ಗೋಪಿಕೆಯರು ತಮ್ಮ ಮನದಲ್ಲಿ ನಿನ್ನ ಬಿಂಬವನ್ನು ಪ್ರತಿಷ್ಠಾಪಿಸಿಕೊಂಡು ಪ್ರೇಮಿಸುತ್ತಿದ್ದರೂ, ರುಕ್ಮಿಣಿ, ಸತ್ಯಭಾಮೆಯರು ನಿನ್ನ ಪ್ರೇಮದೊಲವಲಿ ಮೀಯುತ್ತಿದ್ದರೂ, ನೀನು ಪ್ರೇಮಿಸಿದ್ದು ನನ್ನನ್ನು ಮಾತ್ರ ಎಂಬ ಹೆಮ್ಮೆ ಯೇ ನನಗೆ ಸಾಕು…
ನಾಡಿದ್ದು ಪ್ರೇಮಿಗಳ ದಿನವಂತೆ ಕೃಷ್ಣಾ… ಈ ಆಚರಣೆಗೆ ಎಲ್ಲೋ ಒಂದು ಕಡೆ ನಾವಿಬ್ಬರೇ ರೂವಾರಿಗಳು ಅಂತ ನಿನಗೆ ಅನಿಸುವುದಿಲ್ಲವೇ? ಜಗತ್ತಿನಲ್ಲಿ “ಪ್ರೇಮ’ ಎಂಬ ಪದಕ್ಕೆ ಅರ್ಥ ಹುಟ್ಟಿದ್ದೇ ನಿನ್ನಿಂದ, ಆ ಪದ ಸಾರ್ಥಕತೆ ಪಡೆದಿದ್ದೇ ನಮ್ಮಿಬ್ಬರ ಸ್ನೇಹದಿಂದ. ಮುಕ್ತಾಯವಿಲ್ಲದ ಅನಂತ, ಅಕ್ಷಯ ಭಾವವಿದು. ಪ್ರೇಮದ ಮತ್ತೂಂದು ಮುಖವೇ ನೀನಲ್ಲವೆ?
ಜಗತ್ತೆಲ್ಲಾ ನಿನ್ನ ಪ್ರೇಮದಲ್ಲೇ ಮುಳುಗಿ ಏಳುತ್ತಿದೆ. ಗೋಪಿಕೆಯರು ತಮ್ಮ ಮನದಲ್ಲಿ ನಿನ್ನ ಬಿಂಬವನ್ನು ಪ್ರತಿಷ್ಠಾಪಿಸಿಕೊಂಡು ಪ್ರೇಮಿಸುತ್ತಿದ್ದರೂ, ರುಕ್ಮಿಣಿ, ಸತ್ಯಭಾಮೆಯರು ನಿನ್ನ ಪ್ರೇಮದೊಲವಲಿ ಮೀಯುತ್ತಿದ್ದರೂ, ನೀನು ಪ್ರೇಮಿಸಿದ್ದು ನನ್ನನ್ನು ಮಾತ್ರ ಎಂಬ ಹೆಮ್ಮೆಯೇ ಸಾಕು ನನಗೆ. ನಿನ್ನ ಪ್ರೇಮದ ಋಣಭಾರ ಹೊತ್ತವಳು ನಾನು. ನಿನಗೆ ಅದೆಷ್ಟೇ ಹೆಸರುಗಳಿದ್ದರೂ ರಾಧಾಕೃಷ್ಣ ಎನ್ನುವ ಹೆಸರೇ ನಿನಗೆ ಶಾಶ್ವತ. ನನ್ನನ್ನಲ್ಲದೆ ಮತ್ಯಾವ ಹೆಣ್ಣಿಗೂ ನೀನು ಕೊನೆತನಕವೂ ಸ್ಥಾನ ಕೊಡದಿದ್ದುದು ನಿನ್ನ ಅಚಲ ಪ್ರೇಮಕ್ಕೆ ಉದಾಹರಣೆ ತಾನೆ? ಬಹುಶಃ ಈ ಜಗತ್ತಿನಲ್ಲಿ ಪ್ರೇಮಿಗಳಿಗೆ ಗುಡಿ ಕಟ್ಟಿರುವುದು ನಮ್ಮಿಬ್ಬರಿಗೆ ಮಾತ್ರ, ಜಪಿಸುವ ನಾಮವೂ ನಮ್ಮಿಬ್ಬರದೇ.
