ಮಂಗಳೂರು: ಲೋಕ ಸಭಾ ಚುನಾವಣೆ ಪ್ರಚಾರ ಇನ್ನಷ್ಟೇ ಕಾವು ಪಡೆಯಬೇಕಾಗಿದ್ದರೂ ಕಾಂಗ್ರೆಸ್ ಪಕ್ಷವು ಬಿಜೆಪಿ ವಿರುದ್ಧ ಹರಿಹಾಯಲು “ರಫೇಲ್ ಹಗರಣ’ವನ್ನು ಹಾಗೂ ಕೇಂದ್ರದ ಮೋದಿ ಸರಕಾರದ ವೈಫಲ್ಯ ಗಳನ್ನು ಅಸ್ತ್ರವನ್ನಾಗಿ ಬಳಸಲು ನಿರ್ಧರಿ ಸಿದ್ದು, ಈ ಬಗ್ಗೆ ಸಾರ್ವಜನಿಕ ಮಾಹಿತಿ ಕೈಪಿಡಿಯನ್ನು ಬಿಡುಗಡೆ ಮಾಡಿದೆ.
ಶನಿವಾರ ಮಲ್ಲಿಕಟ್ಟೆಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ “ಬ್ರಹ್ಮಾಂಡ ರಫೇಲ್ ಭ್ರಷ್ಟಾಚಾರ: ಬಿಜೆಪಿ ಹೇಳಿ ದ್ದೇನು? ಮಾಡಿದ್ದೇನು?’ ಎಂಬ 16 ಪುಟಗಳ ಸಾರ್ವಜನಿಕ ಮಾಹಿತಿ ಕೈಪಿಡಿಯನ್ನು ವಿಧಾನ ಪರಿಷತ್ತಿನ ಮಾಜಿ ಸಭಾಪತಿ ಹಾಗೂ ಕೆಪಿಸಿಸಿ ಶಿಸ್ತು ಸಮಿತಿಯ ಅಧ್ಯಕ್ಷ ವಿ.ಆರ್. ಸುದರ್ಶನ್ ಅವರು ಮತ್ತು “ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ನಾಯಕರಿಗೆ 28 ನೇರ ಪ್ರಶ್ನೆಗಳು’ ಎಂಬ ಕರಪತ್ರವನ್ನು ವಿಧಾನ ಪರಿಷತ್ ಸದಸ್ಯ ಹಾಗೂ ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಬಿಡುಗಡೆ ಮಾಡಿದರು. ಇವೆರಡನ್ನೂ ಕೆಪಿಸಿಸಿ ವಕ್ತಾರ ಮತ್ತು ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ ಪ್ರಕಟಿಸಿದ್ದಾರೆ.
ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ 30,000 ಕೋಟಿ ರೂ. ಅವ್ಯವಹಾರ ನಡೆದಿದೆ. ಈ ಬಗ್ಗೆ ಮೂವರು ವಕೀಲರನ್ನು ಒಳಗೊಂಡ ಸಮಿತಿ ಸಾಕ್ಷ್ಯಾಧಾರಗಳನ್ನು ಕಲೆ ಹಾಕಿ ಈ ಕೈಪಿಡಿಯನ್ನು ತಯಾರಿಸಲಾಗಿದೆ. ಇಲ್ಲಿ ಅವ್ಯವಹಾರ ಹೇಗೆ ನಡೆದಿದೆ ಮತ್ತು ಅದರಿಂದ ಕರ್ನಾಟಕಕ್ಕೆ ಆಗಿರುವ ಅನ್ಯಾಯದ ಬಗ್ಗೆ ಮಾಹಿತಿ ಇದೆ. ಕರಪತ್ರದಲ್ಲಿ ಮೋದಿ ಮತ್ತು ಬಿಜೆಪಿ ನಾಯಕರಿಗೆ 28 ನೇರ ಪ್ರಶ್ನೆಗಳನ್ನು ಕೇಳಲಾಗಿದ್ದು, ಬಿಜೆಪಿ ಮುಖಂಡರಿಂದ ಉತ್ತರ ನಿರೀಕ್ಷಿಸಲಾಗಿದೆ ಎಂದು ಐವನ್ ಡಿ’ಸೋಜಾ ಅವರು ತಿಳಿಸಿದರು.
ಮತದಾರರು ಪ್ರಜಾಪ್ರಭುತ್ವದ ಮಾಲಕರು. ಅವರಿಗೆ ಎಲ್ಲ ವಿಷಯ ಗಳು ತಿಳಿಯಬೇಕು. ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ಹೇಳಿದ್ದೇನು, ಮಾಡಿದ್ದೇನು ಎನ್ನುವ ಬಗ್ಗೆ ತೌಲನಿಕ ಅಧ್ಯಯನ ಆಗಬೇಕು ಎಂದು ವಿ.ಆರ್. ಸುದರ್ಶನ್ ತಿಳಿಸಿದರು. ಕರಪತ್ರವನ್ನು ಬಿಜೆಪಿಯ ರಾಜ್ಯ ಮತ್ತು ಜಿಲ್ಲಾಧ್ಯಕ್ಷರಿಗೆ ಕಳುಹಿಸಿ ಕೊಡಲಾಗುವುದು. ಈ ಬಗ್ಗೆ ಕಾಂಗ್ರೆಸ್ ಚರ್ಚೆ ನಡೆಸಲು ಸಿದ್ಧವಿದೆ. ಬಿಜೆಪಿ ನಾಯಕರಿಂದ ಉತ್ತರ ನಿರೀಕ್ಷಿಸುತ್ತಿದ್ದೇವೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕರಾದ ಶಕುಂತಳಾ ಶೆಟ್ಟಿ, ಜೆ.ಆರ್. ಲೋಬೊ, ಕಾಂಗ್ರೆಸ್ ನಾಯಕರಾದ ಇಬ್ರಾಹಿಂ ಕೋಡಿಜಾಲ್, ಕಳ್ಳಿಗೆ ತಾರಾನಾಥ ಶೆಟ್ಟಿ, ವಾಸುದೇವ ಬೋಳೂರು, ಹನೀಫ್, ಬಿ. ಎಚ್. ಖಾದರ್, ಎಂ.ಎಸ್. ಮಹಮದ್ ಉಪಸ್ಥಿತರಿದ್ದರು.