ಕಲಬುರಗಿ: ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ಬಹುಕೋಟಿ ಹಗರಣ ನಡೆದಿದೆ ಎಂಬುದಾಗಿ ಸದನದೊಳಗೆ ಹಾಗೂ ಹೊರಗೆ ಕಾಂಗ್ರೆಸ್ ಹೋರಾಟ ಮಾಡಿದ್ದರೂ ಪ್ರಧಾನಮಂತ್ರಿಗಳು ಕ್ಯಾರೇ ಎನ್ನುತ್ತಿಲ್ಲ ಎಂದು ಕಾಂಗ್ರೆಸ್ ಸಂಸದೀಯ ನಾಯಕ ಡಾ. ಮಲ್ಲಿಕಾರ್ಜುನ ಖರ್ಗೆ ಟೀಕಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿಗೆ ಪ್ರಾಮಾಣಿಕತೆ ಇದ್ದರೆ ಸದನ ಸಮಿತಿ ರಚಿಸಿ ಹಗರಣವನ್ನು ತನಿಖೆಗೆ ಒಳಪಡಿಸಲಿ. ನಾವು ಈ ಹಿಂದೆ ಭೋಪೋರ್ಸ್ ಹಗರಣದಲ್ಲಿ ಸದನ ಸಮಿತಿ ರಚಿಸಿದ್ದೆವು ಎಂದು ಹೇಳಿದರು.
ಪ್ರಧಾನಿ ಮೋದಿಯವರು ಅನಿಲ ಅಂಬಾನಿ ಅವರನ್ನು ಕರೆದುಕೊಂಡು ಫ್ರಾನ್ಸ್‌ಗೆ ತೆರಳಿದ್ದರು. ನಂತರ ಫ್ರಾನ್ಸ್ ಅಧ್ಯಕ್ಷರ ಮೇಲೆ ಒತ್ತಡ ಹೇರಿ ರಿಲಯನ್ಸ್ ಸಂಸ್ಥೆಗೆ ರಫೇಲ್ ಯುದ್ಧ ವಿಮಾನ ಉತ್ಪಾದನೆಗೆ ಟೆಂಡರ್ ನೀಡಿದ್ದಾರೆ. ರಫೇಲ್ ಯುದ್ಧ ವಿಮಾನ ಉತ್ಪಾದನೆಯನ್ನು ಎಚ್‌ಎಎಲ್‌ಗೆ ವಹಿಸಿದ್ದರೆ ಸಾವಿರಾರು ಜನರಿಗೆ ಉದ್ಯೋಗ ದೊರಕುತ್ತಿತ್ತು ಎಂದರು.
ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್‌ಗೆ 13 ಸ್ಥಾನ ಬಿಟ್ಟು ಕೊಡುವ ಬಗ್ಗೆ ಪಕ್ಷದ ವತಿಯಿಂದ ಸಭೆ ಕರೆದು ತೀರ್ಮಾನ ಕೈಗೊಳ್ಳಲಾಗುವುದು. ಹೊಂದಾಣಿಕೆ ಅಥವಾ ಸ್ಥಾನ ಬಿಟ್ಟು ಕೊಡುವ ವಿಚಾರ ಹೈಕಮಾಂಡ್‌ಗೆ ಬಿಟ್ಟಿದ್ದು.
– ಡಾ| ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಸಂಸದೀಯ ನಾಯಕ.