Advertisement
ಒಪ್ಪಂದದ ಬೆಲೆ ವಿವರಕ್ಕೆ ಸಂಬಂಧಿಸಿದಂತೆ ಮಹಾಲೇಖಪಾಲರ ವರದಿ(ಸಿಎಜಿ)ಯನ್ನು ಸಂಸದೀಯ ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ (ಪಿಎಸಿ) ಗೆ ಸಲ್ಲಿಸಲಾಗಿದೆ ಮತ್ತು ಪರಿಷ್ಕರಿಸಿದ ಆವೃತ್ತಿಯನ್ನು ಸಂಸತ್ತಿನಲ್ಲಿ ಮಂಡಿಸಲಾಗಿದೆ ಎಂದು ಸುಪ್ರೀಂಕೋರ್ಟ್ ತೀರ್ಪಿನಲ್ಲಿ ಉಲ್ಲೇಖೀಸಿದ ಮಾಹಿತಿಯನ್ನು ಸರಿಪಡಿಸುವಂತೆ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ ಮೊರೆ ಹೋಗಿದೆ.
Related Articles
ತೀರ್ಪು ಬಂದ ಬೆನ್ನಲ್ಲೇ ಶನಿವಾರ ದೆಹಲಿಯಲ್ಲಿ ಮಾತನಾಡಿದ ಪಿಎಸಿ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರು, ಸಿಎಜಿ ವರದಿಯನ್ನು ಯಾವಾಗ ಸಂಸತ್ತಿನಲ್ಲಿ ಮಂಡಿಸಲಾಗಿದೆ ಎಂಬ ಬಗ್ಗೆ ಸಿಎಜಿ ಹಾಗೂ ಅಟಾರ್ನಿ ಜನರಲ್‌ರನ್ನು ಕರೆಸಿ ಪ್ರಶ್ನಿಸಲಿದ್ದೇವೆ ಎಂದು ಹೇಳಿದ್ದಾರೆ. ಸಿಎಜಿ ವರದಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ಗೆ ಸರ್ಕಾರ ತಪ್ಪು ಮಾಹಿತಿ ನೀಡಿದೆ. ಸರ್ಕಾರ ಕ್ಷಮೆ ಯಾಚಿಸಬೇಕು ಎಂದು ಖರ್ಗೆ ಆಗ್ರಹಿಸಿದ್ದಾರೆ.
Advertisement
ಬೆಲೆ ವಿವರಗಳನ್ನು ಪರಿಗಣಿಸಿಲ್ಲ:ಬೆಲೆ ಹಾಗೂ ತಾಂತ್ರಿಕ ವಿವರಗಳನ್ನು ಸುಪ್ರೀಂಕೋರ್ಟ್ ಪರಿಶೀಲನೆ ನಡೆಸಿಲ್ಲ. ಕೋರ್ಟ್‌ಗೆ ಸರ್ಕಾರ ಬೆಲೆ ಹಾಗೂ ತಾಂತ್ರಿಕ ಮಾಹಿತಿಯನ್ನು ನೀಡಿಲ್ಲ. ಸಿಎಜಿಗೆ ಸರ್ಕಾರ ಮಾಹಿತಿ ನೀಡಿದೆ. ಹೀಗಾಗಿ ಜಂಟಿ ಸಂಸದೀಯ ಸಮಿತಿ ಈ ಬಗ್ಗೆ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್ ಆಗ್ರಹಿಸಿದ್ದಾರೆ. ಸುಪ್ರೀಂ ಕೋರ್ಟ್‌ಗೆ ಸರ್ಕಾರ ತಪ್ಪು ಮಾಹಿತಿ ನೀಡಿದ್ದು, ಇದಕ್ಕೆ ಯಾರು ಹೊಣೆ ಎಂದು ಸಿಬಲ್ ಪ್ರಶ್ನಿಸಿದ್ದಾರೆ. ಭಾರತವನ್ನು ಅವಮಾನಿಸಲು ರಾಹುಲ್ ಸಂಚು:
ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಅವಮಾನ ಮಾಡುವುದಕ್ಕೆಂದು ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದವನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರೋಧಿಸುತ್ತಿದ್ದಾರೆ ಎಂದು ತ್ರಿಪುರಾ ಸಿಎಂ ಬಿಪ್ಲಬ್ ಕುಮಾರ್ ದೇಬ್ ಹೇಳಿದ್ದಾರೆ. ಮನಮೋಹನ ಸಿಂಗ್ ನೇತೃತ್ವದಲ್ಲಿ 10 ವರ್ಷಗಳವರೆಗೆ ಕಾಂಗ್ರೆಸ್ ಅಧಿಕಾರ ನಡೆಸಿದೆ. ಆದರೂ ಯಾಕೆ ರಫೇಲ್ ಒಪ್ಪಂದವನ್ನು ಅಂತಿಮಗೊಳಿಸಲು ಸಾಧ್ಯವಾಗಲಿಲ್ಲ ಎಂದು ದೇಬ್ ಪ್ರಶ್ನಿಸಿದ್ದಾರೆ. ರಾಷ್ಟ್ರೀಯ ಭದ್ರತೆ ಎಂಬುದು ಕಾಂಗ್ರೆಸ್‌ಗೆ ಒದೆಯೋ ಚೆಂಡು!
ಕಾಂಗ್ರೆಸ್ಸಿಗೆ ರಾಷ್ಟ್ರೀಯ ಭದ್ರತೆ ಮತ್ತು ರಕ್ಷಣಾ ವಲಯವು ಒದೆಯುವ ಚೆಂಡು ಇದ್ದಂತೆ. ಅದು ಒಂದು ಫಂಡ್‌ನ ಮೂಲವೂ ಹೌದು ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ. ತಮಿಳುನಾಡು ಬಿಜೆಪಿ ಕಾರ್ಯಕರ್ತರೊಂದಿಗೆ ನವದೆಹಲಿಯಿಂದ ಶನಿವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಅವರು, ಒಂದೆಡೆ ಸರ್ಜಿಕಲ್ ದಾಳಿ ಬಗ್ಗೆ ಕಾಂಗ್ರೆಸ್ ಅಪಹಾಸ್ಯ ಮಾಡುತ್ತದೆ. ಇನ್ನೊಂದೆಡೆ ರಕ್ಷಣಾ ಖರೀದಿಯಲ್ಲಿ ಅವ್ಯವಹಾರ ಮಾಡುತ್ತಾರೆ. 1950ರ ಕಾಲದಲ್ಲಿ ಜೀಪ್ ಖರೀದಿ, 80ರ ದಶಕದಲ್ಲಿ ಬೋಫೋರ್ಸ್, ನಂತರ ಅಗಸ್ಟಾ ವೆಸ್ಟ್‌ಲ್ಯಾಂಡ್ ಮತ್ತು ಸಬ್‌ಮರೀನ್ ಹಗರಣಗಳು… ಹೀಗೆ ಕಾಂಗ್ರೆಸ್ ನಮ್ಮ ರಕ್ಷಣಾ ವಲಯವನ್ನು ಲೂಟಿ ಮಾಡುತ್ತಲೇ ಬಂದಿದೆ. ನಮ್ಮ ರಕ್ಷಣಾ ಪಡೆಗಳಿಗೆ ಅವಮಾನ ಮಾಡಿಯಾದರೂ ಸರಿ, ತಾವು ಹಣ ಮಾಡಬೇಕು ಎನ್ನುವುದು ಕಾಂಗ್ರೆಸ್‌ನ ಯೋಚನೆಯಾಗಿದೆ ಎಂದು ಮೋದಿ ಆರೋಪಿಸಿದ್ದಾರೆ.