ನೀನು ನನ್ನನ್ನು ಅದೆಷ್ಟೇ ಪ್ರೇಮಿಸಿದರೂ, ಒಮ್ಮೊಮ್ಮೆ ನಿನ್ನ ತುಟಿಯ ಉಸಿರಿನ ಜೊತೆ ಆಡುವ ಕೊಳಲು, ಅದರ ನಾದಕ್ಕೆ ಮರುಳಾಗಿ ತೂಗಾಡುತ್ತಿದ್ದ ಪ್ರಕೃತಿ, ನಿನ್ನ ಮುಂಗುರಳ ಜೊತೆ ಸರಸವಾಡುತ್ತಾ ಪದೇ ಪದೆ ಅದರ ಸ್ಪರ್ಶ ಸುಖ ಅನುಭವಿಸುವ ನವಿಲುಗರಿ, ನೀ ಪ್ರೀತಿಯಿಂದ ಮೈದಡುವವ ಗೋವುಗಳು, ಎಲ್ಲದರ ಮೇಲೂ ಅಸೂಯೆ ಮೂಡುತ್ತಿತ್ತು. ಅವುಗಳೂ ಸಹ ನಾನಾಗಬಾರದಿತ್ತೇ ಎಂಬ ಜಿಜ್ಞಾಸೆ ಕಾಡುತ್ತಿತ್ತು. ಆದರೆ, ಈ ಭೂಮಿಯ ಸಕಲ ಚರಾಚರ ವಸ್ತುಗಳಿಗೂ ನಿನ್ನನ್ನು ಪ್ರೇಮಿಸುವ ಹಕ್ಕಿದೆ ಎಂದು ಅರಿವಾದಾಗ, ನಿನ್ನ ಮೇಲೆ ಮತ್ತಷ್ಟು ಪ್ರೇಮವುಕ್ಕಿ, ಮತ್ತಷ್ಟು ಅಗಾಧವಾಗಿ ನಿನ್ನನ್ನು ಪ್ರೀತಿಸತೊಡಗಿದೆ.
ಪ್ರೇಮಕ್ಕೆ ಸಾವಿಲ್ಲ, ಅದು ಅಜರಾಮರ ಎಂದು ಸಾರಿದ ಪ್ರೇಮಿಗಳು ನಾವಲ್ಲವೇ? ಎಂದಿಗೂ ಒಂದಾಗದ ಸಮಾನಾಂತರ ರೇಖೆಗಳು ನಾವು ಎಂಬ ಅರಿವಿದ್ದರೂ, ಒಬ್ಬರನ್ನೊಬ್ಬರು ಮಾನಸಿಕವಾಗಿ ಬಿಟ್ಟಿರಲು ಸಾಧ್ಯವಿಲ್ಲದ ಬದುಕು ನಮ್ಮದು. ಕಣ್ಣಲ್ಲಿ ನಿನ್ನ ಬಿಂಬ, ಹೃದಯದಲ್ಲಿ ನಿನ್ನ ರೂಪ, ನಮ್ಮಿಬ್ಬರ ಜೋಡಿ ಬಲು ಅಪರೂಪ. ಪ್ರತಿಯೊಬ್ಬ ಪ್ರೇಮಿಯ ಭಾವಕೋಶದಲ್ಲಿ ರಾಧಾ-ಕೃಷ್ಣರಂತೆ ಗಾಢವಾಗಿ ಪ್ರೀತಿಸಬೇಕು ಎಂಬ ವಾಂಛೆಯನ್ನು ಹುಟ್ಟು ಹಾಕಿದ ಕೀರ್ತಿ ನಮ್ಮಿಬ್ಬರದು ತಾನೆ? ಪ್ರೇಮಿಗಳ ದಿನದಂದು ಇಗೋ ನಿನ್ನ ರಾಧೆಯು, ನಿನಗೆ ಒಲವಿನ ಶುಭಾಶಯಗಳನ್ನು ಕಳಿಸುತ್ತಿದ್ದಾಳೆ, ಸ್ವೀಕರಿಸು ರಾಧಾ-ರಮಣ…
-ನಳಿನಿ. ಟಿ. ಭೀಮಪ್ಪ