ಮಂಗಳೂರು: ಮಹಾನ್ ಸಾಧಕರ ಜೀವನ ಚರಿತ್ರೆ ನಮಗೆ ಸ್ಫೂರ್ತಿ ನೀಡುತ್ತದೆ. ಉದಾತ್ತ ಚಿಂತನೆ, ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡ ಅಪ್ರತಿಮ ಸಾಧಕ ಎ. ರಾಘವೇಂದ್ರ ರಾವ್ ಅವರ ಯಶೋಗಾಥೆ ಮುಂದಿನ ಜನಾಂಗಕ್ಕೆ ದಾರಿದೀಪವಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಆಯುಕ್ತ ಎಸ್.ರಂಗರಾಜನ್ ಹೇಳಿದರು.
ನಗರದಲ್ಲಿ ನಡೆದ ಶ್ರೀನಿವಾಸ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ, ಶ್ರೀನಿವಾಸ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ| ಎ. ರಾಘವೇಂದ್ರ ರಾವ್ ಅವರ ಜೀವನ ಚರಿತ್ರೆ ” ಡ್ರೀಮ್ ಟು ರಿಯಾಲಿಟಿ-ದಿ ಜರ್ನಿ ಆಫ್ ಎ ವಿಷನರಿ’ ಪುಸ್ತಕದ ಬಿಡುಗಡೆ ಸಮಾರಂಭದಲ್ಲಿ ಅವರು ಪಾಲ್ಗೊಂಡು ಮಾತನಾಡಿದರು.
ಬದುಕಿನಲ್ಲಿ ಎದುರಾದ ಸವಾಲುಗಳನ್ನು ಸಮರ್ಥವಾಗಿ ಎದುರಿಸಿದ ಕಾರಣ ಡಾ| ಎ. ರಾಘವೇಂದ್ರ ರಾವ್ ಅವರು ಯಶಸ್ಸಿನ ಹಾದಿಯಲ್ಲಿ ಸಾಗಿದ್ದಾರೆ. ದೂರದೃಷ್ಟಿತ್ವ, ಕಠಿನ ಪರಿಶ್ರಮದಿಂದ ಶ್ರೀನಿವಾಸ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ ಅವರು ನಾಡಿನ ಶೈಕ್ಷಣಿಕ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ್ದಾರೆ ಎಂದರು.
ಈ ವೇಳೆ ಮಾತನಾಡಿದ ಡಾ| ಎ. ರಾಘವೇಂದ್ರ ರಾವ್ ಅವರು, ದಣಿದಿರುವಾಗ ಹೊಸ ಕರ್ತವ್ಯ ಮನಸ್ಸಿಗೆ ಉಲ್ಲಾಸ ನೀಡಬಹುದು. ಕರ್ತವ್ಯವನ್ನು ಬದಲಾಯಿಸಿದಾಗ ಹೆಚ್ಚಿನ ಕ್ಷೇತ್ರಗಳಲ್ಲಿ ಹೆಚ್ಚಿನ ಕೆಲಸ ಮಾಡಬಹುದು. ನನ್ನ ಜೀವನದಲ್ಲಿ ನಾನು ಜನರು ದಣಿದಿದ್ದಾರೆ ಎಂದಾಗ ಈ ರೀತಿ ಸಲಹೆ ನೀಡಿದ್ದೇನೆ . ನನ್ನ ಜೀವನದಲ್ಲಿಯೂ ಅಳವಡಿಸಿಕೊಂಡಿದ್ದೇನೆ, ಅದುವೇ ನನ್ನ ಯಶಸ್ಸಿನ ಮಂತ್ರ ಎಂದು ಹೇಳಿದರು.
ಶ್ರೀನಿವಾಸ ವಿಶ್ವವಿದ್ಯಾನಿಲಯದ ಸಹ ಕುಲಾಧಿಪತಿ ಡಾ| ಎ. ಶ್ರೀನಿವಾಸ ರಾವ್, ಟ್ರಸ್ಟಿಗಳಾದ ವಿಜಯಲಕ್ಷ್ಮೀ ಆರ್. ರಾವ್, ಮಿತ್ರಾ ಎಸ್. ರಾವ್, ಸ್ಥಾನೀಯ ನಿರ್ದೇಶಕಿ ಪದ್ಮಿನಿ ಕುಮಾರ್, ಶ್ರೀನಿವಾಸ ವಿ.ವಿ.ಯ ಸಲಹೆಗಾರ ಡಾ| ಉದಯ ಕುಮಾರ್ ಮಯ್ಯ, ಕುಲಪತಿ ಡಾ| ಕೆ.ಸತ್ಯನಾರಾಯಣ ರೆಡ್ಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಗಣ್ಯರಾದ ಎಚ್.ಆರ್.ಶೆಟ್ಟಿ, ಶ್ರೀರಾಮುಲು ನಾಯ್ಡು, ಬಿ.ಬಿ.ಶ್ಯಾನುಭಾಗ್, ಕೇಶವ ಭಟ್,ಕೆಸಿಸಿಐ ಮಾಜಿ ಅಧ್ಯಕ್ಷ ನಾಗೇಶ್ ಪೈ, ಡಾ| ಪ್ರಭಾಕರ ರಾವ್, ವಿಠಲದಾಸ್ ರಾವ್, ಡಾ| ಗೌರಿ ಪೈ, ಶಿವಕುಮಾರ್ ಶರ್ಮ, ಯು.ರಾಮರಾವ್ ಶುಭ ಹಾರೈಸಿದರು.
ರಿಜಿಸ್ಟ್ರಾರ್‌ಗಳಾದ ಡಾ| ಆದಿತ್ಯ ಕುಮಾರ್ ಮಯ್ಯ, ಡಾ| ಅನಿಲ್ ಕುಮಾರ್, ಡಾ| ಶ್ರೀನಿವಾಸ್ ಮಯ್ಯ, ಶ್ರೀನಿವಾಸ್ ಸಮೂಹ ಸಂಸ್ಥೆಯ ವಿವಿಧ ವಿಭಾಗಗಳ ಡೀನ್‌ಗಳಾದ ಡಾ| ರಾಜಶೇಖರ್, ಡಾ| ಸುಬ್ರಹ್ಮಣ್ಯ ಭಟ್, ಡಾ| ಪ್ರದೀಪ್ ಎಂ., ಡಾ| ಅನಿತಾ ಸ್ವಿಕೇರಾ, ಪ್ರೊ| ವೆಂಕಟೇಶ್ ಅಮೀನ್ ಉಪಸ್ಥಿತರಿದ್ದರು.
ಶ್ರೀನಿವಾಸ್ ಇನ್‌ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸ್‌ನ ಡೀನ್ ಡಾ| ಕೆ. ರೇಶ್ಮಾ ಪೈ ಸ್ವಾಗತಿಸಿ, ಶ್ರೀನಿವಾಸ್ ವಿ.ವಿ.ಯ ಹಣಕಾಸು ಅಧಿಕಾರಿ ಪ್ರೊ| ಅರ್ಪಣಾ ಭಟ್ ವಂದಿಸಿದರು.