Advertisement

ರಾಧಾ ಕುಟುಂಬದ ಮನೆಯ ಕನಸು ನನಸು

01:00 AM Feb 08, 2019 | Harsha Rao |

ಕಾಸರಗೋಡು: ಸಂಕಟದ ಕಡಲಲ್ಲಿ ಮುಳುಗಿದವರಿಗೆ ಸಾಂತ್ವನ ನೀಡಲು ರಾಜ್ಯ ಸರಕಾರದ ಜೈಲು ಇಲಾಖೆ ಮತ್ತು ಲೈಫ್‌ ಮಿಷನ್‌ ಕೈಜೋಡಿಸಿದ ಪರಿಣಾಮ ರಾಧಾ ಅವರ ಕುಟುಂಬಕ್ಕೆ ಸಿಕ್ಕಿದ್ದು ತಲೆಯಾನಿಸಲೊಂದು ಸೂರು.

Advertisement

ಕಿನಾನೂರು-ಕರಿಂದಳಂ ಗ್ರಾಮಪಂಚಾಯತ್‌ ನಿವಾಸಿ ಕುಂಞಂಬು ಅವರ ಪತ್ನಿಯವರೇ ರಾಧಾ. ಕೂಲಿಕಾರ್ಮಿಕರಾದ ಕುಂಞಂಬು ತಮ್ಮ ಕುಟುಂಬವನ್ನು ಸಲಹುತ್ತಿದ್ದರು. ಸ್ವಂತವಾಗೊಂದು ಪುಟ್ಟ ಮನೆ ಬೇಕು ಎಂಬುದು ಈ ಬಡಕುಟುಂಬದ ಅನೇಕ ವರ್ಷಗಳ ಕನಸಾಗಿತ್ತು. ಸ್ವಂತವಾಗಿ ಜಾಗವಿದ್ದರೂ, ಮನೆ ನಿರ್ಮಾಣಕ್ಕೆ ಆರ್ಥಿಕ ಮುಗ್ಗಟ್ಟು ಸಮಸ್ಯೆಯಾಗಿತ್ತು.

2009-2010 ಆರ್ಥಿಕ ವರ್ಷ ಕುಂಞಂಬು ಅವರು ಇ.ಎಂ.ಎಸ್‌.ಭವನ ನಿರ್ಮಾಣ ಯೋಜನೆಯಲ್ಲಿ ಮನೆ ನಿರ್ಮಾಣ ಸಹಾಯ ನಿಧಿಗೆ ಅರ್ಜಿ ಸಲ್ಲಿಸಿದ್ದರು. ಈ ಯೋಜನೆ ಪ್ರಕಾರ 75 ಸಾವಿರ ರೂ. ಆರ್ಥಿಕ ಸಹಾಯವೂ ಲಭಿಸಿತು. ಈ ಮೂಲಕ ಮನೆ ನಿರ್ಮಾಣದ ಕಾಮಗಾರಿಯೂ ಆರಂಭವಾಗಿತ್ತು.

ಮನೆ ನಿರ್ಮಾಣದ ಕಾಲು ಭಾಗ ಪೂರ್ಣ ವಾಗುತ್ತಿದ್ದಂತೆ, ದುರ್ದೈವ ರೂಪದಲ್ಲಿ ಕುಂಞಂಬು ಅವರಿಗೆ ಕ್ಯಾನ್ಸರ್‌ ಬಾಧಿಸಿರುವುದು ತಪಾಸಣೆಯಲ್ಲಿ ಪತ್ತೆಯಾಗಿತ್ತು. ಅನಂತರದ ದಿನಗಳಲ್ಲಿ ಮನೆ ನಿರ್ಮಾಣಕ್ಕೆ ಲಭಿಸಿದ ಮೊಬಲಗು ಇವರ ಚಿಕಿತ್ಸೆಗೆ ವೆಚ್ಚವಾಗಿತ್ತು. ಕೊನೆಗೆ ಚಿಕಿತ್ಸೆಯೂ ಫಲಕಾರಿಯಾಗದೆ ಕುಂಞಂಬು ಅವರು ನಿಧನ ಹೊಂದಿದರು. ಇದರ ಪರಿಣಾಮ ತೆರಳಲು ಬೇರೆ ಗತಿಯಿಲ್ಲದೆ ಓರ್ವ ಪುತ್ರಿ ಮತ್ತು ಆಕೆಯ ಮಗನ ಸಹಿತ ರಾಧಾ ಅವರು ಕಾಲುಭಾಗ ನಿರ್ಮಾಣಗೊಂಡ, ಮಾಡಿಗೆ ಚಾಪೆ ಹಾಸಿದ ಸ್ಥಿತಿಯ ಹರುಕು ಮನೆಯಲ್ಲೇ ಕಷ್ಟದಲ್ಲಿ ಬದುಕಬೇಕಾಗಿ ಬಂದಿತ್ತು. 8 ವರ್ಷಗಳ ಕಾಲ ಈ ದುಸ್ಥಿತಿಯಲ್ಲಿ ಈ ಕುಟುಂಬ ಬಾಳಿಕೊಂಡು ಬಂದಿತ್ತು. ಬಿರು ಬೇಸಗೆ, ಬಿರುಸಿನ ಗಾಳಿಮಳೆ, ಮೈಕೊರೆಯುವ ಚಳಿ ಎಲ್ಲವೂ ಇವರನ್ನು ಹಣ್ಣಾಗಿಸಿತ್ತು. ಮಗಳು ಕೂಲಿ ಕಾರ್ಮಿಕಳಾಗಿ ಮನೆ ಮಂದಿಯನ್ನು ನೋಡಿಕೊಳ್ಳುತ್ತಿದ್ದಾರೆ. ಆಕೆಯ ಪುತ್ರ ಸ್ಥಳೀಯ ಶಾಲೆಯಲ್ಲಿ 9 ನೇ ತರಗತಿಯಲ್ಲಿ ಕಲಿಯುತ್ತಿದ್ದಾನೆ.

