ಮುಂಬಯಿ: ವಸಾಯಿ ತಾಲೂಕು ಮೊಗವೀರ ಸಂಘದ ವತಿಯಿಂದ ಇತ್ತೀಚೆಗೆ ನಿಧನರಾದ ಸಮಾಜ ಸೇವಕ, ಕೊಡುಗೈದಾನಿ ರಾಘು ಎ. ಸುವರ್ಣ ಅವರಿಗೆ ಶ್ರದ್ಧಾಂಜಲಿ ಸಭೆಯು ಮಾ. 31ರಂದು ಸಂಘದ ಕಚೇರಿಯ ಸಭಾಗೃಹದಲ್ಲಿ ನಡೆಯಿತು.
ವಸಾಯಿ ತಾಲೂಕು ಮೊಗವೀರ ಸಂಘದ ಸ್ಥಾಪಕಾಧ್ಯಕ್ಷ ಚಂದ್ರಶೇಖರ್ ಪುತ್ರನ್ ಇವರು ಮಾತನಾಡಿ, ಸಂಘದ ಪ್ರಾರಂಭದ ದಿನಗಳಿಂದಲೂ ಸಂಘದ ಸ್ಥಾಪನೆಯಲ್ಲೂ ಮುಂದಾಳತ್ವ ವಹಿಸಿ, ಓರ್ವ ದೂರದೃಷ್ಟಿತ್ವದ ಚಿಂತಕರಾಗಿದ್ದ ರಾಘು ಎ. ಸುವರ್ಣ ಅವರ ಅಗಲುವಿಗೆ ಸಂಘಕ್ಕೆ ತುಂಬಲಾರದ ನಷ್ಟವಾಗಿದೆ. ಕೌಶಲ ಚಿಂತನೆಯ ವ್ಯಕ್ತಿಯಾಗಿದ್ದ ಅವರು ಸಂಘದ ಸ್ಥಾಪನೆಗೆ ವಿಶೇಷವಾಗಿ ಮುತುವರ್ಜಿ ವಹಿಸುವ ಮೂಲಕ ಓರ್ವ ಮಹಾನ್ ದಾನಿಯಾಗಿದ್ದರು.
ಮಹಾನಗರದಲ್ಲಿ ಬಂಡವಾಳ ಹೂಡಿ ಉದ್ಯಮವನ್ನು ಸ್ಥಾಪಿಸಲು ಅವಕಾಶ ಇದ್ದರೂ ತಾನು ನಲಸೋಪರದಲ್ಲಿ ಎವರ್‌ಗ್ರೀನ್ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸುವ ಮೂಲಕ ತಾನೋರ್ವ ಶಿಕ್ಷಣಪ್ರೇಮಿ ಎಂಬುದನ್ನು ಸಾಬೀತುಪಡಿಸಿದ್ದಾರೆ. 2010ನೇ ಸಾಲಿನಲ್ಲಿ ಪ್ರಾರಂಭವಾದ ನಮ್ಮ ಸಂಘದ ಪ್ರತಿಯೊಂದು ಕಾರ್ಯಕ್ರಮಗಳಿಗೆ ತುಂಬು ಹೃದಯದಿಂದ ಸಹಕರಿಸುತ್ತಿದ್ದರು. ಅವರ ಸಹಭಾಗಿತ್ವದ ಶಾಲೆಗೆ ಸಂಘದ ಸಹಕಾರ ಸದಾಯಿದೆ. ಮನುಷ್ಯನ ದೇಹ ಯಾವತ್ತೂ ಶಾಶ್ವತವಲ್ಲ. ಅವರ ಒಡನಾಟ, ಸಹಕಾರ, ಮಾರ್ಗದರ್ಶನದ ನೆನಪುಗಳು ನಮ್ಮೊಂದಿಗೆ ಸದಾಯಿರಲಿದೆ ಎಂದು ನುಡಿದು, ಅವರ ಆತ್ಮಕ್ಕೆ ಭಗವಂತ ಚಿರಶಾಂತಿಯನ್ನು ಕರುಣಿಸಲಿ ಎಂದು ನುಡಿದರು.
ಸಂಘದ ಅಧ್ಯಕ್ಷ ವಿನೋದ್ ಕುಂದರ್ ಅವರು ಮಾತನಾಡಿ, ದಿವಂಗತರು ಸಮಾಜದ ಏಳ್ಗೆಗಾಗಿ ಸದಾ ಹಾತೊರೆಯುತ್ತಿದ್ದ ವ್ಯಕ್ತಿಯಾಗಿದ್ದು, ಮೊಗವೀರ ಜನಾಂಗಕ್ಕೆ ಸಹಾಯ ಮಾಡಿದ ಅವರ ಋಣ ತೀರಿಸಲು ನಮ್ಮಿಂದ ಸಾಧ್ಯವಿಲ್ಲ. ಆದರೂ ಅವರ ದುಃಖತಪ್ತ ಕುಟುಂಬದಲ್ಲಿ ನಾವೆಲ್ಲಾ ಭಾಗಿಯಾಗುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ನಂಬಿಕೆಗೆ ಹೆಸರಾದ ವ್ಯಕ್ತಿಗೆ ಹಲವರು ದ್ರೋಹ ಬಗೆದರೂ ಅವರೆಂದೂ ತನ್ನ ಕರ್ತವ್ಯದಲ್ಲಿ ಹಿಂದುಳಿದವರಲ್ಲ. ಅವರು ಸಮಾಜ ಬಾಂಧವರ ಮೇಲಿಟ್ಟಿರುವ ನಮ್ಮನ್ನು ವಸಾಯಿ ಪರಿಸರದಲ್ಲಿ ಹಾಗೂ ಸಮಾಜದಲ್ಲಿ ಗೌರವಯುತರನ್ನಾಗಿ ಮಾಡಿದ್ದಾರೆ. ಅವರ ಸೇವೆಯ ಬದುಕು ನಮಗೆ ಆದರ್ಶಪ್ರಾಯವಾಗಿದೆ ಎಂದು ನುಡಿನಮನ ಸಲ್ಲಿಸಿದರು.
