ವಿಜಯಪುರ : ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಇಡೀ ದೇಶದಲ್ಲಿ 40 ಸ್ಥಾನ ಗೆಲ್ಲುವುದಿಲ್ಲ. ಆದರೆ ಕರ್ನಾಟಕ ರಾಜ್ಯದ 28 ಕ್ಷೇತ್ರಗಳು ಸೇರಿದಂತೆ ದೇಶದಲ್ಲಿ 400 ಸ್ಥಾನ ಗೆಲ್ಲುವ ಮೂಲಕ ಬಿಜೆಪಿ ಮತ್ತೊಮ್ಮೆ ಕೇಂದ್ರದಲ್ಲಿ ಅಧಿಕಾರ ನಡೆಸುವುದು ಖಚಿತ ಎಂದು ಬಿಜೆಪಿ ಕರ್ನಾಟಕ ರಾಜ್ಯ ಉಸ್ತುವಾರಿ ರಾಧಾಮೋಹನ ದಾಸ ಸಗರವಾಲ್ ವಿಶ್ವಾಸ ವ್ಯಕ್ತಪಡಿಸಿದರು.
ಬುಧವಾರ ನಗರದಲ್ಲಿ ವಿಜಯಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಚುನಾವಣಾ ಪ್ರಚಾರ ಕಛೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವ ನಾಯಕ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ದಶಕದ ಆಡಳಿತವನ್ನು ಗಮನಿಸಿರುವ ದೇಶದ ಮತದಾರ ವಿಕಸಿತ ಭಾರಕ್ಕಾಗಿ ಬಿಜೆಪಿ ಪಕ್ಷಕ್ಕೆ 2024 ರಲ್ಲಿ ಅಭೂತಪೂರ್ವ ಐತಿಹಾಸಿಕ ಗೆಲುವು ತಂದುಕೊಡಲಿದ್ದಾರೆ ಎಂದರು.
ಬಿಜೆಪಿ ನಡೆಸಿರುವ ನಮೋ ಸಮೀಕ್ಷೆಯಲ್ಲಿ 377 ಸ್ಥಾನ ಗೆಲ್ಲುವುದಾಗಿ ಹೇಳಿದೆ. ಈಚೆಗಷ್ಟೇ ಎರಡು ಸುದ್ದಿ ವಾಹಿನಿಗಳು ನಡೆಸಿದ ಸಮೀಕ್ಷೆಯಲ್ಲೂ ಇದನ್ನೇ ಹೇಳಿವೆ. ಹೀಗಾಗಿ ಕರ್ನಾಟಕದ 28 ಸ್ಥಾನಗಳೂ ಸೇರಿದಂತೆ ದೇಶದಲ್ಲಿ ಬಿಜೆಪಿ 400 ಸ್ಥಾನಗಳನ್ನು ಗೆಲ್ಲುವುದು ನಿಶ್ಚಿತ ಎಂದರು.
ಕಾಂಗ್ರೆಸ್ ಪಕ್ಷ ಇಡೀ ದೇಶದಲ್ಲಿ 40 ಸ್ಥಾನ ಗೆಲ್ಲುವುದಿಲ್ಲ. ಇವರ ರಾಜಕೀಯ ನಾಟಕ ಜನರಿಗೆ ಗೊತ್ತಿದೆ. ಕರ್ನಾಟಕ ರಾಜ್ಯದಲ್ಲಿ ಉಸ್ತುವಾರಿ ವಹಿಸಿಕೊಂಡ ನಂತರದಿಂದ ರಾಜ್ಯ ಸುತ್ತಿರುವ ನಾನು ಚಿಕ್ಕೋಡಿಯಿಂದ ಚಾಮರಾಜನಗರ ವರೆಗೆ, ಮಂಗಳೂರಿನಿಂದ ಬೀದರ ವರಗೆ ಎಲ್ಲೆಡೆ ಬಿಜೆಪಿ ಪರ ಒಲವಿದೆ, ಗೆಲುವಿನ ಅಲೆ ಇದೆ. ಹೀಗಾಗಿ ಕಾಂಗ್ರೆಸ್ ಗೆದ್ದಿರುವ ಒಂದೇ ಒಂದು ಸ್ಥಾನವಾದ ಬೆಂಗಳೂರು ಗ್ರಾಮಾಂತರ ಕ್ಷೇತ್ರ ಗೆಲ್ಲು ಹೆಣಗುತ್ತಿದೆ. ಈ ಬಾರಿ ಸದರಿ ಕ್ಷೇತ್ರವೂ ಸೇರಿದಂತೆ ಎಲ್ಲಾ 28 ಸ್ಥಾನಗಳಲ್ಲೂ ಬಿಜೆಪಿ ಹಾಗೂ ಮೈತ್ರಿ ಅಭರ್ಥಿಗಳು ಗೆಲ್ಲುವುದು ಶತಸಿದ್ಧ ಎಂದರು.
ಬೆಲೆ ಏರಿಕೆ ಎಂಬುದು ಕಾಂಗ್ರೆಸ್ ಆಡಳಿತದ ಕೊಡುಗೆ. ಇಂದಿರಾ ಗಾಂಧಿ, ಮನಮೋಹನಸಿಂಗ್ ಆಡಳಿತದಲ್ಲಿ ಬೆಲೆ ಏರಿಕೆ ಮಿತಿ ಮೀರಿತ್ತು. ಆದರೆ ನರೇಂದ್ರ ಮೋದಿ ಅವರು ದೇಶದ ಪ್ರಧಾನಿಯಾದ ಬಳಿಕ ಭಾರತ ಅರ್ಥಿಕ ಅಭಿವೃದ್ಧಿ ವಿಕಾಸವಾಗಿದೆ. ವಿಶ್ವದ ಹಲವು ರಾಷ್ಟ್ರಗಳು ಅರ್ಥಿಕ ದಿವಾಳಿ ಹಂತಕ್ಕೆ ಹೋದ ಸಂದರ್ಭದಲ್ಲೂ ಭಾರತ ಅರ್ಥಿಕ ಪ್ರಗತಿ ಸಾಧಿಸಿರುವುದು ವಿಶ್ವನಾಯಕ ಪ್ರಧಾನಿ ನರೇಂದ್ರ ಮೋದಿ ಅವರ ದಕ್ಷ ಆಡಳಿತದಿಂದ ಎಂದರು.
ವಿಜಯಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಸಂಸದ ರಮೇಶ ಜಿಗಜಿಣಗಿ, ಶಾಸಕ ಬಸನಗೌಡ ಪಾಟೀಲ ಯತ್ನಾಳ, ಮಾಜಿ ಸಚಿವ ಎಸ್.ಕೆ.ಬೆಳ್ಳುಳ್ಳಿ, ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕುಚಬಾಳ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಇದನ್ನೂ ಓದಿ: Ayodhya: ಸೂರ್ಯ ತಿಲಕ ಸಾಧ್ಯವಾಗಿಸಿದ ವಿಜ್ಞಾನಿಗಳಿಗೆ ತಲೆ ಬಾಗುತ್ತೇನೆ: ಅರುಣ್ ಯೋಗಿರಾಜ್