ಬೆಂಗಳೂರು: ಧರ್ಮಜಾಗೃತಿ, ಸಾಂಸ್ಕೃತಿಕ ಪರಂಪರೆ, ಆಚಾರ-ವಿಚಾರ, ಕಲೆಯ ಜತೆಗೆ ಆಧುನಿಕ ಶಿಕ್ಷಣ ನೀಡಲು ರಾಮಚಂದ್ರಾಪುರ ಮಠದ ವಿಷ್ಣುಗುಪ್ತ ವಿಶ್ವವಿದ್ಯಾಪೀಠದಲ್ಲಿ ಮುಕ್ರಿ ಮತ್ತು ಹಾಲಕ್ಕಿ ಸಮುದಾಯಕ್ಕಾಗಿ ಎರಡು ಗುರುಕುಲವನ್ನು ಪ್ರಸಕ್ತ ಸಾಲಿನಿಂದ ಆರಂಭಿಸಲಾಗುತ್ತಿದೆ.
ಈ ಸಂಬಂಧ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ರಾಮಚಂದ್ರಪುರ ಮಠಾಧೀಶರಾದ ರಾಘವೇಶ್ವರ ಭಾರತಿ ಸ್ವಾಮೀಜಿ, ಸದ್ಯ ಭಾರತದಲ್ಲಿ ಶಿಕ್ಷಣವಿದೆ, ಆದರೆ ಶಿಕ್ಷಣದಲ್ಲಿ ಭಾರತವಿಲ್ಲ. ಇದನ್ನು ಅರಿತು ಆಧುನಿಕ ಶಿಕ್ಷಣದ ಜತೆಗೆ ಭಾರತೀಯ ಪರಂಪರೆ, ಸಂಸ್ಕೃತಿ ಹಾಗೂ ಹಿಂದು ಧರ್ಮದ ಬಗ್ಗೆ ಸಮಗ್ರ ಮಾಹಿತಿ ನೀಡಲು ಗೋಕರ್ಣದ ಅಶೋಕೆಯಲ್ಲಿ ವಿಷ್ಣು ಗುಪ್ತ ವಿಶ್ವವಿದ್ಯಾಪೀಠ ಆರಂಭಿಸಿದ್ದೇವೆ ಎಂದರು.
ವಿದ್ಯಾಪೀಠದ ಮುಂದುವರಿದ ಭಾಗವಾಗಿ ಮುಕ್ರಿ ಸಮುದಾಯದ ಮಕ್ಕಳಿಗಾಗಿ ಅವರ ಸಂಸ್ಕೃತಿ, ಪರಂಪರೆ, ಆಚಾರ, ವಿಚಾರ ಇತ್ಯಾದಿಗಳ ಜತೆಗೆ ಆಧುನಿಕ ಶಿಕ್ಷಣ ನೀಡಲು ಚಂದ್ರಗುಪ್ತ ಗುರುಕುಲ ಹಾಗೂ ಹಾಲಕ್ಕಿ ಸಮುದಾಯದ ಮಕ್ಕಳಿಗೆ ಅವರ ಪರಂಪರೆ, ಸಂಸ್ಕೃತಿ, ಕಲೆ, ಸಾಹಿತ್ಯದ ಅರಿವು, ಶಿಕ್ಷಣ, ಭಾರತೀಯ ಪರಂಪರೆ ಹಾಗೂ ಆಧುನಿಕ ಶಿಕ್ಷಣ ನೀಡಲು ಹಾಲಕ್ಕಿ ಗುರುಕುಲವನ್ನು 2021ರ ಜೂನ್‌ನಿಂದಲೇ ಆರಂಭಿಸಲಿದ್ದೇವೆ. ಮಾ.1ರಿಂದ ದಾಖಲಾತಿ ಪ್ರಕ್ರಿಯೆ ಆರಂಭವಾಗಲಿದೆ ಎಂದರು.
ಇದನ್ನೂ ಓದಿ :ಒಗ್ಗಟ್ಟಿನಿಂದ ಹೋರಾಡಿದರೆ ಮೀಸಲಾತಿ ಸಾಧ್ಯ
ಗುರುಕುಲದಲ್ಲಿ ಪ್ರಾಥಮಿಕ, ಪ್ರೌಢ ಹಾಗೂ ಪದವಿ ಶಿಕ್ಷಣ, ವಿದ್ಯಾಪೀಠದಲ್ಲಿ ಅದರ ಮುಂದುವರಿದ ಶಿಕ್ಷಣ ನೀಡುತ್ತಿದ್ದೇವೆ. ಈಗ 300 ವಿದ್ಯಾರ್ಥಿಗಳು ಗುರುಕುಲದಲ್ಲಿದ್ದಾರೆ. ಮುಕ್ರಿ ಮತ್ತು ಹಾಲಕ್ಕಿ ಸಮುದಾಯದ ಮಕ್ಕಳು ಈಗಾಗಲೇ ಇರುವ ಗುರುಕುಲಕ್ಕೂ ಸೇರಿಕೊಳ್ಳಬಹುದು. ಅವರ ವಿಶೇಷ ಪರಂಪರೆ, ಆಚಾರ-ವಿಚಾರ, ಕಲೆ, ಸಂಸ್ಕೃತಿ ಕಲಿಸಲು ಪ್ರತ್ಯೇಕ ಗುರುಕುಲ ಸ್ಥಾಪನೆ ಮಾಡುತ್ತಿದ್ದೇವೆ. ನಮ್ಮಲ್ಲಿನ ಎಲ್ಲ ಗುರುಕುಲದಲ್ಲೂ ಎಲ್ಲರಿಗೂ ಮುಕ್ತ ಅವಕಾಶವಿದೆ. ಕೇಂದ್ರ ಸರ್ಕಾರದ ಮುಕ್ತ ಶಾಲೆಯ ಪಠ್ಯಕ್ರಮ ಇಲ್ಲಿ ಬೋಧಿಸಲಾಗುತ್ತದೆ. 6ನೇ ತರಗತಿ ಮತ್ತು ತತ್ಸಮಾನ ವಯಸ್ಸಿನ ವಿದ್ಯಾರ್ಥಿಗಳು ಪ್ರವೇಶ ಪಡೆಯಲು ಅರ್ಹರಿದ್ದಾರೆ. ಈ ಎರಡು ಗುರುಕುಲಕ್ಕೆ ಈ ವರ್ಷ 100 ಮಕ್ಕಳನ್ನು ದಾಖಲಾತಿ ಮಾಡಿಕೊಳ್ಳಲಿದ್ದೇವೆ ಎಂದರು.
ಈ ಎರಡು ವಿಶೇಷ ಗುರುಕುಲಗಳಿಗಾಗಿಯೇ ಸುಮಾರು 10 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಸಮುದಾಯಗಳ ವೈಶಿಷ್ಟ್ಯಗಳ ಮೇಲೆ ಬೆಳಕು ಚೆಲ್ಲುವ ಪರಿಸರವನ್ನು ನಿರ್ಮಿಸಿ ಗುರುಕುಲ ಸ್ಥಾಪಿಸಲಾಗುತ್ತಿದೆ. ರಾಜ್ಯದ ಬೇರೆ ಬೇರೆ ಭಾಗದಲ್ಲೂ ಗುರುಕುಲ ತೆರೆಯಲು ಬೇಡಿಕೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಚಿಂತನೆ ನಡೆಸಿ, ನಿರ್ಧಾರ ತೆಗೆದುಕೊಳ್ಳಲಿದ್ದೇವೆ ಎಂದರು.