Advertisement

ರಫೆಲ್‌ ಏರಿದ ಅಂಬಾನಿ, ಏರ್‌ ಶೋಗೆ ಆಗಮಿಸಿದ ಟಾಟಾ

03:45 AM Feb 16, 2017 | Team Udayavani |

ಬೆಂಗಳೂರು: ವೈಮಾನಿಕ ಪ್ರದರ್ಶನದಲ್ಲಿ ಎರಡನೇ ದಿನ ಉದ್ಯಮಿ ಅನಿಲ್‌ ಅಂಬಾನಿ ಫ್ರಾನ್ಸ್‌ನ “ರಫೆಲ್‌’ ಯುದ್ಧ ವಿಮಾನವನ್ನು ಏರಿ, ಪೈಲೆಟ್‌ನೊಂದಿಗೆ ಹಾರಾಟ ನಡೆಸುವ ಮೂಲಕ ಗಮನಸೆಳೆದರು.

Advertisement

12.15ರ ಸುಮಾರಿಗೆ ವಾಯುನೆಲೆಗೆ ಆಗಮಿಸಿದ ಅಂಬಾನಿ, 12.30 ಸುಮಾರಿಗೆ ವಿಶೇಷ ಬೂಟು, ಆಮ್ಲಜನಕದ ಮಾಸ್ಕ್, ಸೈನ್ಯದ ಜಾಕೆಟ್‌ ಸೇರಿದಂತೆ ಪೂರ್ವಸಿದ್ಧತೆಗಳೊಂದಿಗೆ ರಫೆಲ್‌ ವಿಮಾನ ಏರಿದರು. ವಿಮಾನದಲ್ಲಿ ಸಹ-ಪೈಲಟ್‌ ಆಗಿದ್ದ ಅವರು, ಹಿಂದಿನ ಆಸನದಲ್ಲಿ ಕುಳಿತಿದ್ದರು. ಸುಮಾರು 30 ನಿಮಿಷಗಳ ಕಾಲ ರಫೆಲ್‌ ಬಾನಂಗಳದಲ್ಲಿ ವಿವಿಧ ಕಸರತ್ತುಗಳನ್ನು ನಡೆಸಿತು. ನಂತರ ವಾಯುನೆಲೆಯಲ್ಲಿ ಬಂದಿಳಿಯಿತು.

ಇದೇ ವೇಳೆ ಅತ್ಯಾಧುನಿಕ ಯುದ್ಧವಿಮಾನ ರಫೆಲ್‌ ಹೊಂದಿರುವ ಫ್ರಾನ್ಸ್‌ನ ಡಸಲ್ಟ್ ಏರ್‌ಜೆಟ್‌ನೊಂದಿಗೆ ರಿಲಾಯನ್ಸ್‌ ಇಂಡಸ್ಟ್ರಿಯ ಅನಿಲ್‌ ಅಂಬಾನಿ ಒಪ್ಪಂದ ಮಾಡಿಕೊಂಡರು.

ಈ ಮೂಲಕ ಮುಂದಿನ ದಿನಗಳಲ್ಲಿ ರಫೆಲ್‌ ವಿಮಾನಗಳ ತಯಾರಿಕಾ ಘಟಕ ಭಾರತದಲ್ಲಿ ತೆರೆಯುವ ಸೂಚನೆ ನೀಡಿದ್ದಾರೆ. ಅಕ್ಟೋಬರ್‌ನಲ್ಲೇ ರಫೆಲ್‌ ಯುದ್ಧವಿಮಾನವನ್ನು ಮೇಕ್‌ ಇನ್‌ ಇಂಡಿಯಾ ಯೋಜನೆ ಅಡಿ ಭಾರತದಲ್ಲಿ ನಿರ್ಮಾಣ ಮಾಡಲು ಮಾತುಕತೆ ನಡೆದಿತ್ತು. ಅದರ ಅಂಗವಾಗಿ ಏರ್‌-ಶೋಗೆ ಆಗಮಿಸಿದ ಅನಿಲ್‌ ಅಂಬಾನಿ, ರಫೆಲ್‌ ಕಮಾಂಡರ್‌ ಜತೆ ಮಾತುಕತೆ ನಡೆಸಿದರು ಎನ್ನಲಾಗಿದೆ.

ಟಾಟಾ ಭೇಟಿ
ಉದ್ಯಮಿ ರತನ್‌ ಟಾಟಾ ಅವರು ಕೂಡ ಬುಧವಾರ ವೈಮಾನಿಕ ಪ್ರದರ್ಶನಕ್ಕೆ ದಿಢೀರ್‌ ಭೇಟಿ ನೀಡಿ ಗಮನಸೆಳೆದರು. ಯಲಹಂಕ ವಾಯುನೆಲೆ ಬಳಿ ಇರುವ ಟಾಟಾ ಸ್ಕೂಲ್‌ಗೆ ಅವರು ಭೇಟಿ ನೀಡಿದ್ದರು. ನಂತರ ವೈಮಾನಿಕ ಪ್ರದರ್ಶನ ನಡೆಯುತ್ತಿದ್ದ ಸ್ಥಳಕ್ಕೆ ಆಗಮಿಸಿದರು. ಈ ಸಂದರ್ಭದಲ್ಲಿ ಕೈಗಾರಿಕೆ ಸಚಿವ ಆರ್‌.ವಿ. ದೇಶಪಾಂಡೆ ಅವರೊಂದಿಗೂ ರತನ್‌ ಟಾಟಾ ಮಾತುಕತೆ ನಡೆಸಿದರು ಎನ್ನಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next