Advertisement

ಯುವರಾಜನಿಂದ ಹಣ ಪಡೆದಿದ್ದು ನಿಜ: ಸಿಸಿಬಿ ಅಧಿಕಾರಿಗಳ ಮುಂದೆ ರಾಧಿಕಾ ಹೇಳಿಕೆ

01:18 PM Jan 09, 2021 | Team Udayavani |

ಬೆಂಗಳೂರು: ರಾಜಕಾರಣಿಗಳು, ನಿವೃತ್ತ ನ್ಯಾಯಮೂರ್ತಿಗಳು ಸೇರಿ ಹಲವರಿಂದ ಹಣ ಪಡೆದು ವಂಚಿಸಿರುವ ಯುವರಾಜ
ಅಲಿಯಾಸ್‌ ಸ್ವಾಮಿ ತಮಗೆ ಹಣ ಕೊಟ್ಟಿದ್ದ ಸಂಗತಿ ನಿಜ ಎಂದು ನಟಿ ರಾಧಿಕಾ ಕುಮಾರಸ್ವಾಮಿ ಸಿಸಿಬಿ ಅಧಿಕಾರಿಗಳ ಮುಂದೆ
ಒಪ್ಪಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

Advertisement

ವಂಚಕ ಯುವರಾಜ ತನ್ನ ಅಕೌಂಟ್‌ನಿಂದ ರಾಧಿಕಾ ಕುಮಾರಸ್ವಾಮಿ ಅಕೌಂಟ್‌ಗೆ ಹಣ ಜಮಾವಣೆ ಮಾಡಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ನೀಡಿದ್ದ ನೋಟಿಸ್‌ ಹಿನ್ನೆಲೆಯಲ್ಲಿ ರಾಧಿಕಾ ಶುಕ್ರವಾರ ತನಿಖಾಧಿಕಾರಿಗಳ ಮುಂದೆ ಹಾಜರಾಗಿದ್ದರು.
“ರಾಧಿಕಾ ಅವರನ್ನು ಹಲವು ಗಂಟೆಗಳ ಕಾಲ ತನಿಖಾಧಿಕಾರಿಗಳು ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ವಿಚಾರಣೆಗೆ ಪತ್ರವೊಂದನ್ನು ಬರೆದು ತಂದಿದ್ದ ರಾಧಿಕಾ, ಪತ್ರದಲ್ಲಿ ಉಲ್ಲೇಖೀಸಿದ್ದ ಮಾಹಿತಿಯನ್ನೇ ಹಂಚಿಕೊಂಡಿದ್ದಾರೆ. ತಮಗೆ ಯುವರಾಜ ಅವರು ಹಲವು ವರ್ಷಗಳಿಂದ ಪರಿಚಯಸ್ಥರು. ಸಿನಿಮಾ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ಅವರು ನನ್ನ ಅಕೌಂಟ್‌ಗೆ ಹಣ ಹಾಕಿರುವುದು ನಿಜ. 75 ಲಕ್ಷ ರೂ.ಗಳನ್ನು ಪಡೆದುಕೊಂಡಿದ್ದೇನೆ. ಅವರು ವಂಚಿಸುತ್ತಿದ್ದರು ಎಂಬುದು ನನಗೆ ತಿಳಿದಿರಲಿಲ್ಲ. ಅವರ ವ್ಯವಹಾರಗಳ ಬಗ್ಗೆಯೂ ಅಷ್ಟಾಗಿ ತಿಳಿದಿಲ್ಲ. ಅವರು ವಂಚನೆ ಹಣ ನೀಡಿರುವುದು ಎಂಬುದು
ಖಚಿತಪಟ್ಟರೆ ಆ ಹಣವನ್ನು ವಾಪಾಸ್‌ ನೀಡಲು ಸಿದ್ಧ’ ಎಂಬ ಹೇಳಿಕೆ ನೀಡಿದ್ದಾರೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

