ನವದೆಹಲಿ: ತಳ ಮಟ್ಟದ ಜನರನ್ನು ತಲುಪುವ ಸಲುವಾಗಿ ಬೇರೆ ಬೇರೆ ವರ್ಗದ ಕಾರ್ಮಿಕರೊಂದಿಗೆ ಬೆರೆತು ಗಮನ ಸೆಳೆದಿರುವ ಕಾಂಗ್ರೆಸ್ ಯುವರಾಜ ಈಗ ಹೊಸ ವೇಷ ಧರಿಸಿದ್ದಾರೆ. ಈ ಬಾರಿ ಅವರು ದೆಹಲಿಯ ಆನಂದ್ ವಿಹಾರ್ ರೈಲ್ವೇ ಸ್ಟೇಷನ್‌ನಲ್ಲಿ ಕೆಂಪು ಅಂಗಿ ಧರಿಸಿ ಕೂಲಿಯಾಗಿ ಕಾಣಿಸಿಕೊಂಡಿದ್ದಾರೆ. ತೋಳಿಗೆ ಬ್ಯಾಜ್ ಒಂದನ್ನು ಕಟ್ಟಿಕೊಂಡು ತಲೆಯ ಮೇಲೊಂದು ಸೂಟ್‌ಕೇಸ್ ಇಟ್ಟು ಥೇಟ್ ಕೂಲಿಯ ರೀತಿಯೇ ರೈಲ್ವೇ ನಿಲ್ದಾಣದಲ್ಲಿ ಕಾಣಿಸಿಕೊಂಡ ರಾಹುಲ್ ಗಾಂಧಿ ಅವರ ವಿಡಿಯೋ ಈಗ ಫುಲ್ ವೈರಲ್ ಆಗಿದೆ.
ರೈಲ್ವೇ ನಿಲ್ದಾಣದ ಕೂಲಿಗಳ ಜೊತೆಗೆ ಬೆರೆತು ಅವರೊಂದಿಗೆ ರಾಹುಲ್ ಗಾಂಧಿ ಸಂವಾದ ನಡೆಸಿದ್ದಾರೆ. ಕೂಲಿಯೊಬ್ಬ ರಾಹುಲ್ ಗಾಂಧಿ ಅವರ ತೋಳಿಗೆ ಬ್ಯಾಜ್ ಒಂದನ್ನು ಕಟ್ಟುತ್ತಿರುವ ಚಿತ್ರಗಳೂ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ರೈಲ್ವೇ ನಿಲ್ದಾಣದಲ್ಲಿ ದುಡಿಯುತ್ತಿರುವ ಕೂಲಿಗಳ ಸಂಕಷ್ಟ ಅರಿಯಲು ರಾಹುಲ್ ಗಾಂಧಿ ದೆಹಲಿಯ ಆನಂದ್ ವಿಹಾರ್ ರೈಲ್ವೇ ಸ್ಟೇಷನ್‌ಗೆ ತೆರಳಿದ್ದರು. ಈ ವೇಳೆ ಕೂಲಿಗಳ ಜೊತೆ ಸಂವಾದ ನಡೆಸಿದ ಅವರೊಂದಿಗೆ ಕೂಲಿಗಳು ತಾವು ಎದುರಿಸುತ್ತಿರುವ ಕಷ್ಟಗಳನ್ನು ಹಂಚಿಕೊಂಡಿದ್ದಾರೆ.
“ಜನರ ನಾಯಕ ರಾಹುಲ್ ಗಾಂಧಿ ಅವರು ಇಂದು ದೆಹಲಿಯ ಆನಂದ್ ವಿಹಾರ್ ರೈಲ್ವೇ ಸ್ಟೇಷನ್‌ನಲ್ಲಿ ದುಡಿಯುತ್ತಿರುವ ಕೂಲಿಗಳ ಜೊತೆ ಬೆರೆತು ಅವರ ಸಂಕಷ್ಟ ಆಲಿಸಿದ್ದಾರೆ. ಇತ್ತೀಚೆಗೆ ರೈಲ್ವೇ ನಿಲ್ದಾಣದಲ್ಲಿ ದುಡಿಯುತ್ತಿರುವ ಕೂಲಿಗಳು ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ಅವರೊಂದಿಗೆ ತಮ್ಮ ಕಷ್ಟಗಳನ್ನು ಹೇಳಿಕೊಳ್ಳುವ ಇರಾದೆ ವ್ಯಕ್ತಪಡಿಸಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದನ್ನು ಗಮನಿಸಿದ ರಾಹುಲ್ ಗಾಂಧಿ ಸ್ವತಃ ಇಂದು ರೈಲ್ವೇ ಸ್ಟೇಷನ್‌ಗೆ ಆಗಮಿಸಿ ಕೂಲಿ ಜನರ ಸಂಕಷ್ಟ ಆಲಿಸಿದ್ದಾರೆ” ಎಂದು ಕಾಂಗ್ರೆಸ್‌ನ ಅಧಿಕೃತ `X’ ಖಾತೆ ಟ್ವೀಟ್ ಮಾಡಿದೆ.
ಭಾರತದ ತಳಮಟ್ಟದ ಜನರನ್ನು ತಲುಪುವ ಉದ್ದೇಶದಿಂದ ಬೇರೆ ಬೇರೆ ರೀತಿಯ ಕಾರ್ಮಿಕರನ್ನು ರಾಹುಲ್ ಗಾಂಧಿ ಭೇಟಿ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಡೆಲಿವರಿ ಬಾಯ್ಸ್‌ಗಳ ಜೊತೆ ಬೆರೆತಿದ್ದ ರಾಗಾ ಬಳಿಕ ಅವರೊಂದಿಗೆ ಸ್ಕೂಟರ್‌ನಲ್ಲಿ ಸುತ್ತಿದ್ದರು. ದೆಹಲಿಯ ಆಜಾದ್‌ಪುರ್ ಮಂದಿಯ ಗಲ್ಲಿಗಲ್ಲಿಗಳಲ್ಲಿ ಸುತ್ತಾಡಿ ಮೆಕ್ಯಾನಿಕ್‌ಗಳು, ಕಾರ್ಮಿಕರು, ವರ್ತಕರ ಜೊತೆಗೂ ಸಂವಾದ ನಡೆಸಿದ್ದರು.
ಇದನ್ನೂ ಓದಿ: Fugitive economic offender: ಚೋಕ್ಸಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಬಾಂಬೆ ಹೈಕೋರ್ಟ್