ರಾಘವೇಂದ್ರ ರಾಜಕುಮಾರ್ ಈಗ ಒಂದೊಂದೇ ಸಿನಿಮಾದಲ್ಲಿ ನಟಿಸುವ ಮೂಲಕ ಬಿಝಿಯಾಗುತ್ತಿದ್ದಾರೆ. ಅಷ್ಟೇ ಅಲ್ಲ, ಸಿನಿಮಾದಿಂದ ಸಿನಿಮಾಗೆ ಹೊಸ ಹೊಸ ಪಾತ್ರಗಳ ಆಯ್ಕೆ ಮಾಡುತ್ತಿದ್ದಾರೆ. ಹೌದು, ಇತ್ತೀಚೆಗೆ ರಾಘವೇಂದ್ರ ರಾಜಕುಮಾರ್ ಅವರು ಅಭಿನಯಿಸಿದ ಚಿತ್ರಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಅವರು ತರಹೇವಾರಿ ಪಾತ್ರಗಳ ಮೂಲಕ ಪ್ರೇಕ್ಷಕರ ಗಮನಸೆಳೆಯುತ್ತಿದ್ದಾರೆ. ಅದರಲ್ಲೂ ಅವರ ಚಿತ್ರಗಳಲ್ಲಿ ಅವರ ಪಾತ್ರಕ್ಕೆ ಹೆಚ್ಚು ಪ್ರಾಮುಖ್ಯತೆ ಇರುತ್ತೆ ಅನ್ನೋದು ವಿಶೇಷ.
ಈ ಬಾರಿ ರಾಘವೇಂದ್ರ ರಾಜಕುಮಾರ್ ಅವರು ಹೊಸ ಪಾತ್ರದ ಮೂಲಕ ಮತ್ತಷ್ಟು ಗಮನಸೆಳೆದಿರುವುದಷ್ಟೇ ಅಲ್ಲ, ವಿಶೇಷ ಗೆಟಪ್ ಮೂಲಕ ಒಂದಷ್ಟು ಕುತೂಹಲ ಮೂಡಿಸಿರುವುದೂ ನಿಜ. ಅಂದಹಾಗೆ, ರಾಘವೇಂದ್ರ ರಾಜಕುಮಾರ್ ಅವರೀಗ “ವಾರ್ಡ್ ನಂ. 11′ ಎಂಬ ಹೆಸರಿನ ಚಿತ್ರದಲ್ಲಿ ನಟಿಸುತ್ತಿದ್ದಾರೆ. ವಾರ್ಡ್ ಅಂದಾಕ್ಷಣ, ಅದು ಆಸ್ಪತ್ರೆಯಲ್ಲಿ ಬಳಸುವ ಪದವಾಗಿರಬಹುದು, ಇಲ್ಲವೇ, ನಗರ, ಪಟ್ಟಣಗಳಲ್ಲಿ ಒಬ್ಬ ಕಾರ್ಪೋರೇಟರ್ ಪ್ರತಿನಿಧಿಸುವ ವಾರ್ಡ್ ನೆನಪಾಗುತ್ತದೆ.