ಇದನ್ನೂ ಓದಿ:ಕಾನತ್ತೂರು: ಪತ್ನಿಯ ಗುಂಡಿಕ್ಕಿ ಕೊಂದು ಪತಿ ಆತ್ಮಹತ್ಯೆ

ಇದೇ ವೇಳೆ ತನಿಖಾಧಿಕಾರಿಗಳು ಆರೋಪಿ ಯುವರಾಜನ ಹಿನ್ನೆಲೆ ಹಾಗೂ ಯಾರಿಗಾದರೂ ವಂಚನೆ ಮಾಡಿರುವ ಮಾಹಿತಿ ಇದೆಯೇ? ಹಣಕಾಸು ವ್ಯವಹಾರಿಕ ಸಂಬಂಧ ಇದೆಯೇ ಎಂಬುದನ್ನು ಕೇಳಿದ್ದು ಇದಕ್ಕೆ ರಾಧಿಕಾ, ಅವರ ವ್ಯವಹಾರಗಳ ಬಗ್ಗೆ ನನಗೆ ಗೊತ್ತಿಲ್ಲ. ನಮ್ಮ ಕುಟುಂಬಕ್ಕೆ ಗೊತ್ತಿದ್ದ ವ್ಯಕ್ತಿ ಆಗಿದ್ದರಿಂದ ಸಿನಿಮಾ ನಿರ್ಮಾಣಕ್ಕೆ ಚರ್ಚಿಸಿ ಅಡ್ವಾನ್ಸ್‌ ರೂಪದಲ್ಲಿ
ಹಣ ಪಡೆಯಲಾಗಿತ್ತು ಎಂದು ತಿಳಿಸಿದ್ದಾರೆ.

ಹೇಳಿಕೆಗಳನ್ನು ದಾಖಲಿಸಿಕೊಂಡಿರುವ ತನಿಖಾಧಿಕಾರಿಗಳು ಮತ್ತೂಮ್ಮೆ ವಿಚಾರಣೆಗೆ ಕರೆದರೆ ಹಾಜರಾಗಬೇಕು ಎಂದು ಸೂಚಿಸಿ
ಕಳುಹಿಸಿಕೊಡಲಾಗಿದೆ.

Advertisement

ಯುವರಾಜನಿಗೆ ಡ್ರಿಲ್‌!: ಆರೋಪಿ ಯುವರಾಜನಿಂದ ವಂಚನೆ ಪ್ರಕರಣಗಳ ಸಂಬಂಧ ತನಿಖೆ ಮುಂದುವರಿಸಲಾಗಿದೆ. ಆತ ಇನ್ನೂ ಹಲವು ನಟಿಯರು, ರಾಜಕಾರಣಿಗಳಿಗೆ, ಐಎಎಸ್‌ ಹಾಗೂ ಪೊಲೀಸ್‌ ಅಧಿಕಾರಿಗಳಿಂದ ಉನ್ನತ ಹುದ್ದೆಗಳನ್ನು ಕೊಡಿಸುವುದಾಗಿ ಹೇಳಿ ಹಣ ಪಡೆದು ವಂಚಿಸಿದ್ದಾನೆ. ದೆಹಲಿಯಲ್ಲಿ ಪ್ರಭಾವಿ ಆಗಿರುವ ರಾಜಕೀಯ ನಾಯಕರ ಜತೆಗಿನ ಪೋಟೋಗಳನ್ನು ವಂಚನೆಗೆ ಅಸ್ತ್ರಗಳನ್ನಾಗಿ ಬಳಸಿಕೊಂಡಿದ್ದಾನೆ. ವಂಚನೆ ಹಣದಲ್ಲಿಯೇ ಯುವರಾಜ ಐಶಾರಾಮಿ
ಜೀವನ ನಡೆಸಿದ್ದಾನೆ.

ಸಾಕಷ್ಟು ಪ್ರಮಾಣದ ಸ್ಥಿರಾಸ್ಥಿಗಳನ್ನು ಹೊಂದಿದ್ದಾನೆ. ಸ್ಥಿರಾಸ್ಥಿಗಳ ಪತ್ತೆ ಕಾರ್ಯ ಮಾಡಲಾಗುತ್ತಿದೆ. ಈ ಮಾಹಿತಿಯನ್ನು
ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು. ಯುವರಾಜನಿಂದ ವಂಚನೆಗೊಳಗಾದವರು ಸಿಸಿಬಿ ಕಚೇರಿಯಲ್ಲಿ ದೂರು ದಾಖಲಿಸಬಹುದು ಎಂದು ಸಿಸಿಬಿಯ ಉನ್ನತ ಅಧಿಕಾರಿಯೊಬ್ಬರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next