Advertisement

ರಘುನಂದನ ಭಟ್‌, ಬಾಲಚಂದ್ರ ಪ್ರಭುಗೆ ಸ್ವರ ಪ್ರತಿಭಾ ಪ್ರಶಸ್ತಿ 

08:15 AM Feb 09, 2018 | Team Udayavani |

ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತದ ಯುವ ಗಾಯಕರಾದ ಬಿ.ರಘುನಂದನ ಭಟ್‌ ಮತ್ತು ಮೂರ್ಜೆ ಬಾಲಚಂದ್ರ ಪ್ರಭು ಅವರಿಗೆ ಇತ್ತೀಚೆಗೆ ಕಾಶೀ ಮಠಾಧೀಶ ಶ್ರೀಮತ್‌ ಸಂಯಮೀಂದ್ರ ತೀರ್ಥ ಶ್ರೀಪಾದರು “ಸ್ವರ ಪ್ರತಿಭಾ’ ಪ್ರಶಸ್ತಿ ನೀಡಿ ಹರಸಿದ್ದಾರೆ. 

Advertisement

ರಘುನಂದನ ಭಟ್‌ 
ಬ್ರಹ್ಮಾವರದ ಬಿ. ದಾಮೋದರ ಭಟ್‌ ಮತ್ತು ರೇವತಿ ದಂಪತಿಯ ಪುತ್ರನಾಗಿರುವ ರಘುನಂದನ ಭಟ್‌ ಪ್ರಸ್ತುತ ಬೆಂಗಳೂರು ವಾಸಿಯಾಗಿದ್ದಾರೆ.ಮೈಕ್ರೋಬಯಲಾಜಿ ಪದವೀಧರರಾದ ಬಳಿಕ ಕೆಲ ಕಾಲ ಉದ್ಯೋಗ ಮಾಡಿದರೂ ಸಂಗೀತದ ಆಕರ್ಷಣೆಯಿಂದಾಗಿ ಅನಂತರ ನೌಕರಿ ಬಿಟ್ಟು ಪೂರ್ತಿಯಾಗಿ ಸಂಗೀತದಲ್ಲಿ ತೊಡಗಿಸಿಕೊಂಡಿದ್ದಾರೆ. ಕಂಪ್ಲ ಶ್ರೀಪಾದ ಭಟ್‌ ಅವರ ಸಂಗೀತ ಗುರುಗಳು. ಎಳೆ ಹರೆಯದಲ್ಲೇ ಸಂಗೀತದತ್ತ ಆಕರ್ಷಿತರಾಗಿದ್ದ ರಘುನಂದನ ಭಟ್‌ ಹಿಂದುಸ್ಥಾನಿ ಸಂಗೀತದ ಹಲವು ಕ್ಲಿಷ್ಟ ರಾಗಗಳನ್ನು ಕರಗತ ಮಾಡಿಕೊಂಡು ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ತನ್ನದೇ ಛಾಪು ಒತ್ತಿದ್ದಾರೆ. ಪಂ| ರಾಮ ನಾಯಕ್‌ ಗೋವಾ ಮತ್ತು ಅನಂತ್‌ ಭಾಗವತರ ಬಳಿಯೂ ಸಂಗೀತ ಕಲಿತಿದ್ದಾರೆ. 

ಅಭಂಗ, ದಾಸರ ಪದ, ತತ್ವ ಪದ, ಭಾವಗೀತೆ, ಜುಗಲ್‌ ಬಂದಿ, ಸಂಗೀತ ಸಂಯೋಜನೆ, ಗೀತ ರಚನೆ ಹೀಗೆ ಸಂಗೀತದ ಎಲ್ಲ ಕ್ಷೇತ್ರಗಳಲ್ಲಿ ಅವರು ಪರಿಣತರು. ತನ್ನ ಹಾಡಿಗೆ ತಾನೇ ಸಂಗೀತ ಸಂಯೋಜಿಸುತ್ತಾರೆ. ಕಿರಾನ-ಗ್ವಾಲಿಯರ್‌ ಘರಾನ ಮಿಶ್ರಶೈಲಿಯ ಗಾಯನ ಅವರ ವೈಶಿಷ್ಟé. ವಿವಿಧೆಡೆಗಳಲ್ಲಿ ನೂರಾರು ಕಛೇರಿಗಳನ್ನು ನೀಡಿದ್ದಾರೆ ಹಾಗೂ ಹತ್ತಾರು ಧ್ವನಿ ಮುದ್ರಿಕೆಗಳಲ್ಲಿ ಹಾಡಿದ್ದಾರೆ. ಪ್ರಸ್ತುತ ಬೆಂಗಳೂರಿನ “ವಿದ್ಯಾಕ್ಷೇತ್ರ’ ಸಂಗೀತ ಗುರುಕಲದಲ್ಲಿ ಗುರುವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನಾದಸಭಾ ಸಂಗೀತ ಸಭಾದ “ನಾದ ಕಿಶೋರ’, ಮುಂಬಯಿ ಜಿಎಸ್‌ಬಿಯ “ಯಂಗ್‌ ಟ್ಯಾಲೆಂಟ್‌’, ಚೆನ್ನೈ ಅಸೋಸಿಯೇಶನ್‌ನ “ಭಜನ ಭೂಷಣ’, ಚೆನ್ನೈ ಜಿಎಸ್‌ಬಿಯ “ಭಕ್ತಿದಾರ’ ಅವರಿಗೆ ಸಂದಿರುವ ಕೆಲವು ಪ್ರಶಸ್ತಿಗಳು. 

