“ನನ್ನ ತಂದೆ ನಿನಗೆ ಈ ಇಂಡಸ್ಟ್ರಿ ಬೇಡ ಅಂದಿದ್ದರು. ನಾನು ಪಟ್ಟ ಕಷ್ಟ ಸಾಕು ನೀನು ಕಷ್ಟ ಪಡುವುದು ಬೇಡ ಅಂದಿದ್ದರು. ಆದರೂ ಬಂದೆ ಕಷ್ಟ ಅನುಭವಿಸಿದೆ. ನಾನು ಬಂದು 17 ವರ್ಷದ ಬಳಿಕ ಈಗ ಪ್ರತಿಫಲ ಸಿಕ್ಕಿದೆ. ಇದನ್ನು ಹೀಗೆ ಉಳಿಸಿಕೊಂಡು ಹೋಗುತ್ತೇನೆ…’
– ವಿನೋದ್ ಪ್ರಭಾಕರ್ ಹೀಗೆ ಹೇಳುತ್ತಲೇ ಮಾತಿಗೆ ನಿಂತರು. ಅವರು ಹೇಳಿದ್ದು “ರಗಡ್’ ಚಿತ್ರದ ಬಗ್ಗೆ. ಅಂದು ಚಿತ್ರದ ಆಡಿಯೋ ಮತ್ತು ಟ್ರೇಲರ್ ಬಿಡುಗಡೆ ಮಾಡಲಾಯಿತು. ಸೃಜನ್ ಲೋಕೇಶ್, ಅಣಜಿನಾಗರಾಜ್, ಲಹರಿ ವೇಲು, ಶಮಿತಾ ಮಲಾ°ಡ್, ರೂಪೇಶ್ ರಾಜಣ್ಣ ಹೀಗೆ ಹಲವರು ವೇದಿಕೆ ಮೇಲೇರಿ ಟ್ರೇಲರ್, ಹಾಡು ಬಿಡುಗಡೆಗೆ ಸಾಕ್ಷಿಯಾದರು. ವಿನೋದ್ ಎಲ್ಲರ ಮಾತು ಮುಗಿದ ಬಳಿಕ ಮಾತಿಗೆ ಶುರುವಿಟ್ಟುಕೊಂಡರು.
“ನಾನು ಈ ಸ್ಟೇಜ್ ಹತ್ತಲು ಕಾರಣ ನನ್ನ ತಂದೆ ಟೈಗರ್ ಪ್ರಭಾಕರ್. ಅವರು ಈ ಇಂಡಸ್ಟ್ರಿ ನನಗೆ ಸಾಕು. ನೀನು ಕಷ್ಟಪಡಬೇಡ ಅಂದಿದ್ದರು. ನಾನೂ ಕಷ್ಟಪಟ್ಟೆ. “ಟೈಸನ್’ ಸಕ್ಸಸ್ ಬಳಿಕವೂ ಕಷ್ಟಪಟ್ಟೆ .ಈಗ ಅದಕ್ಕೆ ಪ್ರತಿಫಲ ಸಿಕ್ಕಿದೆ. ಇದಕ್ಕೆ ಕಾರಣವಾದ ಅಭಿಮಾನಿಗಳಿಗೆ, ನನ್ನ ಸಿನಿಮಾ ನೋಡಿ ಹರಸಿದ ಜನರಿಗೆ, ಮಾಧ್ಯಮ ಮಿತ್ರರಿಗೆ ಮತ್ತು ಚಿತ್ರತಂಡಕ್ಕೆ ಚಿರಋಣಿ. ನಾನು “ರಗಡ್’ ಬಗ್ಗೆ ಹೆಚ್ಚು ಮಾತನಾಡಬಾರದು. ರಿಲೀಸ್ ಬಳಿಕ ಚಿತ್ರವೇ ಮಾತಾಡಬೇಕು. ಅದು ಮಾತಾಡುತ್ತೆ. ನಿರ್ಮಾಪಕ ಅರುಣ್‌ಕುಮಾರ್ ಒಳ್ಳೆಯ ಚಿತ್ರ ಮಾಡಿದ್ದಾರೆ. ಒಮ್ಮೆಯೂ ಸೆಟ್‌ಗೆ ಬರದ ಅವರು ಯಾವುದಕ್ಕೂ ಕೊರತೆ ಮಾಡಲಿಲ್ಲ. ಕೊನೆಗೆ ಒತ್ತಾಯಕ್ಕಾಗಿ ಮೂರು ದಿನ ಸೆಟ್‌ಗೆ ಬಂದಿದ್ದರಷ್ಟೇ. ಇಂತಹ ನಿರ್ಮಾಪಕರು ಇಂಡಸ್ಟ್ರಿಗೆ ಬರಬೇಕು. “ರಗಡ್’ ಚೆನ್ನಾಗಿ ಬಂದಿದೆ ಪ್ರೇಕ್ಷಕರು ಒಪ್ಪಿ, ಅಪ್ಪಿಕೊಳ್ಳಬೇಕಷ್ಟೇ. ಒಂದು ಸಿನಿಮಾ ತಯಾರಿ ಸುಲಭವಲ್ಲ. ಇಲ್ಲಿ ಶ್ರಮ,ಶ್ರದ್ಧೆ,ಭಕ್ತಿ ಇರಬೇಕು. ಏನಾದರೂ ತಪ್ಪಿದ್ದರೆ ಕ್ಷಮಿಸಿ. ಆದರೂ, ಇದೊಂದು ದಾಖಲೆ ಇದ್ದಂತೆ ಒಂದು ಪುಸ್ತಕ ಹೇಗೋ ಹಾಗೆ. ಇದೂ ಕೂಡ. ಇಲ್ಲಿ ಎಲ್ಲರೂ ಅವರವರ ಪಾತ್ರ ಚೆನ್ನಾಗಿ ಮಾಡಿದ್ದಾರೆ’ ಅಂದರು ವಿನೋದ್.
