ಹೊಸದಿಲ್ಲಿ: ರಫೇಲ್ ಒಪ್ಪಂದಕ್ಕೆ ಸಂಬಂಧಿಸಿದ ವಿಚಾರಣೆ ಕುತೂಹಲದ ಘಟ್ಟ ತಲುಪಿದೆ. ಬುಧವಾರ ಯುದ್ಧ ವಿಮಾನದ ಅಗತ್ಯವನ್ನು ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಸುಪ್ರೀಂ ಕೋರ್ಟ್‌ನ ಮುಂದಿಟ್ಟಿದ್ದಾರೆ. ಇದರಲ್ಲಿ ಸುಪ್ರೀಂ ಕೋರ್ಟ್ ಮಧ್ಯ ಪ್ರವೇಶ ಮಾಡಬಾರದು ಎಂದು ವೇಣುಗೋಪಾಲ್ ಹೇಳಿದ್ದು, ಎಜಿ ಮತ್ತು ನ್ಯಾ| ಕೆ.ಎಂ. ಜೋಸೆಫ್ ನಡುವೆ ಮಾತಿನ ಚಕಮಕಿಗೂ ಕಾರಣವಾಯಿತು.
ರಫೇಲ್ ಡೀಲ್‌ಗೆ ಸಂಬಂಧಿಸಿ ಕ್ಲೀನ್‌ಚಿಟ್ ನೀಡಿದ್ದ ಸುಪ್ರೀಂ ತೀರ್ಪನ್ನು ಮರು ಪರಿಶೀಲಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ಬುಧವಾರ ನಡೆದಿದ್ದು, ರಫೇಲ್‌ಗೆ ಸಂಬಂಧಿಸಿದ ದಾಖಲೆಗಳ ಮಾಹಿತಿಯನ್ನು ರಕ್ಷಣಾ ಸಚಿವಾಲಯದಿಂದ ಕಳವು ಮಾಡಲಾಗಿದೆ ಎಂದು ಕೇಂದ್ರ ಸರಕಾರವು ಕೋರ್ಟ್‌ಗೆ ಮಾಹಿತಿ ನೀಡಿತು. ಈ ಸಂದರ್ಭದಲ್ಲಿ ಮರುಪರಿಶೀಲನ ಅರ್ಜಿಯ ವಿಚಾರಣೆ ನಡೆಸದಂತೆ ಎಜಿ ವೇಣುಗೋಪಾಲ್ ಮನವಿ ಮಾಡಿದರು.
ವಾದ-ಪ್ರತಿವಾದದ ವೇಳೆ, ಇತ್ತೀಚೆಗಿನ ಭಾರತ- ಪಾಕ್ ಪ್ರಕ್ಷುಬ್ಧತೆಯ ವಿದ್ಯಮಾನವನ್ನು ಉಲ್ಲೇಖೀಸಿದ ವೇಣುಗೋಪಾಲ್, ಪಾಕಿಸ್ಥಾನವು ಇತ್ತೀಚೆಗೆ ಎಫ್-16 ಯುದ್ಧ ವಿಮಾನವನ್ನು ಭಾರತದ ವಿರುದ್ಧ ಪ್ರಯೋಗಿಸಿತ್ತು. ಇಂಥ ಸಂದರ್ಭದಲ್ಲಿ ದೇಶ ವನ್ನು ರಕ್ಷಿಸಿಕೊಳ್ಳಲು ನಮಗೆ ರಫೇಲ್ ಯುದ್ಧ ವಿಮಾನ ಬೇಕಾಗುತ್ತದೆ. ರಫೇಲ್‌ನ ತುರ್ತು ಅಗತ್ಯ ದೇಶಕ್ಕಿದೆ. ಹೀಗಿರುವಾಗ ವಿಚಾರಣೆಯ ನೆಪದಲ್ಲಿ ಯುದ್ಧ ವಿಮಾನ ಖರೀದಿ ವಿಳಂಬ ವಾಗಬಾರದು’ ಎಂದು ವಾದಿಸಿದರು. ಜತೆಗೆ ನಮ್ಮಲ್ಲಿ ಎಷ್ಟು ಯುದ್ಧ ವಿಮಾನಗಳಿವೆ ಎಂಬುದು ಸುಪ್ರೀಂ ಕೋರ್ಟ್‌ಗೆ ಗೊತ್ತಿದೆಯೇ ಎಂದೂ ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾ| ಕೆ.ಎಂ. ಜೋಸೆಫ್, “ಒಂದು ವೇಳೆ ಘೋರ ಅಪರಾಧವೊಂದು ನಡೆದರೆ ಆಗಲೂ ನೀವು ರಾಷ್ಟ್ರೀಯ ಭದ್ರತೆಯಡಿ ಆಶ್ರಯ ಪಡೆಯುತ್ತೀರಾ’ ಎಂದು ಪ್ರಶ್ನಿಸಿದರು. ಅಲ್ಲದೆ, ಬೋಫೋರ್ಸ್ ಹಗರಣದ ವಿಚಾರಕ್ಕೆ ಬಂದಾಗಲೂ ಇದೇ ರೀತಿ ಹೇಳುತ್ತಿದ್ದಿರಾ ಎಂದೂ ಕೇಳಿದರು. ವಾದ-ಪ್ರತಿವಾದದ ಬಳಿಕ ವಿಚಾರಣೆಯನ್ನು ಮಾ.14ಕ್ಕೆ ಮುಂದೂಡಲಾಯಿತು.