ಮೆಲ್ಬೋರ್ನ್: ಟೆನ್ನಿಸ್ ದಿಗ್ಗಜ ರಫೇಲ್ ನಡಾಲ್ ಅವರು ಆಸ್ಟ್ರೇಲಿಯಾ ಓಪನ್ ಟೆನ್ನಿಸ್ ಕೂಟದ ಫೈನಲ್ ಪ್ರವೇಶಿಸಿದ್ದಾರೆ. ಸೆಮಿ ಫೈನಲ್ ನಲ್ಲಿ ಇಟಲಿಯ ಮ್ಯಾಟಿಯೊ ಬೆರಟ್ಟಿನಿ ವಿರುದ್ಧ ನಡಾಲ್ ಗೆಲುವು ಸಾಧಿಸಿದರು.
ರಾಡ್ ಲಾವರ್ ಅರೆನಾದಲ್ಲಿ ನಡೆದ ಪಂದ್ಯದಲ್ಲಿ ರಫೇಲ್ ನಡಾಲ್ ಅವರು 6-3, 6-2, 3-6, 6-3 ಅಂತರದಿಂದ ಗೆದ್ದರು. ಕಳೆದ ಬಾರಿಯ ರನ್ನರ್ ಅಪ್ ಮ್ಯಾಟಿಯೊ ಬೆರಟ್ಟಿನಿ ಸೆಮಿ ಪಂದ್ಯದಲ್ಲಿ ನಿರಾಶೆ ಅನುಭವಿಸಿದರು.
ರೋಜರ್ ಫೆಡರರ್ ಹಾಗೂ ನೋವಾಕ್ ಜೋಕೋವಿಚ್ ಜೊತೆ ಅತಿಹೆಚ್ಚು ಗ್ರ್ಯಾನ್ ಸ್ಲಾಂ ಗೆಲುವಿನ ದಾಖಲೆಗೆ ಪೈಪೋಟಿ ನಡೆಸುತ್ತಿರುವ ಸ್ಪೇನ್ ಟೆನಿಸಿಗ ರಾಫೆಲ್ ನಡಾಲ್ ಫೈನಲ್ ಪ್ರವೇಶಿಸಿದ್ದಾರೆ. ದಾಖಲೆಯ 21ನೇ ಪ್ರಶಸ್ತಿ ಗೆಲ್ಲಲು ಇನ್ನು ಕೇವಲ ಒಂದು ಗೆಲುವಷ್ಟೇ ಬೇಕಿದೆ. ಫೆಡರರ್, ನಡಾಲ್ ಹಾಗೂ ಜೋಕೋವಿಚ್ ತಲಾ 20 ಗ್ರ್ಯಾನ್ ಸ್ಲಾಂಗಳನ್ನು ಜಯಿಸಿದ್ದು, ತಮ್ಮ ಪ್ರತಿಸ್ಪರ್ಧಿಗಳಿಬ್ಬರೂ ಈ ಟೂರ್ನಿಯಲ್ಲಿ ಆಡದ ಕಾರಣ ನಡಾಲ್ ಗೆ ಅತೀ ಹೆಚ್ಚು ಗ್ರ್ಯಾಂಡ್ ಸ್ಲ್ಯಾಮ್ ಗೆಲ್ಲುವ ದಾಖಲೆ ಬರೆಯಲು ಉತ್ತಮ ಅವಕಾಶ ಸಿಕ್ಕಂತಾಗಿದೆ.
ಇದನ್ನೂ ಓದಿ:ಲಂಕಾಗೆ ಶಾಕ್ ನೀಡಿದ ಅಫ್ಘಾನ್ ಹುಡುಗರು: ಸೆಮಿ ಫೈನಲ್ ತಲುಪಿದ ಅಫ್ಘಾನ್ ಅಂಡರ್ 19 ತಂಡ
ಇನ್ನೊಂದು ಸೆಮಿಫೈನಲ್‌ನಲ್ಲಿ, ಎರಡನೇ ಶ್ರೇಯಾಂಕದ ಡೇನಿಯಲ್ ಮೆಡ್ವೆಡೆವ್ ಮತ್ತು ಗ್ರೀಕ್ ನಾಲ್ಕನೇ ಶ್ರೇಯಾಂಕದ ಸ್ಟೆಫಾನೊಸ್ ಸಿಟ್ಸಿಪಾಸ್ ಆಡಲಿದ್ದಾರೆ. ಈ ಪಂದ್ಯದಲ್ಲಿ ಗೆದ್ದವರು ನಡಾಲ್ ಜೊತೆ ಫೈನಲ್ ಆಡಲಿದ್ದಾರೆ.