ಇಲ್ಲಿ “ವಾರ್ಡ್ ನಂ.11′ ಎಂಬುದು ರಾಜಕೀಯ ಹಿನ್ನೆಲೆಯಲ್ಲಿ ಸಾಗುವ ಸಿನಿಮಾ ಅನ್ನೋದು ಸ್ಪಷ್ಟ. ಹೌದು, ಇದೊಂದು ಪಕ್ಕಾ ಪೊಲಿಟಿಕಲ್ ಥ್ರಿಲ್ಲರ್ ಕಥೆ ಹೊಂದಿರುವ ಚಿತ್ರ. ಈ ಚಿತ್ರದಲ್ಲಿ ರಾಘವೇಂದ್ರ ರಾಜಕುಮಾರ್ ಅವರು ರಾಜಕಾರಣಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬುದು ವಿಶೇಷ. ಇದೇ ಮೊದಲ ಬಾರಿಗೆ ಅವರು ಹೊಸಬಗೆಯ ಪಾತ್ರ ಹಾಗು ಗೆಟಪ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಹಾಗಾದರೆ, ಅವರು ಒಂದು ವಾರ್ಡ್‌ನ ಕಾರ್ಪೋರೇಟ್ ಆಗಿರುತ್ತಾರಾ ಅಥವಾ ಶಾಸಕರಾಗಿರುತ್ತಾರಾ? ಇದಕ್ಕೆ ಉತ್ತರ ಚಿತ್ರ ಬರುವವರೆಗೂ ಕಾಯಬೇಕು. ಇನ್ನು, ಈ ಚಿತ್ರವನ್ನು ಶ್ರೀಕಾಂತ್ ನಿರ್ದೇಶಕರು. ಇದು ಅವರ ಮೊದಲ ಚಿತ್ರ. ಎಂಜಿನಿಯರಿಂಗ್ ಓದುವಾಗಲೇ ಅವರು ಕಥೆಗಳನ್ನು ಬರೆಯುವ ಹವ್ಯಾಸ ಮಾಡಿಕೊಂಡಿದ್ದರು. ಈಗ ಪೊಲಿಟಿಕಲ್ ಥ್ರಿಲ್ಲರ್ ಕಥೆ ಬರೆದು ನಿರ್ದೇಶಕರಾಗುತ್ತಿದ್ದಾರೆ.
ಎಲ್ಲಾ ಸರಿ, ಈ ವಾರ್ಡ್ ಕಥೆ ಏನು? ಇದಕ್ಕೆ ಉತ್ತರ, ” ವಾರ್ಡ್‌ನಲ್ಲಿ ನಾಲ್ವರು ಗೆಳೆಯರ ಪೈಕಿ ಒಬ್ಬನ ಕೊಲೆಯಾಗುತ್ತೆ. ಆ ಕೊಲೆಯ ತನಿಖೆ ಶುರುವಾದಾಗ, ಹಲವಾರು ವಿಷಯಗಳು ಹೊರಬರುತ್ತವೆ. ಆಗ ಒಂದಷ್ಟು ತಿರುವುಗಳು ಎದುರಾಗುತ್ತವೆ. ಆಮೇಲೆ ಏನೇನು ಆಗುತ್ತೆ ಎಂಬುದು ಸಸ್ಪೆನ್ಸ್ ಎಂಬುದು ಚಿತ್ರತಂಡದ ಮಾತು. ಚಿತ್ರದಲ್ಲಿ ರಕ್ಷಿತ್ ನಾಯಕರಾಗಿ ನಟಿಸುತ್ತಿದ್ದಾರೆ. ಅವರಿಗಿದು ಮೊದಲ ಅನುಭವ. ಇವರೊಂದಿಗೆ ವಿಶ್ವಾಸ್, “ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಗೋವಿಂದೇ ಗೌಡ, ಸಾಗರ್ ನಟಿಸುತ್ತಿದ್ದಾರೆ.
ಇನ್ನು, ಕಾಲೇಜು ಹುಡುಗಿಯಾಗಿ ಮೇಘಶ್ರೀ ಹಾಗೂ ಅಮೃತಾ ನಾಯಕಿಯರಾಗಿ ನಟಿಸುತ್ತಿದ್ದಾರೆ. ಇವರೊಂದಿಗೆ ಸುಮನ್ ನಗರ್‌ಕರ್ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರಕ್ಕೆ ಸುರೇಂದ್ರನಾಥ್ ಸಂಗೀತವಿದೆ. ನಾಗೇಂದ್ರಪ್ರಸಾದ್, ಜಯಂತ್‌ಕಾಯ್ಕಣಿ ಮತ್ತು ತಪಸ್ವಿ ಗೀತೆ ರಚಿಸಿದ್ದಾರೆ. ರಾಕೇಶ್.ಸಿ.ತಿಲಕ್ ಛಾಯಾಗ್ರಹಣವಿದೆ. ಶ್ರೀಕಾಂತ್-ಹರೀಶ್ ಸಂಭಾಷಣೆ ಬರೆದಿದ್ದಾರೆ. ಗುರುರಾಜ್.ಎ ಮತ್ತು ಸಂದೀಪ್ ನಿರ್ಮಾಣ ಮಾಡುತ್ತಿದ್ದಾರೆ.