Advertisement

ರಫೇಲ್‌ ಮಾಹಿತಿ ಮಾಯ

12:30 AM Mar 07, 2019 | |

ಹೊಸದಿಲ್ಲಿ: ರಫೇಲ್‌ ಒಪ್ಪಂದ ಕುರಿತಂತೆ ಸುಪ್ರೀಂ ಕೋರ್ಟ್‌ ಕಳೆದ ವರ್ಷ ನೀಡಿದ್ದ ತೀರ್ಪಿನ ಮರುಪರಿಶೀಲನೆ ಅರ್ಜಿಗಳ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ಬುಧವಾರದಿಂದ ಆರಂಭವಾಗಿದ್ದು, ಮೊದಲ ದಿನವೇ ಸರಕಾರ ರಫೇಲ್‌ ಒಪ್ಪಂದದ ಕಡತಗಳ ಮಾಹಿತಿ ಕಳುವಾಗಿರುವ ಬಗ್ಗೆ ನ್ಯಾಯಪೀಠದ ಗಮನಕ್ಕೆ ತಂದಿದೆ.

Advertisement

ಜತೆಗೆ, “ದಿ ಹಿಂದೂ’ ಪತ್ರಿಕೆಯಲ್ಲಿ ಪ್ರಕಟವಾದ ರಫೇಲ್‌ ಒಪ್ಪಂದ ಕುರಿತ ಲೇಖನಗಳು “ರಕ್ಷಣಾ ಸಚಿವಾಲಯದಿಂದ ಕದ್ದ ಕಡತಗಳ ಮಾಹಿತಿ ಆಧಾರಿತ’ ಎಂದು ಆರೋಪಿಸಿದೆ. ಇದರಿಂದ, ಇಡೀ ಪ್ರಕರಣದ ವಿಚಾರಣೆ ಈಗ ಹೊಸ ಹಾದಿಗೆ ಹೊರಳಿದಂತಾಗಿದೆ. ವಾದ, ಪ್ರತಿವಾದ ಆಲಿಸಿದ ನ್ಯಾಯಪೀಠ, ಪ್ರಕರಣದ ಮುಂದಿನ ವಿಚಾರಣೆಯನ್ನು ಮಾ. 14ಕ್ಕೆ ಮುಂದೂಡಿದೆ. ತೀರ್ಪಿನ ಪುನರ್‌ ಪರಿಶೀಲನೆಗೆ ಸುಪ್ರೀಂ ಕೋರ್ಟ್‌ಗೆ ಕೇಂದ್ರದ ಮಾಜಿ ಸಚಿವರಾದ ಯಶ್ವಂತ್‌ ಸಿನ್ಹಾ, ಅರುಣ್‌ ಶೌರಿ ಹಾಗೂ ಸುಪ್ರೀಂ ಕೋರ್ಟ್‌ ಹಿರಿಯ ನ್ಯಾಯವಾದಿ ಪ್ರಶಾಂತ್‌ ಭೂಷಣ್‌ ಮನವಿ ಸಲ್ಲಿಸಿದ್ದರು. 

ಯಾರ್ಯಾರು ಏನೇನಂದ್ರು?: ಬುಧವಾರದ ವಿಚಾರಣೆ ವೇಳೆ, ಕೇಂದ್ರ ಸರಕಾರ ಮಂಡಿಸಿದ ಅಹವಾಲು, ಪ್ರತಿವಾದಿಗಳ ವಾದ ಹಾಗೂ ಎರಡೂ ಕಡೆಯ ವಾದವನ್ನು ನ್ಯಾಯಪೀಠ ನಿರ್ವಹಿಸಿದ ರೀತಿ ಕುತೂಹಲಕಾರಿಯಾಗಿತ್ತು. ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೋಯ್‌ ನೇತೃತ್ವದ ನ್ಯಾಯಪೀಠದ ಮುಂದೆ ಕೇಂದ್ರ ಸರಕಾರದ ಪರ ವಾದ ಮಂಡಿಸಿದ ಅಟಾರ್ನಿ ಜನರಲ್‌ ಕೆ.ಕೆ. ವೇಣುಗೋಪಾಲ್‌, “ರಫೇಲ್‌ ಒಪ್ಪಂದ ಕುರಿತಂತೆ ಕಳೆದ ವರ್ಷ ಡಿ. 14ರಂದು ಕೇಂದ್ರ ಸರಕಾರಕ್ಕೆ ಸುಪ್ರೀಂ ಕೋರ್ಟ್‌ ಕ್ಲೀನ್‌ ಚಿಟ್‌ ನೀಡಿದೆ. ಹಾಗಾಗಿ, ಆ ತೀರ್ಪಿನ ಬಗ್ಗೆ ಪುನರ್‌ ಪರಿಶೀಲನೆ ಸಲ್ಲದು’ ಎಂದರು. 