ಸಂಘದ ಹಿರಿಯ ಸದಸ್ಯರಾದ ಸಿ. ಎಸ್. ಕರ್ಕೇರ ಅವರು ಶ್ರದ್ಧಾಂಜಲಿ ಅರ್ಪಿಸಿ, ಸೌಮ್ಯ ಸ್ವಭಾವದ ವಿಶಾಲ ಮನಸ್ಸಿನ ದಿವಂಗತರು ನಮ್ಮ ಸಂಘದಲ್ಲಿ ದೀರ್ಘಕಾಲ ಗೌರವಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ನಮ್ಮೆಲ್ಲರ ಹೆಮ್ಮೆ. ಶಿಕ್ಷಣ ಪ್ರೇಮಿಯಾಗಿ ವಿದ್ಯಾಕ್ಷೇತ್ರದಲ್ಲಿ ಅವರು ಸಲ್ಲಿಸಿದ ಸೇವೆ ಅನನ್ಯವಾಗಿದೆ. ಮಾನವೀಯತೆ, ಸಮಾಜ ಸೇವೆಗೆ ಗೌರವ ವ್ಯಕ್ತಿಯಾಗಿದ್ದ ಅವರನ್ನು ನಾವು ಕಳೆದುಕೊಂಡಿರುವುದರಿಂದ ಬಹಳಷ್ಟು ನೋವಾಗಿದೆ ಎಂದರು.
ಸಂಘದ ಮಾಜಿ ಕಾರ್ಯದರ್ಶಿ ಪ್ರದೀಪ್ ಪುತ್ರನ್ ಅವರು ಮಾತನಾಡಿ, ಬಂಡವಾಳ ಶಾಹಿ ಉದ್ಯಮದಲ್ಲಿ ಅಧಿಕ ಲಾಭವಿದ್ದರೂ ನಲಸೋಪರ ಪರಿಸರದಲ್ಲಿ ಶಾಲೆಯನ್ನು ತೆರೆಯುವ ಮೂಲಕ ತಾನೋರ್ವ ಶಿಕ್ಷಣ ಪ್ರೇಮಿಯಾಗಿದ್ದೇನೆ ಎಂದು ಎದೆತಟ್ಟಿ ಹೇಳುತ್ತಿದ್ದ ಅವರ ಕಾಲದಲ್ಲಿಯೇ ಸಂಘದ ಗೌರವ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುವ ಅವಕಾಶ ದೊರೆತಿರುವುದು ನನ್ನ ಭಾಗ್ಯವಾಗಿದೆ. ಅವರೊಂದಿಗೆ ಸಂಘದ ಸಮಾಜಪರ ಕಾರ್ಯಗಳಲ್ಲಿ ತೊಡಗಿಸಿಕೊಂಡ ಅನುಭವ ಮರೆಯಲು ಸಾಧ್ಯವಿಲ್ಲ ಎಂದು ನುಡಿದರು.
ಸಂಘದ ಸದಸ್ಯರಾದ ಮಾಧವ ಸುವರ್ಣ, ಕಾರ್ಯದರ್ಶಿ ಮುರಳೀಧರ ಪುತ್ರನ್, ಭೋಜ ಕೋಟ್ಯಾನ್, ಮೋಹಿನಿ ಮಲ್ಪೆ, ವಾಣಿ ಕರ್ಕೇರ, ಸುಗಂಧಿ ಪುತ್ರನ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಇಂದಿರಾ ಪುತ್ರನ್, ಜಗನ್ನಾಥ ಸಾಲ್ಯಾನ್ ಹಾಗೂ ಸಂಘದ ಇತರ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು, ತುಳು-ಕನ್ನಡಿಗರು, ಮಹಿಳಾ ವಿಭಾಗದ ಸದಸ್ಯೆಯರು, ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದಿ| ರಾಘು ಸುವರ್ಣ ಅವರ ಭಾವಚಿತ್ರಕ್ಕೆ ಪುಷ್ಪವೃಷ್ಟಿಗೈದು ನುಡಿನಮನ ಸಲ್ಲಿಸಿದರು. ಚಂದ್ರಶೇಖರ್ ಪುತ್ರನ್ ಅವರು ವಂದಿಸಿದರು.
ಚಿತ್ರ-ವರದಿ: ರಮೇಶ್ ಉದ್ಯಾವರ