Advertisement

ತೇಜಸ್ವಿ , ಸೂಲಿಬೆಲೆ ಹತ್ಯೆಗೆ ಸಂಚು ವಿಫ‌ಲ

10:09 AM Jan 19, 2020 | mahesh |

ಬೆಂಗಳೂರು: ಬಿಜೆಪಿ ಮತ್ತು ಹಿಂದೂ ಮುಖಂಡರ ಹತ್ಯೆಗೆ ಸಂಚು ರೂಪಿಸಿದ್ದ ಸೋಷಿಯಲ್‌ ಡೆಮಾಕ್ರೆಟಿಕ್‌ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಸಂಘಟನೆಯ ಆರು ಸದಸ್ಯರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಈ ಆಘಾತಕಾರಿ ಅಂಶ ಬಹಿರಂಗ ಮಾಡಿರುವ ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಭಾಸ್ಕರ ರಾವ್‌, ಬಿಜೆಪಿ-ಹಿಂದೂ ಮುಖಂಡರ ಹತ್ಯೆ ಸಂಚು ವಿಫ‌ಲವಾದ ಹಿನ್ನೆಲೆಯಲ್ಲಿ ಆರ್‌ಎಸ್‌ಎಸ್‌ ಕಾರ್ಯಕರ್ತ ವರುಣ್‌ ಹತ್ಯೆಗೆ ಯತ್ನಿಸಿದ್ದರು ಎಂದು ಹೇಳಿದರು.

Advertisement

ಎಸ್‌ಡಿಪಿಐ ನಗರ ಘಟಕದ ಸದಸ್ಯರಾದ ಆರ್‌.ಟಿ. ನಗರದ ಮೊಹಮ್ಮದ್‌ ಇರ್ಫಾನ್‌(33), ಸೈಯದ್‌ ಅಕ್ಬರ್‌(46), ಸನಾವುಲ್ಲಾ ಶರೀಫ್(28), ಲಿಂಗರಾಜುಪುರದ ಸೈಯದ್‌ ಸಿದ್ದಿಕ್‌ ಅಕ್ಬರ್‌(30), ಕೆ.ಜಿ.ಹಳ್ಳಿಯ ಅಕ್ಬರ್‌ ಬಾಷಾ(27) ಮತ್ತು ಶಿವಾಜಿನಗರದ ಸಾದಿಕ್‌ ಉಲ್‌ ಅಮೀನ್‌(39) ಬಂಧಿತರು ಎಂದು ಭಾಸ್ಕರ ರಾವ್‌ ತಿಳಿಸಿದರು.

ಈ ಮಧ್ಯೆ, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಮತ್ತು ಯುವ ಬ್ರಿಗೇಡ್‌ ಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಅವರನ್ನು ಹತ್ಯೆಗೈಯಲು ಆರೋಪಿಗಳು ಸಂಚು ನಡೆಸಿದ್ದರು ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಿಗಿಭದ್ರತೆಯಿಂದಾಗಿ ಸಂಚು ವಿಫ‌ಲ
ಆರೋಪಿಗಳು ಸಿಎಎ ಪರವಾದ ಸಮಾ ವೇಶದ ಸಂದರ್ಭ ತೇಜಸ್ವಿ ಮತ್ತು ಸೂಲಿಬೆಲೆ ಹತ್ಯೆಗೆ ಸಂಚು ರೂಪಿಸಿದ್ದರು. ಆದರೆ ಪೊಲೀಸ್‌ ಬಿಗಿ ಭದ್ರತೆ ಇದ್ದುದರಿಂದ ವಿಫ‌ಲಗೊಂಡಿತ್ತು. ಹೀಗಾಗಿ ವರುಣ್‌ರನ್ನು ಹಿಂಬಾಲಿಸಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದರು. ವರುಣ್‌ ಸೂಕ್ತ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ ಎಂದು ಭಾಸ್ಕರ ರಾವ್‌ ತಿಳಿಸಿದ್ದಾರೆ.

800 ಸಿಸಿಟಿವಿ ಕೆಮರಾಗಳ ಪರಿಶೀಲನೆ
ಹಲ್ಲೆ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪಶ್ಚಿಮ ವಿಭಾಗದ ಕಲಾಸಿಪಾಳ್ಯ ಪೊಲೀಸರು ಘಟನ ಸ್ಥಳ ಸೇರಿ ನಗರದ ವಿವಿಧೆಡೆ ಇರುವ ಸುಮಾರು ಒಂದು ಸಾವಿರ ಸಿಸಿಟಿವಿ ಕೆಮರಾ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದರು. ಈ ಪೈಕಿ 800 ಕೆಮರಾಗಳ ದೃಶ್ಯಾವಳಿಗಳನ್ನು ಅತ್ಯಂತ ಸೂಕ್ಷ್ಮವಾಗಿ ಪರಿಶೀಲಿಸಿದಾಗ ಆರೋಪಿಗಳ ಚಹರೆ ಪತ್ತೆಯಾಗಿತ್ತು. ಈ ಮಾಹಿತಿ ಆಧರಿಸಿ ಆರು ಮಂದಿ ಯನ್ನು ಬಂಧಿಸಲಾಗಿದೆ.

