ಹೊಸದಿಲ್ಲಿ : ರಫೇಲ್ ಡೀಲ್ ವಿಷಯದಲ್ಲಿ ಪ್ರಶಾಂತ್ ಭೂಷಣ್ ಮತ್ತು ಇತರರು ಸಲ್ಲಿಸಿರುವ ಸೋರಿಹೋಗಿರುವ ದಾಖಲೆಗಳನ್ನು ಪರಿಶೀಲಿಸಬೇಕೇ ಬೇಡವೇ ಎಂಬ ಬಗೆಗಿನ ತನ್ನ ಆದೇಶವನ್ನು ವರಿಷ್ಠ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಸುಪ್ರೀಂ ಕೋರ್ಟ್ ಪೀಠ ಕಾದಿರಿಸಿದೆ.
ಕಳೆದ ವರ್ಷ ಡಿಸೆಂಬರ್ ನಲ್ಲಿ ಸುಪ್ರೀಂ ಕೋರ್ಟ್ ರಫೇಲ್ ಡೀಲ್ ವಿಚಾರದಲ್ಲಿ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯನ್ನು ಶಂಕಿಸುವ ಪ್ರಶ್ನೆಯೇ ಉದ್ಭವಾಗುವುದಿಲ್ಲ ಎಂದು ತೀರ್ಪು ನೀಡಿತ್ತು.
ಆ ತೀರ್ಪಿನ ಪರಾಮರ್ಶೆ ಕೋರಿ ವಕೀಲ ಪ್ರಶಾಂತ್ ಭೂಷಣ್ ಮತ್ತು ಇತರರು ಸುಪ್ರೀಂ ಕೋರ್ಟಿಗೆ ಮೇಲ್ಮನವಿ ಸಲ್ಲಿಸಿದ್ದರು.
ವಿಚಾರಣೆಯ ವೇಳೆ ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್ ಅವರು “ಸರಕಾರ ಸಿಎಜಿ ವರದಿಯನ್ನು ಸಲ್ಲಿಸುವಲ್ಲಿ ಒಂದು ತಪ್ಪು ಮಾಡಿತ್ತು. ಅದರ ಮೊದಲ ಮೂರು ಪುಟಗಳು ಕಳೆದು ಹೋಗಿತ್ತು. ಹಾಗಾಗಿ ಸರಕಾರವು ಆ ಪುಟಗಳನ್ನು ದಾಖಲೆಗೆ ತರಲು ಬಯಸುತ್ತದೆ’ ಎಂದು ಕೋರ್ಟಿಗೆ ತಿಳಿಸಿದರು.
ಕೇಂದ್ರದಲ್ಲಿನ ಬಿಜೆಪಿ ನೇತೃತ್ವದ ಸರಕಾರ ಅನಿಲ್ ಅಂಬಾನಿ ಅವರಿಗೆ ರಫೇಲ್ ಗುತ್ತಿಗೆಯನ್ನು ದೊರಕಿಸುವಲ್ಲಿ ಫ್ರಾನ್ಸ್ ಡಸಾಲ್ಟ್ ಕಂಪೆನಿಯೊಂದಿಗೆ ಅತ್ಯಧಿಕ ದರಗಳಲ್ಲಿ ರಫೇಲ್ ಡೀಲ್ ಅಂತಿಮಗೊಳಿಸಿತ್ತು ಎಂದು ಆರೋಪಿಸಿ ಅರ್ಜಿದಾರರು ಸಲ್ಲಿಸಿದ್ದ ಮನವಿಗಳನ್ನು ಸುಪ್ರೀಂ ಕೋರ್ಟ್ ಕಳೆದ ವರ್ಷ ಡಿಸೆಂಬರ್‌ನಲ್ಲಿ ವಜಾ ಮಾಡಿತ್ತು.