ಉಡುಪಿ: ರಾಘವೇಂದ್ರ ಕಿಣಿ ಅವರು ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.
ಶಾಸಕ ಕೆ.ರಘುಪತಿ ಭಟ್ ಶಿಫಾರಸಿನ ಮೇರೆಗೆ ಸಿಎಂ ಯಡಿಯೂರಪ್ಪ ಅವರು ಈ ನೇಮಕವನ್ನು ಮಾಡಿದ್ದಾರೆ. ಪ್ರಾಧಿಕಾರದ ಸದಸ್ಯರಾಗಿ ಸುಮಾ ನಾಯ್ಕ, ದಿನಕರ್ ಪೂಜಾರಿ, ಪ್ರವೀಣ್ ಕುಮಾರ್ ಶೆಟ್ಟಿ ಕಪ್ಪೆಟ್ಟು, ಕಿಶೋರ್ ಕುಮಾರ್ ಅವರನ್ನು ನೇಮಿಸ ಲಾಗಿದೆ. ನೂತನ ಅಧ್ಯಕ್ಷರಿಗೆ, ಸದಸ್ಯರಿಗೆ ಶಾಸಕ ಕೆ ರಘುಪತಿ ಭಟ್ ಅವರು ಅಭಿನಂದನೆ ಸಲ್ಲಿಸಿದ್ದಾರೆ.
ಸಾಮಾನ್ಯ ಕಾರ್ಯಕರ್ತರಾಗಿ ಬೆಳೆದ ಕಿಣಿಯವರು ಬಿಜೆಪಿ ಮತ್ತು ಯುವಮೋರ್ಚಾ ನಗರ ಸಮಿತಿ ಅಧ್ಯಕ್ಷರಾಗಿದ್ದರು. ವಿವಿಧ ಬೃಹತ್ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಸಂಘಟಿಸುವ ಕೌಶಲ ಅವರಿಗಿದೆ. ವಿವಿಧ ಸಂಘಗಳಲ್ಲಿ ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ ಅವರು ವಿವಿಧ ಆಯಾಮಗಳ ಸಮಾಜಸೇವೆಯನ್ನು ಕೈಗೊಂಡವರು. ವೃತ್ತಿಯಲ್ಲಿ ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್ ಆಗಿದ್ದಾರೆ. ಪ್ರಾಧಿಕಾರದ ಅಧ್ಯಕ್ಷರಾಗಿ ಇದೇ ಮೊದಲ ಬಾರಿ ಸಿವಿಲ್ ಎಂಜಿನಿಯರ್ ಒಬ್ಬರು ನೇಮಕಗೊಂಡಿದ್ದಾರೆ.
“ಪಕ್ಷ ಜನ ಸೇವೆ ಮಾಡುವ ಅವಕಾಶ ನೀಡಿದೆ. ಇದನ್ನು ಪ್ರಾಮಾಣಿಕವಾಗಿ ನಿರ್ವಹಿಸಲು ಪ್ರಯತ್ನಿಸುತ್ತೇನೆ’ ಎಂದು ರಾಘವೇಂದ್ರ ಕಿಣಿ ತಿಳಿಸಿದ್ದಾರೆ.