ಒಂದು ಸಿನಿಮಾ ಅಂದಮೇಲೆ ಆ ಹೀರೋ, ಅಲ್ಲಿರುವ ಪಾತ್ರಕ್ಕೆ ತಕ್ಕಂತೆ ತಯಾರಾಗಲೇಬೇಕು. ಹಾಗಿದ್ದರೆ ಮಾತ್ರ ಆ ಹೀರೋ ಪರಿಪೂರ್ಣ ನಟ ಅನಿಸಿಕೊಳ್ಳೋದು. ಅದಕ್ಕಾಗಿಯೇ ಒಂದಷ್ಟು ಹೀರೋಗಳು ಪಾತ್ರಕ್ಕೆ ಏನೆಲ್ಲಾ ಬೇಕೋ ಹಾಗೆ ತಯಾರಾಗುವುದುಂಟು. ಈಗ ವಿನೋದ್‌ಪ್ರಭಾಕರ್ ಕೂಡ ಹೊಸ ಚಿತ್ರದ ಪಾತ್ರವೊಂದಕ್ಕೆ ವಿಶೇಷ ತಯಾರಿ ಮಾಡಿಕೊಂಡಿದ್ದಾರೆ. ಅದು ತಮ್ಮ ಹೊಸ ಚಿತ್ರ “ರಗಡ್’ಗಾಗಿ. ಹೌದು, ವಿನೋದ್‌ಪ್ರಭಾಕರ್ ಅಭಿನಯದ ಈ ಚಿತ್ರಕ್ಕೆ ಬುಧವಾರವಷ್ಟೇ ಮುಹೂರ್ತ ನೆರವೇರಿದೆ. ಈ ಚಿತ್ರದಲ್ಲಿ ವಿನೋದ್ ಪ್ರಭಾಕರ್ ಅವರದು ರಫ್ ಅಂಡ್ ಟಫ್ ಪಾತ್ರ. ಅದಕ್ಕಾಗಿ ಅವರು ದೇಹವನ್ನು ದಂಡಿಸಿದ್ದಾರೆ. ಇದೇ ಮೊದಲ ಸಲ ಅವರು ಸಿಕ್ಸ್ ಪ್ಯಾಕ್ ಮಾಡಿಕೊಂಡಿದ್ದಾರೆ.
ಹಾಗಂತ ಫಿಟ್ ಇರಲಿಲ್ಲವೆಂದಲ್ಲ, ಅವರು ಕಟ್ಟುಮಸ್ತ್ ಆಗಿದ್ದರೂ, ಪಾತ್ರಕ್ಕಾಗಿ ಪ್ಯಾಕ್ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲ, ಅವರು ಈಜುವುದನ್ನೂ ಕಲಿತಿದ್ದಾರೆ. ವಿನೋದ್ ಪ್ರಭಾಕರ್ ಅವರಿಗೆ ಅಷ್ಟಾಗಿ ಸ್ವಿಮ್ಮಿಂಗ್ ಬರಲ್ಲ. ಪಾತ್ರ ಅದನ್ನು ಡಿಮ್ಯಾಂಡ್ ಮಾಡಿದ ಹಿನ್ನೆಲೆಯಲ್ಲಿ ವಿನೋದ್, ಚೆನ್ನೈನಲ್ಲಿ ಈಜು ಕಲಿತಿದ್ದಾರೆ.
ಅಲ್ಲೇ ವರ್ಕೌಟ್ ಕೂಡ ಮಾಡಿದ್ದಾರೆ. ಈ ಚಿತ್ರದಲ್ಲಿ ಆರಂಭದ ದೃಶ್ಯವೇ ಅಂಡರ್ ವಾಟರ್‌ನಲ್ಲಿ ಇರುವಂಥದ್ದು. ನೀರಲ್ಲಿ ಸುಮಾರು 30 ಸೆಕೆಂಡ್‌ಗಳ ಕಾಲ ಇರುವ ದೃಶ್ಯ ಬರುವ ಹಿನ್ನೆಲೆಯಲ್ಲಿ ವಿನೋದ್ ಪ್ರಭಾಕರ್, ತಾನೇ ಅಂಡರ್‌ವಾಟರ್ ನಲ್ಲಿ ಕುಳಿತುಕೊಳ್ಳುವುದಾಗಿ ನಿರ್ಧರಿಸಿ, ಈ ತಯಾರಿ ಮಾಡಿಕೊಂಡಿದ್ದಾರೆ. ನಿರ್ದೇಶಕರು ಸಿಜಿ ಮಾಡುವ ಯೋಚನೆ ಮಾಡಿದರೂ, ಅದಕ್ಕೆ ಒಪ್ಪದ ವಿನೋದ್, ಎಷ್ಟೇ ಕಷ್ಟವಾದರೂ ಸರಿ, ನಾನು ತರಬೇತಿ ಪಡೆಯುವುದಾಗಿ ಹೇಳಿ, ಆ ದೃಶ್ಯ ಎದುರಿಸಲು ಸಜ್ಜಾಗಿದ್ದಾರೆ.
ಚೆನ್ನೈನಲ್ಲಿ ನುರಿತ ತರಬೇತುದಾರರಿಂದ ಈಜು ಕಲಿತು, ಅಂಡರ್‌ವಾಟರ್ ನಲ್ಲಿ ಇರುವುದನ್ನೂ ಪಕ್ವ ಮಾಡಿಕೊಂಡಿದ್ದಾರೆ. ಇದಕ್ಕೆ ಮುಖ್ಯವಾಗಿ ಯೋಗ ಅಗತ್ಯ. ಈಗಾಗಲೇ ವಿನೋದ್‌ಪ್ರಭಾಕರ್ ಯೋಗ ಮಾಡುತ್ತಲೇ ಬಂದಿದ್ದಾರೆ. ಯೋಗ ಅವರಿಗೆ ಹೊಸದೇನಲ್ಲ. ಆ ಯೋಗ, ಅಂಡರ್‌ವಾಟರ್‌ನ ದೃಶ್ಯಕ್ಕೂ ಸಹಕಾರಿಯಾಗಲಿದೆ ಎಂಬುದು ಅವರ ಮಾತು. ಅಂದಹಾಗೆ, “ರಗಡ್’ನಲ್ಲಿ ವಿನೋದ್ ಪ್ರಭಾಕರ್ ಪಾತ್ರ ಏನು, ಅವರಿಲ್ಲಿ ಏನಾಗಿರುತ್ತಾರೆ, ಎಂಬಿತ್ಯಾದಿ ಪ್ರಶ್ನೆಗಳಿಗೆ ನಿರ್ದೇಶಕರಿಂದ ಬಂದ ಉತ್ತರ ಸಸ್ಪೆನ್ಸ್ ಸಸ್ಪೆನ್ಸ್ ಮತ್ತು ಸಸ್ಪೆನ್ಸ್!