Advertisement

2018 ರಲ್ಲಿ ಲೈಫ್‌ ಮಿಷನ್‌ ಯೋಜನೆಯ ಒಂದನೆ ಹಂತದಲ್ಲಿ ರಾಧಾ ಅವರ ಬಾಳಲ್ಲಿ ನಿರೀಕ್ಷೆಯ ಕಿರಣಗಳು ಮೂಡಿದುವು. ಮನೆ ನಿರ್ಮಾಣ ಪೂರ್ಣಗೊಳಿಸುವುದಕ್ಕಿರುವ ಆರ್ಥಿಕ ಸಹಾಯ ಪಡೆಯುವವರ ಪಟ್ಟಿಯಲ್ಲಿ ರಾಧಾ ಅವರ ಹೆರಸು ಸೇರ್ಪಡೆಯಾಗಿತ್ತು.

ಇದಕ್ಕೆ ಪೂರಕವಾಗಿ ಮನೆ ನಿರ್ಮಾಣಕ್ಕೆ ಶ್ರಮದಾನ ಒದಗಿಸಲು ಗ್ರಾಮ ವಿಸ್ತರಣಾಧಿಕಾರಿ ಸಜಿತ್‌ ಪುಳುಕ್ಕೂರು ಅವರ ಮನವಿ ಮೇರೆಗೆ ಚೀಮೇನಿ ತೆರೆದ ಜೈಲಿನ ಅಧಿಕಾರಿಗೆ ಮನವಿ ಸಲ್ಲಿಸಿದ್ದರು. ಇದರ ಪರಿಣಾಮ ರಾಜ್ಯಸರಕಾರದ ವಿಶೇಷ ಆದೇಶದಂತೆ ಜೈಲಿನಲ್ಲಿರುವ ಕೈದಿಗಳಲ್ಲಿ 15 ಮಂದಿ ನಿರ್ಮಾಣ ಕಾರ್ಯಕ್ಕೆ ಹೆಗಲು ನೀಡಿದ್ದರು. ಜೈಲು ವರಿಷ್ಠಾಧಿಕಾರಿ ವಿ. ಜಯಕುಮಾರ್‌ ಮತ್ತು ಜೈಲ್‌ ವೆಲ್ಫೇರ್‌ ಅಧಿಕಾರಿ ಕೆ. ಶಿವಪ್ರಸಾದ್‌ ನೇತೃತ್ವದಲ್ಲಿ ಕಾಮಗಾರಿ ನಡೆಯಿತು. ಬೆಳಗ್ಗೆ 10ರಿಂದ ಸಂಜೆ 5 ಗಂಟೆ ವರೆಗೆ ಕಾಮಗಾರಿ ನಡೆಸಲಾಗಿತ್ತು. ಪ್ರತಿಫಲ ರೂಪದಲ್ಲಿ ದಿನಕ್ಕೆ 230 ರೂ. ಕೂಲಿ ಇವರಿಗೆ ಜೈಲು ಇಲಾಖೆ ವತಿಯಿಂದ ಲಭಿಸಿತ್ತು.

ಅನಂತರದ ದಿನಗಳಲ್ಲಿ ಗ್ರಾಮ ಪಂಚಾಯತ್‌ ಅಧ್ಯಕ್ಷ ಎ.ವಿಧುಬಾಲ ಅವರ ನೇತೃತ್ವದಲ್ಲಿ ರಚಿಸಿದ ವಾರ್ಡ್‌ ಮಟ್ಟದ ಕ್ರಿಯಾ ಸಮಿತಿ ಮನೆಗೆ ಬೇಕಾದ ಸಾಮಗ್ರಿಗಳ ಪೂರೈಕೆಗೆ ಸಾರ್ವಜನಿಕರ ಸಹಕಾರದೊಂದಿಗೆ ಹೆಗಲು ನೀಡಿತ್ತು. ಕಾಮಗಾರಿ ನಿರತ ಕೈದಿಗಳಿಗೆ ಹೊತ್ತು ಹೊತ್ತಿನ ಆಹಾರ ಕ್ರಿಯಾ ಸಮಿತಿ ವತಿಯಿಂದ ಒದಗಿಸಲಾಗಿತ್ತು. 2018ರ ಆಗಸ್ಟ್‌ ತಿಂಗಳಲ್ಲಿ ಮನೆ ನಿರ್ಮಾಣ ಪೂರ್ತಿಗೊಂಡಿತ್ತು.

ಸಹೃದಯರ ಸಹಾಯ, ಲೈಫ್‌ ಯೋಜನೆ ಮತ್ತು ಜೈಲು ಇಲಾಖೆಯ ಬೆಂಬಲದಿಂದ ತಮಗೊಂದು ಸೂರು ಸಿಕ್ಕಿದೆ ಎಂಬ ಧನ್ಯತೆಯಲ್ಲಿ ರಾಧಾ ಮತ್ತು ಕುಟುಂಬದ ಸದಸ್ಯರು ಬಾಳುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next