ಬೆಂಗಳೂರು: ಕಳೆದ ವರ್ಷ ಗೋ ಚಾತುರ್ಮಾಸ್ಯದ ಮೂಲಕ ಗೋಸಂರಕ್ಷಣೆ ಸಂದೇಶ ಸಾರಿದ ಹೊಸನಗರ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ಈ ಬಾರಿ ಅಭಯ ಚಾತುರ್ಮಾಸ್ಯವನ್ನು ಆರಂಭಿಸುವ ಮೂಲಕ ಗೋವುಗಳಿಗೆ ಅಭಯ ನೀಡುವ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.
ಭಾನುವಾರ ಬೆಂಗಳೂರಿನ ಗಿರಿನಗರ ರಾಮಾಶ್ರಮದಲ್ಲಿ ರಾಘವೇಶ್ವರ ಶ್ರೀಗಳು, ಗೋ ಕಲಾಕೃತಿಗೆ ಹಸ್ತಾಕ್ಷರ ನೀಡುವ ಮೂಲಕ ಅಭಯ ಚಾತುರ್ಮಾಸ್ಯಕ್ಕೆ ಚಾಲನೆ ನೀಡಿದರು. ಇದೇ ವೇಳೆ “ಗೋವು ಕತ್ತರಿಸುವ ಕತ್ತಿಗೆ ಲೇಖನಿಯಿಂದ ಉತ್ತರ ನೀಡುವ, ರಕ್ತಕ್ಕೆ ಶಾಯಿಯಿಂದ ಪ್ರತಿಕ್ರಿಯಿಸುವುದಕ್ಕೆ ಅಭಯಾಕ್ಷರ ಆಂದೋಲನ ಮೀಸಲಾಗಿರಲಿದೆ ಎಂದು ಘೋಷಿಸಿದರು.
ಶೃಂಗೇರಿ ಶ್ರೀ ಚಾತುರ್ಮಾಸ್ಯ: ಇದೇ ವೇಳೆ, ಶೃಂಗೇರಿ ಶಾರದಾ ಪೀಠದ ಜಗದ್ಗುರುಗಳಾದ ಶ್ರೀ ಭಾರತೀತೀರ್ಥ ಸ್ವಾಮೀಜಿ ಹಾಗೂ ಕಿರಿಯ ಸ್ವಾಮೀಜಿಗಳಾದ ಶ್ರೀ ವಿಧುಶೇಖರ ಭಾರತಿ ಸ್ವಾಮೀಜಿಗಳು ಭಾನುವಾರ ಮಠದ ನರಸಿಂಹವನದ ಗುರುಭವನದಲ್ಲಿ ಚಾತುರ್ಮಾಸ್ಯ ವ್ರತ ಆರಂಭಿಸಿದರು. ವ್ಯಾಸ ಪೂರ್ಣಿಮೆಯ ಅಂಗವಾಗಿ ಉಭಯ ಜಗದ್ಗುರುಗಳು ಬೆಳಗ್ಗೆ ಮಠದ ಎಲ್ಲಾ ದೇವಾಲಯಗಳಿಗೂ ಭೇಟಿ ನೀಡಿ ದೇವರ ದರ್ಶನ ಪಡೆದು, ನಂತರ ಶಾರದಾಂಬೆಗೆ ಪೂಜೆ ಸಲ್ಲಿಸಿದರು. ಬಳಿಕ ಗುರುಭವನಕ್ಕೆ ತೆರಳಿ ವ್ಯಾಸಪೂಜೆ ನೆರವೇರಿಸಿದರು. ನಂತರ, ವ್ಯಾಸ ಪೂಜೆಯ ಅಕ್ಷತೆಯನ್ನು ಭಕ್ತಾದಿಗಳಿಗೆ ನೀಡಿ, ಚಾತುರ್ಮಾಸ್ಯ ವ್ರತ ಆರಂಭಿಸಿದರು.
ಸೋಂದಾ ಶ್ರೀ ಚಾತುರ್ಮಾಸ್ಯ: ಶಿರಸಿ ಸಮೀಪದ ಸ್ವರ್ಣವಲ್ಲಿ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿಯವರು, ಮಠದ ಸುಧರ್ಮಾ ಸಭಾಂಗಣದಲ್ಲಿ 27ನೇ ಚಾತುರ್ಮಾಸ ವ್ರತ ಆರಂಭಿಸಿದರು. ಇದೇ ವೇಳೆ, ವೇ| ತಿಮ್ಮಣ್ಣ ಪ.ಭಟ್ಟ ಕಟ್ಟೆ ಅವರಿಗೆ ಶಾಸ್ತ್ರ ಆಗಮನ ರತ್ನಂ ಹಾಗೂ ಎಂ.ಎನ್.ಹೆಗಡೆ ಅಮ್ಮಚ್ಚಿ ಅವರಿಗೆ ಶಿಕ್ಷಣ ಸೇವಾ ರತ್ನಂ ಬಿರುದು ನೀಡಿ ಸನ್ಮಾನಿಸಲಾಯಿತು. ಕಳೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳಿಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅಭಿನಂದಿಸಲಾಯಿತು. ಯಕ್ಷಗಾನ ಕಲಾವಿದೆ ನಿರ್ಮಲಾ ಹೆಗಡೆ ಗೋಳಿಕೊಪ್ಪ ಇವರ ದುಶ್ಯಂತ ಶಕುಂತಲೆ ಚೊಚ್ಚಲ ಕೃತಿಯ ಲೋಕಾರ್ಪಣೆ ಕೂಡ ನಡೆಯಿತು.