ಮುಂಬಯಿ : ‘ರಫೇಲ್ ಫೈಟರ್ ಜೆಟ್ ಡೀಲ್ ನಡೆದದ್ದು ಸೇನೆಯನ್ನು ಬಲಪಡಿಸುವುದಕ್ಕೋ ಸಂಕಷ್ಟದಲ್ಲಿರುವ ಉದ್ಯಮಿಯನ್ನು ಉದ್ಧರಿಸಲಿಕ್ಕೋ ಎಂಬ ಪ್ರಶ್ನೆಯನ್ನು ಪ್ರದಾನಿ ನರೇಂದ್ರ ಮೋದಿ ಬೇಗನೆ ಉತ್ತರಿಸಬೇಕಾಗಿದೆ’ ಎಂದು ಶಿವ ಸೇನೆ ಇಂದು ಶನಿವಾರ ಆಗ್ರಹಿಸಿದೆ.
‘ಭಾರತ ಮತ್ತು ಫ್ರಾನ್ಸ್ ನಡುವೆ 59,000 ಕೋಟಿ ರೂ.ಗಳ ರಫೇಲ್ ಫೈಟರ್ ಜೆಟ್ ಖರೀದಿ ವ್ಯವಹಾರದ ಮಾತುಕತೆ ಸಾಗುತ್ತಿದ್ದಾಗ ಪ್ರಧಾನಿ ಕಾರ್ಯಾಲಯ ಸಮಾನಂತರ ಚರ್ಚೆ ನಡೆಸುತ್ತಿದ್ದುದನ್ನು ರಕ್ಷಣಾ ಸಚಿವಾಲಯ ಗಂಭೀರವಾಗಿ ಆಕ್ಷೇಪಿಸಿತ್ತು’ ಎಂಬ ವಿಷಯವನ್ನು “ದಿ ಹಿಂದೂ’ ಆಂಗ್ಲ ದೈನಿಕ ನಿನ್ನೆ ಶುಕ್ರವಾರ ಪ್ರಕಟಿಸಿರುವ ಹಿನ್ನೆಲೆಯಲ್ಲಿ ಶಿವಸೇನೆ ಪ್ರಧಾನಿ ಮೋದಿಗೆ ಈ ಸವಾಲನ್ನು ಹಾಕಿದೆ.
ಶಿವ ಸೇನೆ ತನ್ನ ಸಾಮ್ನಾ ಮುಖವಾಣಿಯಲ್ಲಿ ಬರೆದಿರುವ ಸಂಪಾದಕೀಯದಲ್ಲಿ, ” ಪ್ರಧಾನಿ ಮೋದಿ ನಿನ್ನೆ ಗುರುವಾರವಷ್ಟೇ ಸಂಸತ್ತಿನಲ್ಲಿ ರಫೇಲ್ ಡೀಲ್ ಸಮರ್ಥಿಸಿಕೊಂಡು ದೇಶಪ್ರೇಮದ ಬಗ್ಗೆ ಮಾತನಾಡಿದ್ದಾರೆ; ಅದರ ಮರುದಿನವೇ ಪತ್ರಿಕೆಯಲ್ಲಿ ಬ್ಲ್ಯಾಕ್ ಪೇಜ್ ಪ್ರಕಟವಾಗಿದೆ. ಇದರಿಂದಾಗಿ ದೇಶಪ್ರೇಮದ ಘೋಷಣೆಗಳನ್ನು ಕೂಗುವವರು ಮತ್ತು ಸದನದಲ್ಲಿ ಮೇಜು ಗುದ್ದುವವರು ಮೌನಿಗಳಾಗಿದ್ದಾರೆ’ ಎಂದು ಶಿವ ಸೇನೆ ಕಟಕಿಯಾಡಿದೆ.
ಯಾರ ಹೆಸರನ್ನೂ ನೇರವಾಗಿ ಉಲ್ಲೇಖೀಸದೆ ಶಿವ ಸೇನೆ, “ರಫೇಲ್ ಡೀಲ್ ದೇಶದ ವಾಯು ಪಡೆಯನ್ನು ಬಲಿಷ್ಠಗೊಳಿಸುವ ಉದ್ದೇಶದಿಂದ ನಡೆದಿದೆಯೋ ಹಣಕಾಸು ಸಂಕಷ್ಟದಲ್ಲಿರುವ ಓರ್ವ ಉದ್ಯಮಿಯನ್ನು ಉದ್ಧರಿಸುವುದಕ್ಕೋಸ್ಕರ ನಡೆದಿದೆಯೋ ಎಂಬ ಪ್ರಶ್ನೆಗೆ ಪ್ರಧಾನಿ ಮೋದಿ ಉತ್ತರಿಸುವುದನ್ನು ನಿರೀಕ್ಷಿಸಲಾಗುತ್ತಿದೆ” ಎಂದು ಹೇಳಿದೆ.
‘ರಾಜಕೀಯ ವಿರೋಧಿಗಳು ನಾಶವಾಗಬಹುದು; ಆದರೆ ಸತ್ಯ ಮಾತ್ರ ಕೊನೆಗೂ ಜೀವಂತವಾಗಿರುತ್ತದೆ’ ಎಂದು ಶಿವ ಸೇನೆ, ರಾಹುಲ್ ಗಾಂಧಿಯನ್ನು ದೃಷ್ಟಿಯಲ್ಲಿರಿಸಿಕೊಂಡು ಪರೋಕ್ಷವಾಗಿ ಹೇಳಿದೆ.