ನಿರ್ದೇಶಕ ಶ್ರೀಮಹೇಶ್‌ಗೌಡ ಅವರಿಗೆ ಇದು ಮೊದಲ ಚಿತ್ರ. ಸುಮಾರು ಚಿತ್ರಗಳಲ್ಲಿ ಕೆಲಸ ಮಾಡಿದ ಅನುಭವಗಳನ್ನು ಇಲ್ಲಿ ಬಳಸಿದ್ದಾರೆ. ಕಥೆ, ಚಿತ್ರಕಥೆ, ಸಾಹಿತ್ಯ, ಸಂಭಾಷಣೆ ಜವಾಬ್ದಾರಿಯೂ ಅವರದೇ. “ಇಲ್ಲಿ ಎಲ್ಲಾ ಹಾಡುಗಳು ಇಷ್ಟವಾಗುತ್ತವೆ. ಇಲ್ಲಿನ ಸುಂದರ ತಾಣಗಳಲ್ಲೇ ಚಿತ್ರೀಕರಣ ಮಾಡಿದ್ದೇವೆ. ಸಾಕಷ್ಟು ಹೊಸತನ ಇಲ್ಲಿದೆ. ಇದು 8 ಪ್ಯಾಕ್‌ಇರುವ ಕಾನ್ಸೆಪ್ಟ್. ಹಾಗಾಗಿ ಕನ್ನಡದಲ್ಲಿ 8 ಪ್ಯಾಕ್ ರಿಸ್ಕ್ ಯಾರು ತಗೋತ್ತಾರೆ ಎಂಬ ಪ್ರಶ್ನೆ ಬಂದಾಗ, ವಿನೋದ್ ಪ್ರಭಾಕರ್ ಉತ್ತರವಾದರು. ಅವರ ಬಳಿ
ಹೋದಾಗ, ಸಿಕ್ಸ್ ಪ್ಯಾಕ್ ಮಾಡ್ತೀನಿ, 8 ಪ್ಯಾಕ್ ಟ್ರೈ ಮಾಡ್ತೀನಿ ಅಂದರು.
ಕೊನೆಗೆ ಹತ್ತು ದಿನ ಟೈಮ್ ಕೊಡಿ ಅಂತ ಹೇಳಿ 8 ಪ್ಯಾಕ್ ಮಾಡಿದರು. ಅದು ಸಿನಿಮಾದ ಹೈಲೈಟ್ ಅಂದರು ಮಹೇಶ್‌ಗೌಡ.
ನಿರ್ಮಾಪಕ ಅರುಣ್‌ಕುಮಾರ್ ಅವರು ಏನೇ ಒಳ್ಳೆಯ ಕೆಲಸ ಮಾಡಿದರೂ ಅವರ ತಾಯಿಯನ್ನು ಕೇಳಿ ಮಾಡುತ್ತಾರಂತೆ. ಸಿನಿಮಾ ಮುನ್ನ ಅವರ ತಾಯಿ ಗ್ರೀನ್‌ಸಿಗ್ನಲ್ ಪಡೆದು ಮಾಡಿದ್ದಾರೆ. ಈಗ ಅವರಿಗೆ ತುಸು ಹೆಚ್ಚೇ ಖುಷಿ ಇದೆಯಂತೆ. ಚಿತ್ರಕ್ಕೆ ಅಭಿಮನ್‌ರಾಯ್ ಸಂಗೀತವಿದ್ದು, ಈಗಾಗಲೇ ಹಾಡುಗಳಿಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕ ಖುಷಿ ಇದೆ ಎಂದರು. ವಿನೋದ್ ಜೊತೆ ಕೆಲಸ ಮಾಡಿದ್ದು ವಿಶೇಷ ಎನ್ನುವ ಅಭಿಮಾನ್‌ರಾಯ್, ನನ್ನ ಹಿಂದಿನ ಹಾಡುಗಳಿಗಿಂತಲೂ ಇಲ್ಲಿ ಒಳ್ಳೆಯ ಹಾಡುಗಳು ಇವೆ. ಲೈಫ್ಟೈಮ್ ಗುರುತಿಸಿಕೊಳ್ಳುವ ಹಾಡು ಕೊಟ್ಟ ಹೆಮ್ಮೆ ಇದೆ ಎಂದರು.
ಜೈ ಆನಂದ್ ಛಾಯಾಗ್ರಹಣವಿದೆ. ಚಿತ್ರದಲ್ಲಿ ಚೈತ್ರಾರೆಡ್ಡಿ ನಾಯಕಿ ಉಳಿದಂತೆ ಡ್ಯಾನಿ ಕುಟ್ಟಪ್ಪ, ದೀಪಕ್ ಶೆಟ್ಟಿ, ರಾಜೇಶ್ ನಟರಂಗ, ಮಾಲತಿ ದೇಶ್‌ಪಾಂಡೆ ಇತರರು ನಟಿಸಿದ್ದಾರೆ.