬಹುದು. ಮನೆ ಗಲೀಜು ಆಗಿದ್ದರೆ ರಾಮ ಹೇಗಮ್ಮ ಒಳಗೆ ಬರ್ತಾನೆ” ಎಂದರು. ಅಮ್ಮನಿಗೆ ರಾಮನ ಬಗೆಗಿರುವ ಮುಗ್ಧ ಭಕ್ತಿ ಅವಳ ಮಾತಿನಲ್ಲಿ ಕಾಣಿಸ್ತು. ಒಂದು ವಾರ ಮುಂಚೆನೇ ಜನವರಿ 22ಕ್ಕೆ ಉಪವಾಸ ಮಾಡಬೇಕೆಂದು ಹೇಳಿದ್ದರು. ಇದೆಲ್ಲಾ ನೋಡಿ ಓರ್ವ ಜನಸಾಮಾನ್ಯನ ಮೇಲೆ ರಾಮನ ವ್ಯಕ್ತಿತ್ವ ಎಷ್ಟು ಪ್ರಭಾವ ಬೀರಿರಬಹುದು ಅನಿಸಿತು.

Advertisement

ಎಲ್ಲಾ ಹಿಂದೂ ಬಾಂಧವರ ಆಶಯಯಂತೆ ಇಂದು ರಾಮ ಜನ್ಮಭೂಮಿಯಲ್ಲಿ  ರಾಮ ಮಂದಿರ ನಿರ್ಮಾಣವಾಗಿದೆ. ರಾಮ ಭಕ್ತರ ಕಾಯುವಿಕೆಗೆ ಪೂರ್ಣವಿರಾಮ ದೊರೆತಿದೆ. ಪುಣ್ಯ ಭೂಮಿಯಲ್ಲಿ ಅರುಣ್ ಯೋಗಿರಾಜ್ ಕೆತ್ತನೆಯ ರಾಮಲಲ್ಲಾನ ಮೂರ್ತಿ ತಲೆ ಎತ್ತಿದೆ. ಅಯೋಧ್ಯೆಯಲ್ಲಿ ಸಾಲು ಸಾಲು ದೀಪಗಳು ಪ್ರಜ್ವಲಿಸಿದೆ. ಪ್ರಭು ಶ್ರೀರಾಮ ಎಲ್ಲರಿಗೂ ಒಳಿತನ್ನು ಮಾಡಲಿ. ಧರ್ಮದ ರಕ್ಷಣೆಯನ್ನು ಮಾಡಲಿ. ಜೈ ಶ್ರೀ ರಾಮ್….

ಲಾವಣ್ಯ. ಎಸ್.

ದ್ವಿತೀಯ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗ

ವಿವೇಕಾನಂದ ಸ್ವಾಯತ್ತ ಕಾಲೇಜು ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next