ಬಾಲಚಂದ್ರ ಪ್ರಭು 
ಬೆಳ್ತಂಗಡಿ ಸಮೀಪದ ಮೂರ್ಜೆಯ ಎಂ.ದೇವದಾಸ ಪ್ರಭು -ಲಕ್ಷ್ಮೀ ದಂಪತಿಯ ಪುತ್ರರಾಗಿರುವ ಬಾಲಚಂದ್ರ ಪ್ರಭು ಪ್ರಸ್ತುತ ಮುಂಬಯಿಯಲ್ಲಿ ಕಲಾಸಾಧನೆ ಮಾಡುತ್ತಿದ್ದಾರೆ. ತಂದೆಯೇ ಅವರಿಗೆ ಸಂಗೀತದ ಮೊದಲ ಗುರು. ಬಳಿಕ ಪಂ| ಬಾಲಚಂದ್ರ ನಾಕೋಪ, ಪಂ| ಜಯತೀರ್ಥ ಮೇವುಂಡಿ ಮತ್ತು ಪ| ಶ್ರೀಪತಿ ಪಡಿಗಾರ್‌ ಬಳಿ ಸಂಗೀತಾಭ್ಯಾಸ ಮಾಡಿದರು. 

ಎಂಬಿಎ ಪದವೀಧರರಾದರೂ ಸಂಗೀತ ಕ್ಷೇತ್ರವನ್ನು ಆರಿಸಿಕೊಂಡು ಸಾಧನೆ ಮಾಡುತ್ತಿದ್ದಾರೆ. ಘರಾನ ಕಿರಾನದಂತಹ ಶಾಸ್ತ್ರೀಯ ಗಾಯನದ ಜತೆಗೆ ಆಧುನಿಕ ಸಂಗೀತ ಪರಿಕರಗಳೊಂದಿಗೆ ಶಾಸ್ತ್ರೀಯ ಗಾಯನ ಮಾಡುವ ಫ್ಯೂಶನ್‌ ಮಾದರಿಯಲ್ಲೂ ಸೈ ಎನಿಸಿಕೊಂಡಿದ್ದಾರೆ. ದೇಶ ವಿದೇಶಗಳಲ್ಲಿ ಅನೇಕ ಕಾರ್ಯಕ್ರಮಗಳನ್ನು ನೀಡಿರುವುದಲ್ಲದೆ ಹಲವು ಆಲ್ಬಂಗಳಲ್ಲಿ ಹಾಡಿದ್ದಾರೆ. ಭಾವಗೀತೆ, ದಾಸರ ಪದ, ವಚನಗಳು ಸೇರಿ ಎಲ್ಲ ಪ್ರಕಾರದ ಗಾಯನದ ಜತೆಗೆ ಸಂಗೀತ ಸಂಯೋಜನೆ ಮತ್ತು ನಿರ್ದೇಶನದಲ್ಲೂ ಸಿದ್ಧಹಸ್ತರಾಗಿದ್ದಾರೆ. ಕೇಂದ್ರ ಮತ್ತು ಕರ್ನಾಟಕ ಸರಕಾರದಿಂದ ಸಂಗೀತಕ್ಕಾಗಿ ವಿದ್ಯಾರ್ಥಿ ವೇತನ ಪಡೆದ ಪ್ರತಿಭಾವಂತ. ಚೆನ್ನೈ ಕಾಶೀ ಮಠದ “ಭಕ್ತಿದಾರ’, ಸಾಲಿಗ್ರಾಮ ಶ್ರೀ ರಾಮಕೃಷ್ಣ ಮಠದ ಪುರಸ್ಕಾರ, ಮಂಗಳೂರಿನ ರಾಗಸುಧಾದ ಯುವ ಕಲಾಮಣಿ-2016 ಮತ್ತಿತರ ಪ್ರಶಸ್ತಿ ,ಪುರಸ್ಕಾರಗಳಿಗೆ ಪಾತ್ರರಾಗಿದ್ದಾರೆ. 

Advertisement

ಸಂದೀಪ್‌ ನಾಯಕ್‌ ಸುಜೀರ್‌ 

Advertisement

Udayavani is now on Telegram. Click here to join our channel and stay updated with the latest news.

Next