Advertisement

Shimoga;ಈಶ್ವರಪ್ಪ ಭಯದಿಂದ ರಾಘವೇಂದ್ರ ಆ್ಯಕ್ಟಿವ್‌: ಆಯನೂರು ಮಂಜುನಾಥ್

03:23 PM Apr 03, 2024 | Nagendra Trasi |

ಉದಯವಾಣಿ ಸಮಾಚಾರ
ಶಿವಮೊಗ್ಗ: ನಾನು ಯಡಿಯೂರಪ್ಪ ಅವರನ್ನು ಟೀಕೆ ಮಾಡಿಲ್ಲ. ಅವರ ಮಗ ಬಿ.ವೈ.ರಾಘವೇಂದ್ರ ಅವರನ್ನು ಪ್ರಶ್ನಿಸಿದ್ದೇನೆ. ನಿಮ್ಮ ನಾಯಕರ ಬಗ್ಗೆ ಈಶ್ವರಪ್ಪ ಟೀಕೆ ಮಾಡಿದ್ದಕ್ಕೆ, ನಾನು ಬಲವಾಗಿ ಖಂಡಿಸುತ್ತಿದ್ದೇನೆ. ಆದರೆ ನೀವು ಯಾಕೆ ಖಂಡಿಸಲಿಲ್ಲ ಎಂದು ಬಿಜೆಪಿ ಎಂಎಲ್‌ಸಿ ಎಸ್‌.ರುದ್ರೇಗೌಡ ಹಾಗೂ ಮುಖಂಡ ಧನಂಜಯ ಸರ್ಜಿ ಅವರಿಗೆ ಕೆಪಿಸಿಸಿ ವಕ್ತಾರ ಆಯನೂರು
ಮಂಜುನಾಥ್‌ ಪ್ರಶ್ನಿಸಿದರು.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಕೆಜೆಪಿ ಕಟ್ಟಿದ್ದಾಗ ಅದರ ಅಭ್ಯರ್ಥಿಯಾಗಿ ರುದ್ರೇಗೌಡರು ಚುನಾವಣೆಯಲ್ಲಿ ಸ್ಪರ್ಧಿಸಿ ಸೋತರು. ಆ ಸೋಲಿಗೆ ಕಾರಣ ಯಾರು. ಯಡಿಯೂರಪ್ಪ ಜೈಲಿಗೆ ಹೋಗಲು ಕಾರಣ ಯಾರು ಎಂಬ ಪ್ರಶ್ನೆಗೆ ಉತ್ತರಿಸದ ಇವರಿಬ್ಬರು ನನ್ನ ಪ್ರಶ್ನೆಯನ್ನು ಪ್ರಶ್ನೆಯನ್ನಾಗಿಯೇ ಉಳಿಸಿದ್ದಾರೆ ಎಂದು ಹೇಳಿದರು.

ಧನಂಜಯ್‌ ಸರ್ಜಿಗೆ ಇನ್ನೂ ಬಿಜೆಪಿ ಅರ್ಥ ಆಗಿಲ್ಲ. ಸರ್ಜಿಗೆ ನನ್ನ ಬಗ್ಗೆಯೇ ಏನು ಗೊತ್ತಿದೆ. ನಾನು ಬಿಜೆಪಿಯ ಫಲಾನುಭವಿ ಎನ್ನುವ ಅವರು, ಒಂದು ಕಾಲದಲ್ಲಿ ನಾನು ಬಿಜೆಪಿ ಕೊಟ್ಟ ಬರಗಾಲದ ನೆಲದಲ್ಲಿ ಬೆಳೆ ಬೆಳೆದವನು. ಬಂಗಾರಪ್ಪ ವಿರುದ್ಧ ಸ್ವರ್ಧೆ ಮಾಡಿದವನು. ಈಗ ನಿಮಗೆ ಅವರ ನೀರಾವರಿ ಭೂಮಿ ಕೊಟ್ಟಿದ್ದಾರೆ. ನಾನು ಎಲ್ಲೇ ಇದ್ದರೂ ಬಡಿದಾಡುತ್ತೇನೆ. ಬೇರೆಯವರ ರೀತಿ ದೇಹ ಒಂದು ಕಡೆ, ಮನಸ್ಸು ಒಂದೆ ಕಡೆ ಇಟ್ಟುಕೊಂಡು ರಾಜಕೀಯ ಮಾಡಲ್ಲ ಎಂದು ಮಾತಿನಲ್ಲಿ ತಿವಿದರು.

