Advertisement

ಮಹಿಳೆಯರು, ಸಾಮಾನ್ಯ ಜನರಿಗೆ ಸಣ್ಣ ಸಾಲ : ಶಾಸಕ ಕೆ.ರಘುಪತಿ ಭಟ್‌ ಸಲಹೆ

05:15 PM Oct 27, 2021 | Team Udayavani |

ಉಡುಪಿ : ಮಹಿಳೆಯರು, ಸಾಮಾನ್ಯ ವ್ಯಕ್ತಿಗಳಿಗೆ ಸಣ್ಣ ಸಣ್ಣ ಮೊತ್ತದ ಸಾಲವನ್ನು ವಿತರಿಸಬೇಕು. ಇವರು ಪ್ರಾಮಾಣಿಕರಾಗಿ ಸಾಲವನ್ನು ಹಿಂದಿರುಗಿಸುತ್ತಾರೆ. ಪ್ರಾಮಾಣಿಕವಾಗಿ ಸಾಲವನ್ನು ಬಳಸುವ ಗ್ರಾಹಕರಿಗೆ ಬ್ಯಾಂಕ್‌ ಅಧಿಕಾರಿಗಳು ಪ್ರೋತ್ಸಾಹ ನೀಡಬೇಕು. ಬ್ಯಾಂಕ್‌ ಮತ್ತು ಗ್ರಾಹಕರು ತಮ್ಮ ಪಾಲಿನ ಕರ್ತವ್ಯ ಪಾಲಿಸಿದರೆ ಮಾತ್ರ ಸಮಾಜದಲ್ಲಿ ಆರ್ಥಿಕ ಶಿಸ್ತು ಉಳಿಯುತ್ತದೆ ಎಂದು ಶಾಸಕ ಕೆ.ರಘುಪತಿ ಭಟ್‌ ಅಭಿಪ್ರಾಯಪಟ್ಟರು.

Advertisement

ಕೆನರಾ ಬ್ಯಾಂಕ್‌ ಜಿಲ್ಲಾ ಲೀಡ್‌ ಬ್ಯಾಂಕ್‌ ಕಚೇರಿ ಜಿಲ್ಲೆಯ ವಿವಿಧ ಬ್ಯಾಂಕ್‌ಗಳ ಸಹಭಾಗಿತ್ವದಲ್ಲಿ ಕೇಂದ್ರ ಸರಕಾರದ ವಿತ್ತೀಯ ವಿಭಾಗದ ಮಾರ್ಗದರ್ಶನದಲ್ಲಿ ಮಣಿಪಾಲದ ಸಿಂಡಿಕೇಟ್‌ ಬ್ಯಾಂಕ್‌ ಗೋಲ್ಡನ್‌ ಜುಬಿಲಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ ಬೃಹತ್‌ ಸಾಲ ಸಂಪರ್ಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅ. 13ರಿಂದ 27ರ ವರೆಗೆ ಮಂಜೂರು ಮಾಡಿದ 158 ಕೋ.ರೂ. ಸಾಲದ ಮಂಜೂರಾತಿ ಪತ್ರವನ್ನು ಭಟ್‌ ಸಾಂಕೇತಿಕವಾಗಿ ವಿವರಿಸಿದರು. ಇನ್ನೂ ಮೂರು ದಿನ ಈ ಆಂದೋಲನ ಮುಂದುವರಿಯಲಿದೆ.

ಕೊರೊನಾ ಕಾಲಘಟ್ಟದಲ್ಲಿ ಆರ್ಥಿಕ ಹೊಡೆತವನ್ನು ಅನುಭವಿಸಿದ್ದೇವೆ. ಕೇಂದ್ರ ಸರಕಾರದ ವಿತ್ತ ಸಚಿವಾಲಯ ಬಡ್ಡಿ ರಿಯಾಯಿತಿ, ಸಾಲ ಪುನಾರೂಪಣೆ, ಕೋವಿಡ್‌ ಸಾಲ ಹೀಗೆ ವಿವಿಧ ರೀತಿಯ ಸವಲತ್ತುಗಳನ್ನು ಘೋಷಿಸಿದ ಕಾರಣ ಜಗತ್ತಿನ ವಿವಿಧ ರಾಷ್ಟ್ರಗಳಿಗೆ ಹೋಲಿಸಿದರೆ ನಮ್ಮ ದೇಶ ಎಷ್ಟೋ ಪಟ್ಟು ಉತ್ತಮ ಸ್ಥಿತಿಯಲ್ಲಿದೆ. ಬ್ಯಾಂಕಿಂಗ್‌ ಕ್ಷೇತ್ರ ಗಟ್ಟಿಯಾದಷ್ಟೂ ಆರ್ಥಿಕತೆ ಗಟ್ಟಿಯಾಗಿರುತ್ತದೆ. ಗ್ರಾಹಕರು ಸೊರಗಿದರೂ ಬ್ಯಾಂಕಿಂಗ್‌ ಕ್ಷೇತ್ರಕ್ಕೆ ಹೊಡೆತವಿದೆ. ಇವೆಲ್ಲವೂ ಒಂದಕ್ಕೊಂದು ಸರಪಣಿ ಇದ್ದಂತೆ ಎಂದು ಭಟ್‌ ಹೇಳಿದರು.

