Advertisement

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

09:52 PM Mar 28, 2024 | Team Udayavani |

ಬೆಂಗಳೂರು: “ನೋಡುತ್ತಿರಿ, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್‌ ಅಭ್ಯರ್ಥಿ ಡಿ.ಕೆ.ಸುರೇಶ್‌ ಅವರ ಠೇವಣಿಯನ್ನು ಕಳೆಯುತ್ತೇವೆ. ಕರ್ನಾಟಕದ ಜನತೆ ಹಂಸಕ್ಷೀರ ನ್ಯಾಯದಂತೆ ಕಾಂಗ್ರೆಸ್‌ ನಡೆಸುತ್ತಿರುವ ಎಲ್ಲ ಅಪಪ್ರಚಾರಗಳನ್ನು ಮೀರಿ ನಿಂತು ಪ್ರಧಾನಿ ನರೇಂದ್ರ ಮೋದಿಯವರ ಕೈ ಹಿಡಿಯುತ್ತಾರೆ’ ಎಂದು ರಾಜ್ಯ ಬಿಜೆಪಿ ಚುನಾವಣ ಉಸ್ತುವಾರಿ ಡಾ| ರಾಧಾಮೋಹನ್‌ ದಾಸ್‌ ಅಗರ್ವಾಲ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Advertisement

ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆಗೆ ಮಾತನಾಡಿದ ಅವರು, ಪ್ರತಿ ಚುನಾವಣೆಯಲ್ಲಿ ಜನ ಅಭ್ಯರ್ಥಿಯನ್ನು ತುಲನಾತ್ಮಕವಾಗಿ ಪರಿಶೀಲಿಸುತ್ತಾರೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲೂ ಹಾಗೆಯೇ ಆಗುತ್ತದೆ. ಇಲ್ಲಿ ಬಿಜೆಪಿ ಗೆಲ್ಲುತ್ತದೆಯೇ ಎಂದು ನೀವು  ಪ್ರಶ್ನಿಸುವುದೇ ಬೇಡ. ಯಾಕೆಂದರೆ ನಾವು ಕಾಂಗ್ರೆಸ್‌ ಅಭ್ಯರ್ಥಿಯ ಠೇವಣಿಯನ್ನು ಕಳೆಯುವ ಉತ್ಸಾಹದಲ್ಲಿದ್ದೇವೆ. ಕಾಂಗ್ರೆಸ್‌ ಅಭ್ಯರ್ಥಿಯ ಅಣ್ಣನ ಬಳಿ (ಡಿ.ಕೆ.ಶಿವಕುಮಾರ್‌) ಭಾರೀ ಹಣವಿರಬಹುದು. ಆದರೆ ನಮ್ಮ ಅಭ್ಯರ್ಥಿ ಜನರ ಹೃದಯ ಗೆಲ್ಲುತ್ತಾರೆ ಎಂದು ವ್ಯಾಖ್ಯಾನಿಸಿದ್ದಾರೆ.

ಗ್ಯಾರಂಟಿ ನಿಲ್ಲಿಸುತ್ತಾರೆ:

ಲೋಕಸಭಾ ಚುನಾವಣೆ ಬಳಿಕ ರಾಜ್ಯ ಸರಕಾರ ನಿಶ್ಚಿತವಾಗಿ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುತ್ತದೆ. ಕೇಂದ್ರ ಹಣ ಕೊಡುತ್ತಿಲ್ಲ ಎಂಬ ಸಿದ್ಧ ಉತ್ತರ ಅವರಲ್ಲಿದೆ. ಬರ ಪರಿಹಾರದ ವಿಚಾರದಲ್ಲಿ ರಾಜ್ಯ ಸರಕಾರ ಸುಪ್ರೀಂಕೋರ್ಟ್‌ ಮೊರೆಹೋಗಿರುವುದು ಕೆಟ್ಟ ರಾಜನೀತಿಗೆ ಒಂದು ಉದಾಹರಣೆ. ಕೇಂದ್ರದ ವಿರುದ್ಧ ಸದಾ ಆರೋಪ ಮಾಡುತ್ತಾ ಇರುವುದಕ್ಕಾಗಿ ಈ ಮಾರ್ಗ ಹುಡುಕಿದ್ದಾರೆ. ಆದರೆ ರಾಜ್ಯದ ಜನರು ಹಂಸಕ್ಷೀರ ನ್ಯಾಯದ ರೀತಿಯಲ್ಲಿ ಕಾಂಗ್ರೆಸ್‌ನ ಅಪಪ್ರಚಾರವನ್ನು ತಿರಸ್ಕರಿಸುತ್ತಾರೆ ಎಂದರು.