ಗೀತಾ ಗೆಲುವು ಖಚಿತ: ಗೀತಾ ಶಿವರಾಜ್‌ ಕುಮಾರ್‌ ಅವರ ಗೆಲುವು ಹತ್ತಿರವಾಗುತ್ತಿದೆ. ಬದಲಾವಣೆಯ ಗಾಳಿ ಬೀಸುತ್ತಿದೆ. ಈಗಾಗಲೇ ಒಂದು ಸುತ್ತು ಗೀತಾ ಶಿವರಾಜ್‌ಕುಮಾರ್‌ ಹಾಗೂ ಶಿವರಾಜ್‌ಕುಮಾರ್‌ ಮತ್ತು ಕಾಂಗ್ರೆಸ್‌ ನಾಯಕರ ನೇತೃತ್ವದಲ್ಲಿ ಪ್ರಚಾರ ಮಾಡಲಾಗಿದೆ. ಹೋದ ಕಡೆಯಲ್ಲೆಲ್ಲಾ ಒಳ್ಳೆಯ ವಾತಾವರಣವಿದೆ. ಬೈಂದೂರು ಸೇರಿದಂತೆ ಗ್ರಾಮಾಂತರ
ಭಾಗಗಳಲ್ಲಿ ಕಾಂಗ್ರೆಸ್‌ ಬಗ್ಗೆ ಅತಿಯಾದ ಒಲವಿದೆ. ಈ ಒಲವು ಕಾಂಗ್ರೆಸ್‌ ಅಭ್ಯರ್ಥಿಯನ್ನು ಗೆಲ್ಲಿಸುತ್ತದೆ ಎಂದರು.

ಹಾಗೆಯೇ ಉಡುಪಿ ಚಿಕ್ಕಮಗಳೂರು ಭಾಗದಲ್ಲಿಯೂ ಜಯಪ್ರಕಾಶ್‌ ಹೆಗ್ಡೆಯವರೊಂದಿಗೆ ಪ್ರವಾಸ ಮಾಡಲಾಗಿದೆ.
ಶೃಂಗೇರಿ, ಕೊಪ್ಪ, ಅಜ್ಜಂಪುರ ಸೇರಿದಂತೆ ವಿವಿಧೆಡೆ ಚುನಾವಣಾ ಪ್ರಚಾರ ಮಾಡುತ್ತಿದ್ದೇವೆ. ಈ ಭಾಗದ ಅಭ್ಯರ್ಥಿ ಜಯಪ್ರಕಾಶ್‌ ಹೆಗಡೆ ಕೂಡ ಗೆಲಲ್ಲಿದ್ದಾರೆ. ಇದರ ಜೊತೆ ಜೊತೆಯಲ್ಲಿಯೇ ನೈರುತ್ಯ ವಿಧಾನಪರಿಷತ್‌ ಚುನಾವಣೆಗೆ ಸಂಬಂಧಿಸಿದಂತೆಯೂ ಆ ಭಾಗದ ಪದವೀಧರರ ಮತ್ತು ಶಿಕ್ಷಕರನ್ನು ಭೇಟಿಯಾಗಿ ಮತಯಾಚನೆ ಮಾಡಿದ್ದೇವೆ ಎಂದರು.

Advertisement

ಗೀತಾ ಶಿವರಾಜ್‌ಕುಮಾರ್‌ ಕಾಣಿಸಿಕೊಳ್ಳುತ್ತಿಲ್ಲ ಎಂದು ಆರೋಪವಿದೆಯಲ್ಲ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು ಈ ಆರೋಪವನ್ನು ಮಾಡುತ್ತಿರುವವರು ಬಿಜೆಪಿಗರು, ಅವರಿಗೆ ಕೆ.ಎಸ್‌. ಈಶ್ವರಪ್ಪನವರು ಬೆನ್ನು ಹತ್ತಿದ್ದಾರೆ. ತಮ್ಮನ್ನು ತಾವು ಕಾಯ್ದುಕೊಳ್ಳಲು ಅವರು ಕ್ರಿಯಾಶೀಲರಾಗಿರಬೇಕಾಗಿದೆ. ಹಾಗಾಗಿಯೇ ಹತಾಶರಾಗಿ ಅಭ್ಯರ್ಥಿ ರಾಘವೇಂದ್ರ ಓಡಾಡುತ್ತಿದ್ದರೆ ಅಷ್ಟೇ.

ಆದರೆ ನಮ್ಮ ಅಭ್ಯರ್ಥಿ ಗೀತಾ ಶಿವರಾಜ್‌ ಕುಮಾರ್‌ ವ್ಯವಸ್ಥಿತವಾಗಿಯೇ ಚುನಾವಣಾ ಪ್ರಚಾರದಲ್ಲಿದ್ದಾರೆ. ನಿಧಾನವಾಗಿಯಾದರೂ ಪ್ರಚಾರದ ಬಿರುಸು ಹೆಚ್ಚಿದೆ. ಜೆಡಿಎಸ್‌ ಮತ್ತು ಬಿಜೆಪಿಯ ಹೊಂದಾಣಿಕೆಯಿಂದ ಕಾಂಗ್ರೆಸ್‌ಗೆ
ಲಾಭವಾಗುತ್ತದೆ ಅಷ್ಟೇ. ಅದರಿಂದ ಕಾಂಗ್ರೆಸ್‌ಗೆ ಏನೂ ನಷ್ಟವಾಗುವುದಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next