Advertisement

“ರಾಗಾ ಫ್ರಮ್‌ ಕರ್ನಾಟಕ’ಅಭಿಯಾನ ಆರಂಭ

01:34 AM Mar 16, 2019 | |

ಬೆಂಗಳೂರು: ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿಯವರನ್ನು ರಾಜ್ಯದಿಂದ ಚುನಾವಣೆಗೆ ಸ್ಪರ್ಧಿಸುವಂತೆ ರಾಜ್ಯ ಕಾಂಗ್ರೆಸ್‌ ನಾಯಕರು “ರಾಗಾ ಫ್ರಮ್‌ ಕರ್ನಾಟಕ’ ಎಂದು ಟ್ಯಾಗ್‌ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭಿಸಿದ್ದಾರೆ. 

Advertisement

ದಕ್ಷಿಣ ಭಾರತದ ಯಾವುದಾದರೂ ಕ್ಷೇತ್ರದಲ್ಲಿ ರಾಹುಲ್‌ ಗಾಂಧಿ ಸ್ಪರ್ಧೆ ಮಾಡಿದರೆ, ಈ ಭಾಗದ 6 ರಾಜ್ಯಗಳಲ್ಲಿ ಕಾಂಗ್ರೆಸ್‌ ಹಾಗೂ ಮೈತ್ರಿ ಪಕ್ಷಗಳ ಅಭ್ಯರ್ಥಿಗಳ ಗೆಲುವಿಗೆ ಅನುಕೂಲವಾಗುತ್ತದೆ ಎಂಬ ಲೆಕ್ಕಾಚಾರದಲ್ಲಿ ರಾಹುಲ್‌ ಗಾಂಧಿಯವರನ್ನು ದಕ್ಷಿಣದಿಂದ ಕಣಕ್ಕಿಳಿಸುವ ಹೊಸ ಕಾರ್ಯತಂತ್ರ ಆರಂಭವಾಗಿದೆ. ಅದರ ಭಾಗವಾಗಿಯೇ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಸೇರಿ ಪಕ್ಷದ ರಾಜ್ಯ ನಾಯಕರು ರಾಹುಲ್‌ ಕರ್ನಾಟಕದಿಂದ ಸ್ಪರ್ಧಿಸಲಿ ಎಂದು ಮನವಿ ಮಾಡಿದ್ದಾರೆ. ಎರಡು ದಿನಗಳ ಹಿಂದೆ ರಾಹುಲ್‌ ಗಾಂಧಿ ತಮಿಳುನಾಡಿಗೆ ಆಗಮಿಸಿದ್ದ ಸಂದರ್ಭದಲ್ಲಿ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕಾರ್ಯದರ್ಶಿ ಮಾಣಿಕ್ಯಂ ಠಾಗೂರ್‌, ರಾಹುಲ್‌ ಗಾಂಧಿ ಮುಂದೆ ಈ ಪ್ರಸ್ತಾವನೆ ಇಟ್ಟಿದ್ದಾರೆ ಎನ್ನಲಾಗಿದೆ. ಅದೇ ಕಾರಣಕ್ಕೆ ರಾಜ್ಯದಿಂದ ಸ್ಪರ್ಧಿಸುವಂತೆ ರಾಜ್ಯ ಕಾಂಗ್ರೆಸ್‌ ನಾಯಕರು ಆಹ್ವಾನ ನೀಡುತ್ತಿದ್ದಾರೆ ಎನ್ನಲಾಗುತ್ತಿದೆ. ರಾಜ್ಯದಿಂದ ಮಾಜಿ ಪ್ರಧಾನಿ ಇಂದಿರಾಗಾಂಧಿ ಹಾಗೂ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಕೂಡ ಸ್ಪರ್ಧೆ ಮಾಡಿ ಗೆಲುವು ಪಡೆದಿರುವ ಇತಿಹಾಸ ಇರುವುದರಿಂದ ಕರ್ನಾಟಕದಿಂದ ರಾಹುಲ್‌ ಗಾಂಧಿ ಸ್ಪರ್ಧಿಸಿದರೆ, ಗೆಲುವು ಸುಲಭವಾಗಲಿದ್ದು, ಇತರ ರಾಜ್ಯಗಳಿಗೂ ಇದರಿಂದ ಅನುಕೂಲವಾಗಲಿದೆ ಎಂದು ರಾಜ್ಯ ನಾಯಕರು ಲೆಕ್ಕಾಚಾರ ಹಾಕಿದ್ದಾರೆ.

