ಮೈಸೂರು: ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ ಎನ್ನುವುದಾದರೆ ಕೇಂದ್ರ ಸರ್ಕಾರ, ಪ್ರಕರಣವನ್ನು ಜಂಟಿ ಸದನ ಸಮಿತಿಗೆ ಒಪ್ಪಿಸಲಿ ಎಂದು ಕೇಂದ್ರದ ಮಾಜಿ ಸಚಿವ ಪಲ್ಲಂರಾಜು ಆಗ್ರಹಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಫೇಲ್ ಯುದ್ಧ ವಿಮಾನ ಖರೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಯಾವುದೇ ಕ್ಲೀನ್‌ಚಿಟ್ ನೀಡಿಲ್ಲ. ಈ ಪ್ರಕರಣ ಸುಪ್ರೀಂಕೋರ್ಟ್ ವ್ಯಾಪ್ತಿಗೆ ಬರುವುದಿಲ್ಲ ಎಂಬ ಕಾರಣಕ್ಕೆ ಪ್ರಕರಣವನ್ನು ವಜಾ ಮಾಡಿದೆ. ಈ ಪ್ರಕರಣದಿಂದ ಕೇಂದ್ರ ಸರ್ಕಾರಕ್ಕೆ ಕ್ಲೀನ್‌ಚಿಟ್ ಸಿಕ್ಕಿದೆ ಎಂಬಂತೆ ಬಿಂಬಿಸಲಾಗುತ್ತಿದೆ ಎಂದು ದೂರಿದರು.
ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ತಪ್ಪು ಮಾಹಿತಿ ನೀಡಿ ದಿಕ್ಕು ತಪ್ಪಿಸಿದೆ. ಹಗರಣ ಸಂಬಂಧ ವಿಮಾನಗಳ ಬೆಲೆ ನಿಗದಿ ಅಥವಾ ಅನಿಲ್ ಅಂಬಾನಿ ಒಡೆತನದ ಕಂಪನಿಗೆ ನೀಡಿರುವ ಗುತ್ತಿಗೆಗಳಲ್ಲಿ ಹಗರಣ ಸಾಬೀತುಪಡಿಸಲು ಸುಪ್ರೀಂಕೋರ್ಟ್‌ಗೆ ಸಂವಿಧಾನದ ಪರಿಚ್ಛೇದ 136 ಮತ್ತು 32ರ ಅಡಿಯಲ್ಲಿ ಅವಕಾಶವಿಲ್ಲ ಎಂದು ಸುಪ್ರೀಂಕೋರ್ಟ್ ತಿಳಿಸಿತ್ತು. ವಿಮಾನ ಖರೀದಿಯ ಗುತ್ತಿಗೆ 59 ಸಾವಿರ ಕೋಟಿ ರೂ.ಆಗಿದ್ದು, ಈ ವ್ಯವಹಾರದಲ್ಲಿ ಹಗರಣ ನಡೆದಿದೆ. ಇದರ ತನಿಖೆ ನಡೆಸಲು ಜಂಟಿ ಸದನ ಸಮಿತಿಗೆ ಮಾತ್ರ ಅವಕಾಶವಿದೆ ಎಂದರು.
ಈ ಪ್ರಕರಣ ಸುಪ್ರೀಂಕೋರ್ಟ್ ವ್ಯಾಪ್ತಿಗೆ ಬರುವುದಿಲ್ಲ ಎಂಬುದು ಕಾಂಗ್ರೆಸ್‌ಗೆ ತಿಳಿದಿತ್ತು. ಆದರೆ, ಹಿರಿಯ ವಕೀಲರಾದ ಪ್ರಶಾಂತ್‌ಭೂಷಣ್, ಅರುಣ್ ಶೌರಿ, ಜಸ್ವಂತ್ ಸಿನ್ಹಾ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮೂಲಕ ಪ್ರಶ್ನಿಸಿದ್ದರು. 2012ರಲ್ಲಿಯೇ ಆಪ್‌ಸೆಟ್ ಒಪ್ಪಂದಕ್ಕೆ ರಿಲಯನ್ಸ್ ಕಂಪನಿ ಅರ್ಜಿ ಹಾಕಿತ್ತು. ಇದನ್ನು ಬಿಜೆಪಿಯವರು ಮುಚ್ಚಿದ ಲಕೋಟೆಯಲ್ಲಿಯೇ ನೀಡಿದ್ದಾರೆ.
ಇದರಲ್ಲಿ ತಪ್ಪು ಮಾಹಿತಿ ಇದ್ದು, ವಿಮಾನ ತಯಾರಿಕೆಯಲ್ಲಿ ಅನುಭವ ಇಲ್ಲದ ರಿಲಯನ್ಸ್ ಕಂಪನಿಗೆ ನೀಡಿದೆ. ಈ ಹಿಂದೆ ಕಾಂಗ್ರೆಸ್ ಸರ್ಕಾರದ ಒಪ್ಪಂದದ ಪ್ರಕಾರ ರಫೇಲ್ ವಿಮಾನ ಖರೀದಿಗೆ 526 ಕೋಟಿ ರೂ. ನಿಗದಿಪಡಿಸಿತ್ತು. ಆದರೆ, ಮೋದಿ ಸರ್ಕಾರ 1620 ಕೋಟಿ ರೂ.ನೀಡಿದೆ. ಈ ಬಗ್ಗೆ ಸರ್ಕಾರದ ಬಳಿ ಉತ್ತರವಿಲ್ಲ ಎಂದು ಟೀಕಿಸಿದರು.
ರಫೇಲ್ ವಿಮಾನಗಳ ಬೆಲೆಯನ್ನು ಸಿಎಜಿ ಪರಿಶೀಲಿಸಿ, ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ಒಪ್ಪಿಸಿದ್ದೇವೆ ಎಂಬ ದೊಡ್ಡ ಸುಳ್ಳನ್ನು ಲಿಖೀತವಾಗಿ ನೀಡಿರುವುದರಿಂದಲೇ ಸುಪ್ರೀಂಕೋರ್ಟ್ ಈ ರೀತಿ ತೀರ್ಪು ನೀಡಲು ಸಾಧ್ಯವಾಗಿದೆ.
ಬಿಜೆಪಿ ಸರ್ಕಾರ ರಫೇಲ್ ವಿಮಾನ ಖರೀದಿಯಲ್ಲಿ ಅವ್ಯವಹಾರ ನಡೆಸಿಲ್ಲ ಎಂದಾದರೆ ಜಂಟಿ ಸದನ ಸಮಿತಿಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದರು. ಕೆಪಿಸಿಸಿ ವಕ್ತಾರರಾದ ಎಚ್.ಎ.ವೆಂಕಟೇಶ್,ಎಂ.ಲಕ್ಷ್ಮಣ, ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.