Advertisement

ಸಿಕ್ಕಿದ್ದು ಹೇಗೆ?
ಪ್ರಕರಣದ ಜಾಡು ಹತ್ತಿದ್ದ ಪೊಲೀಸರು ಆರೋಪಿಗಳು ಬಿಸಾಡಿದ ಕಾಗದ ಚೂರುಗಳು, ಸಿಗರೇಟು, ಬಿಸಾಡಿದ ಹೆಲ್ಮೆಟ್‌ಗಳು, ಬಳಸಿದ ವಾಹನಗಳು, ಅವುಗಳಿಗೆ ಪೆಟ್ರೋಲ್‌ ಹಾಕಿದ ಬಂಕ್‌ಗಳ ಹೆಸರು ಸೇರಿ ಎಲ್ಲ ಹಂತದಲ್ಲೂ ಸಾಕ್ಷ್ಯ ಸಂಗ್ರಹಿಸಿದ್ದಾರೆ ಎಂದು ಭಾಸ್ಕರ ರಾವ್‌ ವಿವರಿಸಿದರು.

ಮಾಸಿಕ 10 ಸಾವಿರ ವೇತನ
ಆರು ಮಂದಿ ಆರೋಪಿಗಳಿಗೆ ಎಸ್‌ಡಿಪಿಐ ಮುಖಂಡರು ಮಾಸಿಕ ಹತ್ತು ಸಾವಿರ ರೂ. ವೇತನ ನೀಡುತ್ತಿದ್ದರು ಎಂಬುದು ಗೊತ್ತಾಗಿದೆ. ತೀವ್ರಗಾಮಿ ಧೋರಣೆ ಹೊಂದಿರುವ ಸಂಘಟನೆಯ ಮುಖಂಡರು ಆರೋಪಿಗಳಿಗೆ ನಗರದಲ್ಲಿ ಅಶಾಂತಿ ಮೂಡಿಸುವುದು, ಬಸ್‌ಗಳಿಗೆ ಬೆಂಕಿ ಹಾಕುವುದು, ಕೋಮುಗಲಭೆ ಸೃಷ್ಟಿಸುವುದು. ಹಾಗೆಯೇ ಕೆಲವೊಂದು ವಿಧ್ವಂಸಕ ಕೃತ್ಯ ಮಾಡಿಸುವ ಉದ್ದೇಶದಿಂದ ಮಾಸಿಕ ಹತ್ತು ಸಾವಿರ ರೂ. ಕೊಡುತ್ತಿದ್ದರು.

ಆರೋಪಿಗಳ ಪೈಕಿ ಇರ್ಫಾನ್‌ ಟೈಲರಿಂಗ್‌, ಸೈಯದ್‌ ಅಕºರ್‌ ಮೆಕಾನಿಕ್‌ ಆಗಿದ್ದಾನೆ. ಸೈಯದ್‌ ಸಿದ್ದಿಕ್‌ ಸಿವಿಲ್‌ ಕಂಟ್ರ್ಯಾಕ್ಟರ್‌, ಅಕ್ಬರ್‌ ಪಾಷಾ ಅಮೆಜಾನ್‌ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ. ಯುಎಪಿಎ ಕಾಯ್ದೆ ಅಡಿಯಲ್ಲಿ ಪ್ರಕರಣ ಆರೋಪಿಗಳ ವಿರುದ್ಧ ಐಪಿಸಿ 143(ಅಕ್ರಮ ಕೂಟ), 147(ಗಲಭೆ), 148(ಶಸ್ತ್ರಸಜ್ಜಿತ ಗಲಭೆ ಮಾಡುವುದು), 149(ಅಕ್ರಮ ಕೂಟ ಸೇರುವುದು) ಮತ್ತು 307(ಕೊಲೆ ಯತ್ನ) ಹಾಗೂ ಅಕ್ರಮ ಚಟುವಟಿಕೆಗಳ ನಿಯಂತ್ರಣ ಕಾಯ್ದೆ(ಯುಎಪಿಎ)ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next