ಇದಕ್ಕೆ ಉತ್ತರಿಸಿದ ಅರ್ಜಿದಾರರ ಪರ ವಕೀಲರು, “ದಿ ಹಿಂದೂ’ ಪತ್ರಿಕೆಯಲ್ಲಿ ರಫೇಲ್‌ ಒಪ್ಪಂದದ ಬಗ್ಗೆ ಬಂದಿರುವ ವಿಶೇಷ ವರದಿಗಳನ್ನು ಉಲ್ಲೇಖೀಸಿ, ತೀರ್ಪಿನ ಮರು ಪರಿಶೀಲನೆಯ ಅಗತ್ಯವನ್ನು ವಿವರಿಸಿದರು. ಆದರೆ, ಇದನ್ನು ಆಕ್ಷೇಪಿಸಿದ ವೇಣುಗೋಪಾಲ್‌, ರಫೇಲ್‌ ಒಪ್ಪಂದಕ್ಕೆ ಸಂಬಂಧಿಸಿದ ಕೆಲ ಮಹತ್ವದ ಮಾಹಿತಿಗಳು ರಕ್ಷಣಾ ಸಚಿವಾಲಯದಿಂದ ಕಳುವಾಗಿವೆ. ಅದನ್ನು ಆಧರಿಸಿ “ದಿ ಹಿಂದೂ’ ಪತ್ರಿಕೆ  ಹಾಗೂ ಎಎನ್‌ಐ ಸುದ್ದಿಸಂಸ್ಥೆಗಳು ವಿಶೇಷ ವರದಿಗಳನ್ನು ಮಾಡಿವೆ. ಈಗಾಗಲೇ ಸರಕಾರ ಇದರ ತನಿಖೆಗೆ ಆದೇಶಿಸಿದೆ.  “ದ ಹಿಂದೂ’ ವಿರುದ್ಧ ರಹಸ್ಯ ದಾಖಲೆಗಳ ಕಾಯ್ದೆಯ ಪ್ರಕಾರ, ಮೊಕದ್ದಮೆ ಹೂಡಲಾಗುವುದು’ ಎಂದರು. 

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಮಾಹಿತಿ ಕಳುವಾದ ಬಗೆಗಿನ ತನಿಖೆಯ ಪ್ರಗತಿಯ ಮಾಹಿತಿ ನೀಡಿ ಎಂದಿತು. ಗುರುವಾರ ಈ ಕುರಿತ ಮಾಹಿತಿಯನ್ನು ಸಲ್ಲಿಸುವುದಾಗಿ ವೇಣುಗೋಪಾಲ್‌ ತಿಳಿಸಿದರು. ಜತೆಗೆ, ಯಾವುದೇ ರಾಷ್ಟ್ರದಲ್ಲೂ ಸರಕಾರದ ಒಪ್ಪಂದಗಳನ್ನು ಅಲ್ಲಿನ ನ್ಯಾಯಾಲಯಗಳು ಹೀಗೆ ಕೂಲಂಕಷವಾಗಿ ಪರಿಶೀಲಿಸು ವುದಿಲ್ಲ. ಆದರೆ, ಭಾರತದಲ್ಲಿ ಮಾತ್ರ ಅಂಥ ಸನ್ನಿವೇಶ ಎದುರಾಗಿದೆ ಎಂದರು. 

Advertisement

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠದಲ್ಲಿದ್ದ ನ್ಯಾ| ಜೋಸೆಫ್ ಕುರಿಯನ್‌, “ಬೋಫೋರ್ಸ್‌ ವಿಚಾರದಲ್ಲೂ ನೀವು ಇದೇ ಮಾತನ್ನು ಹೇಳುವಿರಾ?’ ಎಂದು ಪ್ರಶ್ನಿಸಿದರು. ಆದರೂ ಪಟ್ಟು ಬಿಡದ ವೇಣುಗೋಪಾಲ್‌, ರಫೇಲ್‌ ಒಪ್ಪಂದದ ತೀರ್ಪಿನ ಬಗ್ಗೆ ಮರು ವಿಚಾರಣೆ ಸಲ್ಲದು ಎಂದರು.

