ರಾಧೆಯ ಮುಪ್ಪಿನಲ್ಲಿ ಕೃಷ್ಣ ತನ್ನ ಮನದರಿಸಿಯನ್ನು ಭೇಟಿಯಾಗಲು ಬಂದಿದ್ದಾನೆ. ಆವತ್ತು ರಾಧೆ ಭೋರ್ಗರೆಯುವ ನದಿಯಾಗಿದ್ದರೆ, ಮುರಾರಿ ನೀರ ಮಧ್ಯದ ಕಲ್ಲು ಬಂಡೆಯಾಗಿದ್ದ.
ಗೋಪಾಲ, ಹೇಗಿದ್ದಿ..? ನಾನು… ಗುರ್ತು ಸಿಗಲಿಲ್ಲವಾ..? ಮರದ ಮರೆಯಲ್ಲಿ ನಿನ್ನ ಅಪ್ಪಿದವಳು, ಕೊಳಲ ನಾದಕ್ಕೆ ತಲೆದೂಗಿದವಳು, ಕಡೆದಿಟ್ಟ ಮಜ್ಜಿಗೆಯ ಮೇಲೆ ನಿನ್ನೆಸರ ತಿದ್ದಿದವಳು, ಕೈಮೇಲೆ ಮದರಂಗಿ, ತಲೆಗೆ ಜಡೆ ಹಾಕಿಸಿಕೊಂಡವಳು, ನೀ ಹೋಗುವಾಗ, ಕಿಟಕಿಯ ಸರಳುಗಳನ್ನಿಡಿದು ದೂರದಿಗಂತ ದಿಟ್ಟಿಸುತ್ತಾ ನಿಂತವಳು… ರಾಧೆ ಅಂತ ನನ್ನ ಹೆಸರು. ಹೇಗಿದ್ದಿಯೋ ಗೋಪಾಲ..? ಕೊಳಲೇನಾಯಿತು? ಅಯ್ಯೋ… ನಾನೆಷ್ಟು ದಡ್ಡಿ ನೋಡು.. ನನ್ನನ್ನು ನೋಡಲು ಬಂದ ನವನೀತನನ್ನು, ದಾರಿಯಲ್ಲೇ ನಿಲ್ಲಿಸಿ ಮಾತನಾಡುತ್ತಿದ್ದೇನೆ.
ಬನ್ನಿ ದೊರೆ.. ಈಗಷ್ಟೇ ತೆಗೆದಿಟ್ಟ ಬೆಣ್ಣೆ ಇದೆ. ನಾವಿಬ್ಬರೂ ನೆಟ್ಟ ಸಸಿಗಳೀಗ ಹೆಮ್ಮರವಾಗಿವೆ. ಅಗೋ ನೋಡಿ… ಇವು ನಿಮ್ಮ ಕೊಳಲ ನಾದಕ್ಕೆ ಕಾಯುತ್ತಿದ್ದ ಗೋವುಗಳ ಎಷ್ಟನೇ ತಳಿಗಳ್ಳೋ.. ಇದೇ ಮರದ ಹಿಂದಲ್ಲವಾ ನಾನು, ನೀನು ಮರೆಯಾಗುತ್ತಿದ್ದದ್ದು… ಎಷ್ಟು ಬದಲಾಗಿದೆಯಲ್ಲವಾ ವೃಂದಾವನ? ಬದಲಾಗದಿರೋದು ಈ ರಾಧೆಯ ಪ್ರೀತಿಯೊಂದೇ. ನೀನು ಹೋದ ಮೇಲೆ, ಊಟಕ್ಕೆ ಪರ್ಯಾಯವಾಗಿ ಎಷ್ಟೋ ಸಾರಿ ನೆನಪುಗಳನ್ನು ಬಳಸಿದ್ದೀನಿ. ಇದೇ ಮರದ ನೆರಳಿಗೆ ಮೈ ಚಾಚಿ ಮಲಗಿದೀನಿ. ಎಷ್ಟು ಚಂದವಿತ್ತು ಆ ಬಾಲ್ಯ… ಕೊಳಲ ಸದ್ದಾದರೆ ಸಾಕು, ನಿನ್ನಲ್ಲಿಗೆ ಓಡಿಬರುತ್ತಿದ್ದೆ.
