ಇಲ್ಲಿಯವರೆಗೆ ಹಲವು ಬೋಲ್ಡ್ ಆ್ಯಂಡ್ ಬ್ಯೂಟಿಫುಲ್ ಪಾತ್ರಗಳ ಮೂಲಕ ಸಿನಿಪ್ರಿಯರ ಗಮನ ಸೆಳೆದಿದ್ದ ನಟಿ ರಾಧಿಕಾ ಕುಮಾರ ಸ್ವಾಮಿ, ಈಗ ಮಹಿಳಾ ಪ್ರಧಾನ ಚಿತ್ರಗಳತ್ತ ಮುಖ ಮಾಡುತ್ತಿದ್ದಾರೆ. ಹೌದು, ಅನಾಥರು, ನವಶಕ್ತಿ ವೈಭವ ಚಿತ್ರಗಳ ನಂತರ ಸುಮಾರು ಐದು ವರ್ಷಗಳ ಕಾಲ ಚಿತ್ರರಂಗದಿಂದ ಬ್ರೇಕ್ ತೆಗೆದುಕೊಂಡ ರಾಧಿಕಾ ಕುಮಾರಸ್ವಾಮಿ, ಸ್ವೀಟಿ ನನ್ ಜೋಡಿ ಚಿತ್ರದ ಮೂಲಕ ಕಮ್ ಬ್ಯಾಕ್ ಮಾಡಿದ್ದರು. ಆ ಚಿತ್ರ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡದಿದ್ದರೂ, ರಾಧಿಕಾ ರೀ-ಎಂಟ್ರಿಗೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿತ್ತು. ಅದಾದ ಬಳಿಕ ತೆರೆಕಂಡ ರುದ್ರತಾಂಡವ ಕೂಡ ಬಾಕ್ಸಾಫೀಸ್‌ನಲ್ಲಿ ಗೆಲ್ಲಲಿಲ್ಲ. ಈ ಎರಡೂ ಚಿತ್ರಗಳ ಬಳಿಕ ಚಿತ್ರಗಳ ಆಯ್ಕೆಯಲ್ಲಿ ತುಂಬಾನೇ ಚ್ಯೂಸಿ ಆಗಿರುವ ರಾಧಿಕಾ ಕುಮಾರಸ್ವಾಮಿ, ತಮ್ಮ ಪಾತ್ರಗಳನ್ನು ಅಳೆದು ತೂಗಿ ಚಿತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಅದರಲ್ಲೂ ಮಹಿಳಾ ಪ್ರಧಾನ ಚಿತ್ರಗಳತ್ತ ರಾಧಿಕಾ ಹೆಚ್ಚು ಆಸಕ್ತರಾಗುತ್ತಿದ್ದು, ದಮಯಂತಿ, ಭೈರಾ ದೇವಿ ಹೀಗೆ ಒಂದರ ಹಿಂದೊಂದು ಮಹಿಳಾ ಪ್ರಧಾನ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಇತ್ತೀಚೆಗೆ ರಾಧಿಕಾ ಅಭಿನಯದ ದಮಯಂತಿ ಚಿತ್ರ ಕೂಡ ತೆರೆಗೆ ಬಂದಿದೆ. ಹಿಂದಿನ ಚಿತ್ರಗಳಂತೆ ಈ ಚಿತ್ರ ಕೂಡ ಬಾಕ್ಸಾಫೀಸ್‌ನಲ್ಲಿ ಅಷ್ಟಾಗಿ ಸದ್ದು ಮಾಡಲಿಲ್ಲ. ಆದರೆ, ಗೆಟಪ್ ಮತ್ತು ಪಾತ್ರ ಪೋಷಣೆಯ ಬಗ್ಗೆ ಸಿನಿಪ್ರಿಯರಿಂದ, ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದರ ಬೆನ್ನಲ್ಲೇ ಭೈರಾ ದೇವಿ ಎಂಬ ಮತ್ತೂಂದು ಚಿತ್ರ ಕಾಣುತ್ತಿದೆ. ಅದಾದ ನಂತರ ರವಿಚಂದ್ರನ್ ಅವರೊಂದಿಗೆ ಅಭಿನಯಿಸಿರುವ ರಾಜೇಂದ್ರ ಪೊನ್ನಪ್ಪ, ಅರ್ಜುನ್ ಸರ್ಜಾ ಅವರೊಂದಿಗೆ ಅಭಿನಯಿಸಿರುವ ಕಾಂಟ್ರ್ಯಾಕ್ಟ್ ಚಿತ್ರಗಳು ತೆರೆಗೆ ಬರುತ್ತಿವೆ.
ಒಟ್ಟಿನಲ್ಲಿ ಸಿನಿಮಾಗಳು ಸೋಲಲಿ, ಗೆಲ್ಲಲಿ ಒಂದರ ಹಿಂದೊಂದು ಮಹಿಳಾ ಪ್ರಧಾನ ಚಿತ್ರಗಳನ್ನು ಮಾಡುತ್ತ ತಮ್ಮದೇ ಆದ ಅಭಿಮಾನಿ ವರ್ಗವನ್ನು ಸೃಷ್ಟಿಸಿಕೊಳ್ಳುವ ರಾಧಿಕಾ ಅವರ ಪ್ರಯತ್ನ ಮುಂದುವರೆ ಯುವ ಎಲ್ಲ ಲಕ್ಷಣಗಳು ಕಾಣುತ್ತಿದೆ.
ಇದರ ನಡುವೆಯೇ ಈ ಹಿಂದೆ ಶಿಶಿರ, ಶ್ರಾವಣಿ ಸುಬ್ರಮಣ್ಯ, ಶ್ರೀಕಂಠ, ಪಟಾಕಿ, ಮನೆ ಮಾರಟಕ್ಕಿದೆ ಚಿತ್ರಗಳನ್ನು ನಿರ್ದೇಶನ ಮಾಡಿರುವ ಮಂಜು ಸ್ವರಾಜ್ ನಿರ್ದೇಶನದ ಇನ್ನೂ ಹೆಸರಿಡದ ಹೊಸಚಿತ್ರಕ್ಕೂ ರಾಧಿಕಾ ಕುಮಾರಸ್ವಾಮಿ ನಾಯಕಿಯಾಗಿ ಆಯ್ಕೆ ಯಾಗಿದ್ದಾರೆ ಎನ್ನಲಾಗುತ್ತಿದೆ. ಔಟ್ ಅಂಡ್ ಔಟ್ ಕಮರ್ಶಿಯಲ್ ಆಗಿರುವ ಈ ಚಿತ್ರದ ಕಥೆ ಕೇಳಿರುವ ರಾಧಿಕಾ ಕುಮಾರಸ್ವಾಮಿ, ಈ ಚಿತ್ರವನ್ನು ತಾವೇ ನಿರ್ಮಾಣ ಮಾಡುವ ಯೋಜನೆಯನ್ನೂ ಹಾಕಿಕೊಂಡಿದ್ದಾರಂತೆ. ಎಲ್ಲ ಅಂದು ಕೊಂಡಂತೆ ನಡೆದರೆ, ಮಂಜು ಸ್ವರಾಜ್-ರಾಧಿಕಾ ಕುಮಾರಸ್ವಾಮಿ ಕಾಂಬಿನೇಶನ್‌ನ ಈ ಚಿತ್ರ ಮುಂದಿನ ವರ್ಷ ಸೆಟ್ಟೇರುವ ಸಾಧ್ಯತೆ ಇದೆ.