ಮಹಿಳಾ ಸ್ವಸಹಾಯ ಗುಂಪುಗಳಿಗೆ ಕೊಟ್ಟ ಸಾಲ ಶೇ.99ರಷ್ಟು ಮರುಪಾವತಿಯಾಗುತ್ತದೆ ಎನ್ನುವುದು ನಮ್ಮ ಅನುಭವ ಎಂದು ಹೇಳಿದ ಭಟ್‌, ಸರಕಾರಿ ವ್ಯವಸ್ಥೆಯ ಹಣಕಾಸು ಸಂಸ್ಥೆಯಲ್ಲಿ ತನಗೆ ಆದ ಕಹಿ ಅನುಭವವನ್ನು ಹೊರಗೆಡಹಿದರು.

Advertisement

ಇದನ್ನೂ ಓದಿ : ಊಟಕ್ಕಾಗಿ 1ಕಿ.ಮೀ ನಡೆಯುತ್ತಿದ್ದ ಮಕ್ಕಳು: ಕೊನೆಗೂ ಬಂತು ಬಿಸಿಯೂಟ

ಅಧ್ಯಕ್ಷತೆಯನ್ನು ಕೆನರಾ ಬ್ಯಾಂಕ್‌ ಮಣಿಪಾಲ ವೃತ್ತ ಕಚೇರಿಯ ಮಹಾಪ್ರಬಂಧಕ ರಾಮ ನಾಯ್ಕ ವಹಿಸಿದ್ದರು. ವಿವಿಧ ಬ್ಯಾಂಕುಗಳ ಪ್ರಾದೇಶಿಕ ಮುಖ್ಯಸ್ಥರಾದ ಕೆನರಾ ಬ್ಯಾಂಕ್‌ನ ಲೀನಾ ಪಿಂಟೋ, ಬ್ಯಾಂಕ್‌ ಆಫ್ ಬರೋಡಾದ ರವಿ ಎಚ್‌.ಜಿ., ಯೂನಿಯನ್‌ ಬ್ಯಾಂಕ್‌ ಆಫ್ ಇಂಡಿಯಾದ ಡಾ|ವಾಸಪ್ಪ ಎಚ್‌.ಟಿ., ಭಾರತೀಯ ಸ್ಟೇಟ್‌ ಬ್ಯಾಂಕ್‌ನ ತರುಣ್‌ ಪಾಯಿದೆ, ಕರ್ಣಾಟಕ ಬ್ಯಾಂಕ್‌ನ ರಾಜಗೋಪಾಲ್‌, ಕರ್ನಾಟಕ ವಿಕಾಸ್‌ ಗ್ರಾಮೀಣ ಬ್ಯಾಂಕ್‌ನ ಸೂರ್ಯನಾರಾಯಣ ಉಪಸ್ಥಿತರಿದ್ದರು. ನಬಾರ್ಡ್‌ ಜಿಲ್ಲಾ ಅಭಿವೃದ್ಧಿ ಪ್ರಬಂಧಕಿ ಸಂಗೀತಾ ಕರ್ತ ಅವರು ಸಿದ್ಧಪಡಿಸಿದ ನಬಾರ್ಡ್‌ ಸಾಲ ಯೋಜನೆಯನ್ನು ಭಟ್‌ ಬಿಡುಗಡೆಗೊಳಿಸಿದರು. ಜಿಲ್ಲಾ ಅಗ್ರಣಿ ಬ್ಯಾಂಕ್‌ ಪ್ರಬಂಧಕ ಪಿ.ಎಂ.ಪಿಂಜಾರ್‌ ಸ್ವಾಗತಿಸಿ ಕೆನರಾ ಬ್ಯಾಂಕ್‌ ಪ್ರಾದೇಶಿಕ ಕಚೇರಿ 2ರ ಮುಖ್ಯಸ್ಥ ಕಾಳಿ ಕೆ. ವಂದಿಸಿದರು. ಕೆನರಾ ಬ್ಯಾಂಕ್‌ ಆರ್‌ಸೆಟಿ ಉಪನ್ಯಾಸಕಿ ಶ್ರೇಯಾ ಕಾರ್ಯಕ್ರಮ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next