ಅಷ್ಟು ಗೋಪಿಕೆಯರ ಮಧ್ಯೆ, ನಿನ್ನ ಕಣ್ಣು ನನ್ನೊಬ್ಬಳನ್ನೇ ದಿಟ್ಟಿಸುವಾಗ ಅದೆಂಥ ಪುಳಕ ಅಂತೀಯಾ..! ಬೆಣ್ಣೆ ಕದ್ದಾಗ ಬೈಸಿಕೊಂಡು ನಮ್ಮನೆಗೆ ಓಡಿ ಬಂದು, ನನ್ನ ಬೆನ್ನ ಹಿಂದೆ ಅಡಿಗಿಕೊಳ್ಳುತ್ತಿದ್ದೆಯಲ್ಲ, ನೆನಪಿದೆಯಾ..? ಹೋ… ಯುದ್ಧ ಮುಗಿಸಿ ಬಂದೆಯಾ..!? ಧರ್ಮ ಗೆದ್ದಿತಾ..!? ಅದಿರಲಿ ಕೃಷ್ಣಾ, ಜಗದ ಉದ್ಧಾರ ಮಾಡುವ ಆಶಯದಿಂದ ನೀನೇನೋ ಇಲ್ಲಿಂದ ಹೊರಟುಹೋದೆ. ಕೊಳಲೂದಿ, ಎದೆಯೊಳಗಿನ ದುಃಖವನ್ನೆಲ್ಲಾ ಹೊರಹಾಕಿದೆ.
ಆದರೆ ನನ್ನ ಕಥೆ? ಆವತ್ತು ಆಗಷ್ಟೇ ಇರುಳಿಳಿದು ಕಾರ್ಗತ್ತಲು ಕವಿದಿತ್ತು. ಮಿನುಗುತ್ತಿದ್ದ ಚುಕ್ಕೆಗಳನ್ನು ಬಿಟ್ಟರೆ ಮತ್ತೂಂದು ಬೆಳಕೇ ಇರಲಿಲ್ಲ. ನೀನು ಹಿಂತಿರುಗಿ ನೋಡದೇ ಹೋಗಿಬಿಟ್ಟೆ. ನಂತರ ಇಲ್ಲೇನಾಯ್ತು ಗೊತ್ತಾ? ಗೋಪಾಲನ ನೆನಪಿನಲ್ಲೇ ಈ ರಾಧೆ ಹುಚ್ಚಿಯಂತಾದಳು. ಗೋಕುಲದ ಯಾವ ಮೂಲೆಗೆ ಹೋದರೂ, ಕೊಳಲನಾದ ಕೈ ಬೀಸಿ ಕರೆದಂತಾಗುತ್ತಿತ್ತು. ನಿನ್ನ ಅಗಲಿಕೆ ನನ್ನ ಅಸ್ತಿತ್ವವನ್ನೇ ಅಲುಗಾಡಿಸಿಬಿಟ್ಟಿತು. ಅದರ ಹಿಂದೆಯೇ ಈ ಜನರ ಚುಚ್ಚುಮಾತು ಬೇರೆ… ಸಾವಿಗಿಂತ ಲೋಕಾಪವಾದವೇ ತುಂಬಾ ಹೆದರಿಸುತ್ತೆ ಮುರಾರಿ. ತುಂಬಾ ಹೆದರಿಸಿಬಿಡುತ್ತೆ.
ಕೃಷ್ಣ ಏಕೆ ನನ್ನ ಬಿಟ್ಟು ಹೋದ..? ಅಂತ ಪ್ರಶ್ನಿಸಿಕೊಂಡರೆ ಉತ್ತರವಾಗಿ ಕಣ್ಣ ಮುಂದೆ ಬಂದು ನಿಲ್ಲುವುದು ಕತ್ತಲೆ. ಘನವಾದ ಕತ್ತಲೆ. ಈಗ ಮತ್ತೆ ಬೆಳಕು ಬಂದಿದೆ. ಕೊಟ್ಟ ಮಾತಿನಂತೆ, ರಾಧೆಯ ಇಳಿ ವಯಸ್ಸಿನಲ್ಲೂ ಗೋಪಾಲ ಮತ್ತೆ ಬಂದಿದ್ದಾನೆ! ನನಗೆ ಪರಮಾತ್ಮ ಕೃಷ್ಣ ಬೇಡ, ನನ್ನ ಗೊಲ್ಲ ಕೃಷ್ಣ ಬೇಕು, ತುಂಟ ಕೃಷ್ಣ ಬೇಕು. ಈ ರಾಧೆಯ ಕೊನೆ ಕೋರಿಕೆಯೊಂದೇ ಮಾಧವ. ಇನ್ನೊಮ್ಮೆ ಕೊಳಲೂದಿ ಬಿಡು. ಈ ರಾಧೆಯ ಬಡಜೀವ, ತನ್ನ ಪ್ರೇಮ ಮೂರ್ತಿಯ ಪದತಲದಲ್ಲಿ ಲೀನವಾಗಿ ಬಿಡುತ್ತದೆ.
* ಕಿರಣ ನಾಯ್ಕನೂರ