ಸಿಂಗ್‌ ಅರ್ಜಿ ನಿರಾಕರಣೆ: ಕೇಂದ್ರ ಸರಕಾರಕ್ಕೆ ಕ್ಲೀನ್‌ ಚಿಟ್‌ ಕೊಟ್ಟಿದ್ದ ತೀರ್ಪಿನ ಮರುಪರಿಶೀಲನೆಗೆ ಅರ್ಜಿ ಸಲ್ಲಿಸಿದವರಲ್ಲಿ ಒಬ್ಬರಾಗಿದ್ದ ಆಮ್‌ ಆದ್ಮಿ ಪಕ್ಷದ ಸಂಸದ ಸಂಜಯ್‌ ಸಿಂಗ್‌ ಅವರ ಮನವಿಯನ್ನು  ವಿಚಾರಣೆಗೆ ಕೈಗೆತ್ತಿಕೊಳ್ಳಲು ಸುಪ್ರೀಂ ಕೋರ್ಟ್‌ ನಿರಾಕರಿಸಿದೆ. ಡಿಸೆಂಬರ್‌ನಲ್ಲಿ ಸುಪ್ರೀಂ ತೀರ್ಪು ಹೊರಬಿದ್ದಾಗ, ನ್ಯಾಯಾಲಯದ ವಿರುದ್ಧ ಸಿಂಗ್‌ ಅವಹೇಳನಕಾರಿ ಮಾತುಗಳನ್ನಾಡಿದ್ದರಿಂದ ನ್ಯಾಯಪೀಠ ಸಿಂಗ್‌ ಅರ್ಜಿಯನ್ನು ಸ್ವೀಕರಿಸುವುದಿಲ್ಲ ಎಂದು ಖಂಡಾಖಂಡಿತವಾಗಿ ಹೇಳಿದೆ. 

ಆರೋಪಕ್ಕೂ ನಮಗೂ ಸಂಬಂಧವಿಲ್ಲ: ದ ಹಿಂದೂ
ರಕ್ಷಣಾ ಸಚಿವಾಲಯದಿಂದ ರಫೇಲ್‌ ಒಪ್ಪಂದದ ಮಾಹಿತಿ ಕಳುವಾಗಿರುವ ಆರೋಪಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು “ದ ಹಿಂದೂ’ ಪತ್ರಿಕೆಯ ಪ್ರಕಾಶನ ಸಂಸ್ಥೆಯ ಮುಖ್ಯಸ್ಥ ಎನ್‌. ರಾಮ್‌ ಹೇಳಿದ್ದಾರೆ. ಕೇಂದ್ರದ ಆರೋಪಕ್ಕೆ ಪ್ರತಿಕ್ರಿಯಿಸಿರುವ ಅವರು, “ರಫೇಲ್‌ ಒಪ್ಪಂದದ ಅಂಶಗಳನ್ನು ಸಾರ್ವಜನಿಕ ಹಿತಾಸಕ್ತಿಯಡಿ ಪ್ರಕಟಿಸಲಾಗಿದೆ. ನಮಗೆ ಮಾಹಿತಿ ನೀಡಿದವರ ಹೆಸರುಗಳನ್ನು ಯಾವುದೇ ಕಾರಣಕ್ಕೂ ಬಹಿರಂಗೊಳಿಸಲಾಗುವುದಿಲ್ಲ’ ಎಂದಿದ್ದಾರೆ. 

ಕಡತದ ಮಾಹಿತಿ ಕಳವು ಪ್ರಕರಣದಲ್ಲಿ ಎಫ್ಐಆರ್‌ ದಾಖಲಾದರೆ, ಅರ್ಜಿದಾರರು, ದಿ ಹಿಂದೂ ಪತ್ರಿಕೆ ಮತ್ತು ವರದಿಗಾರರನ್ನು ಆರೋಪಿಗಳನ್ನಾಗಿ ಹೆಸರಿಸಲಾಗುತ್ತದೆ
ಎ ಜಿ ವೇಣುಗೋಪಾಲ್‌

ನೀವು ಎಫ್ಐಆರ್‌ ದಾಖಲಿಸಿಕೊಳ್ಳಿ. ಆದರೆ, ಈಗ ಬಹಿರಂಗಗೊಂಡಿರುವಂಥ ಕಡತಗಳ ಮಾಹಿತಿ ಯನ್ನು ನಾವು ಪರಿಗಣಿಸಲೇಬಾರದು ಎಂದು ಹೇಳುವುದು ಸರಿಯಾದ ವಾದವಲ್ಲ
ಕೋರ್ಟ್‌

ರಫೇಲ್‌ ಒಪ್ಪಂದದ ಕಡತಗಳ ಮಾಹಿತಿ ಕಳುವಾಗಿರುವ ಬಗ್ಗೆ ಕೇಂದ್ರ ಹೇಳಿರುವುದರ ಹಿಂದೆ ಆ ಹಗರಣದ ಸಾಕ್ಷ್ಯಾಧಾರಗಳನ್ನು ನಾಶ ಮಾಡುವ ಉದ್ದೇಶವಿದೆ. ಪ್ರಧಾನಿ ಮೋದಿ ವಿರುದ್ಧ ತನಿಖೆಗೆ ಆದೇಶಿಸಲು ಇದಕ್ಕಿಂತ ಉತ್ತಮ ಸಾಕ್ಷಿ ಮತ್ತೂಂದಿಲ್ಲ. 
ರಾಹುಲ್‌ ಗಾಂಧಿ, ಕಾಂಗ್ರೆಸ್‌ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next