ಮೈಸೂರು ಅಥವಾ ಬೀದರ್‌: ದಕ್ಷಿಣ ಭಾಗದಲ್ಲಿ ಕಾಂಗ್ರೆಸ್‌ ಪ್ರಬಲವಾಗಿರುವ ಕರ್ನಾಟಕದ ಯಾವುದಾದರೂ ಒಂದು ಕ್ಷೇತ್ರದಲ್ಲಿ ರಾಹುಲ್‌ ಸ್ಪರ್ಧೆ ಮಾಡಿದರೆ, ಈ ಭಾಗದಲ್ಲಿ ಅವರ ಪ್ರಭಾವದಿಂದ ಮೈತ್ರಿ ಪಕ್ಷಗಳಿಗೂ ಹೆಚ್ಚಿನ ಸ್ಥಾನ ಗೆಲ್ಲಲು ಅನುಕೂಲವಾಗುತ್ತದೆ ಎನ್ನುವುದು ಇದರ ಹಿಂದಿರುವ ಲೆಕ್ಕಾಚಾರ. ರಾಜ್ಯದಲ್ಲಿ ಈಹಿಂದೆ ರಾಹುಲ್‌ ಗಾಂಧಿ ಬೀದರ್‌ನಿಂದ ಸ್ಪರ್ಧಿಸುವಂತೆ ಆಗ್ರಹ ಕೇಳಿ ಬಂದಿತ್ತು. ಆದರೆ, ಈ ಬಗ್ಗೆ ಅವರು ಯಾವುದೇ ಪ್ರತಿಕ್ರಿಯೆ ನೀಡದೇ ಮೌನವಾಗಿದ್ದರು. ಈಗ ಬೀದರ್‌ ಜೊತೆಗೆ ಸಿದ್ದರಾಮಯ್ಯ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಮೈಸೂರು ಕ್ಷೇತ್ರದಿಂದಲೂ ಸ್ಪರ್ಧಿಸುವಂತೆ ಮನವಿ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಕರ್ನಾಟಕ ಯಾವಾಗಲೂ ರಾಷ್ಟ್ರೀಯ ಕಾಂಗ್ರೆಸ್‌ ನಾಯಕರನ್ನು ಬೆಂಬಲಿಸಿದೆ. ಭಾವಿ ಪ್ರಧಾನಿ ರಾಹುಲ್‌ ಗಾಂಧಿ ಅವರು ಕರ್ನಾಟಕದಿಂದ ಸ್ಪರ್ಧೆ ಮಾಡಲು ಬಯಸುತ್ತೇವೆ.
● ಸಿದ್ದರಾಮಯ್ಯ, ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ

ರಾಹುಲ್‌ ಗಾಂಧಿಯವರು ಉತ್ತರ ಭಾರತದಿಂದಲೂ ಸ್ಪರ್ಧಿಸಲಿ ಮತ್ತು ದಕ್ಷಿಣದ ಕರ್ನಾಟಕದಿಂದಲೂ ಸ್ಪರ್ಧಿಸಲಿ
ಎಂದು ಆಶಿಸುತ್ತೇನೆ.

● ದಿನೇಶ್‌ ಗುಂಡೂರಾವ್‌, ಕೆಪಿಸಿಸಿ ಅಧ್ಯಕ್ಷ

Advertisement
Advertisement

Udayavani is now on Telegram. Click here to join our channel and stay updated with the latest news.

Next