ಈ ಚುನಾವಣೆಯ ಫ‌ಲಿತಾಂಶ ಏನಾಗುತ್ತದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರಿಗೆ ಅರ್ಥವಾಗಿದೆ. ಹೀಗಾಗಿ ಅವರು ಚುನಾವಣೆಗೆ ಸ್ಪರ್ಧಿಸಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಚಿವರ ಮಕ್ಕಳನ್ನು ಬಲಿಪಶು ಮಾಡಿ ತಮ್ಮ ಪುತ್ರನನ್ನು ಮಾತ್ರ ರಕ್ಷಣೆ ಮಾಡಿಕೊಂಡಿದ್ದಾರೆ. ಸಂಪುಟ ಸದಸ್ಯರ ಮಕ್ಕಳ ಜತೆಗೆ ಡಾ| ಯತೀಂದ್ರ ಅವರನ್ನೂ ಕಣಕ್ಕಿಳಿಸಬಹುದಿತ್ತಲ್ಲವೇ? ಯಾಕೆ  ಇಳಿಸಿಲ್ಲ ? ಅವರಿಗೆ ಲೋಕಸಭಾ ಚುನಾವಣೆಯ ಫ‌ಲಿತಾಂಶ ಏನಾಗುತ್ತದೆ ಎಂಬುದು ಗೊತ್ತಿದೆ.  ನಿಮ್ಮ ಮಕ್ಕಳನ್ನು ಗೆಲ್ಲಿಸಿಕೊಳ್ಳುವುದಕ್ಕೆ ಸಾಧ್ಯವಾಗಿಲ್ಲ, ನಿಮಗೆ ಸಂಪುಟದಲ್ಲಿ ಇರುವ ನೈತಿಕತೆ ಇಲ್ಲ ಎಂದು ಸತೀಶ್‌ ಜಾರಕಿಹೊಳಿಯವರನ್ನು ಒಳಗೊಂಡಂತೆ ಸಂಪುಟ ಸಹೋದ್ಯೋಗಿಗಳನ್ನು ಕಾಂಗ್ರೆಸ್‌ ಕಿತ್ತು ಹಾಕುತ್ತದೆ, ನೋಡುತ್ತಾ ಇರಿ ಎಂದು ಭವಿಷ್ಯ ನುಡಿದರು.

Advertisement

2023ರಲ್ಲಿ ಚುನಾವಣೆಯಲ್ಲಿ ಸೋತಾಗಲೂ ಜನರ ಮನಸ್ಸಿನಲ್ಲಿ ಬಿಜೆಪಿ ಇತ್ತು. ಈಗಲೂ ಇದೆ. ಕಾಂಗ್ರೆಸ್‌ 135 ವಿಧಾನಸಭಾ ಕ್ಷೇತ್ರಗಳನ್ನು ಕೇವಲ ಮುಸ್ಲಿಮರ ಮತಗಳ ಗೆದ್ದಿದೆಯೇ? ಅಧಿಕಾರಕ್ಕೆ ಬಂದಾಗಿನಿಂದಲೂ  ಹಿಂದೂ ವಿರೋಧಿ ಧೋರಣೆ ತೋರಿಸುತ್ತಿದೆ. ರಾಜ್ಯಸಭಾ ಸದಸ್ಯರ ಬೆಂಬಲಿಗರು ವಿಧಾನಸೌಧದಲ್ಲಿ  “ಪಾಕಿಸ್ಥಾನ್‌ ಜಿಂದಾಬಾದ್‌’ ಎಂದು ಘೋಷಣೆ ಕೂಗುತ್ತಾರೆ. ಆ ರಾಜ್ಯಸಭಾ ಸದಸ್ಯರಿಗೆ ಕಾಂಗ್ರೆಸ್‌ ನೋಟಿಸ್‌ ಕೂಡ ನೀಡಿಲ್ಲ. ಯಾಕೆಂದರೆ ಆ ಧೋರಣೆ ಕಾಂಗ್ರೆಸ್‌ನ ಡಿಎನ್‌ಎಯಲ್ಲೇ ಇದೆ. ಈ ಸರಕಾರ ರಾಜ್ಯದಲ್ಲಿ ಮುಂದಿನ ನಾಲ್ಕು ವರ್ಷಗಳ ಕಾಲ ಅಧಿಕಾರದಲ್ಲಿ ಇರುವುದು ಬಿಜೆಪಿಯ ಭವಿಷ್ಯದ ದೃಷ್ಟಿಯಿಂದ ಉತ್ತಮ. ಮುಂದಿನ ಬಾರಿ ಅವರು 10 ಕ್ಷೇತ್ರಗಳಲ್ಲೂ ಗೆಲ್ಲುವುದಿಲ್ಲ ಎಂದರು.

ಬದಲಾವಣೆ ಮಾತ್ರ ಶಾಶ್ವತ :

ಬಿಜೆಪಿಯಲ್ಲಿ ಯಾರೂ ಪಕ್ಷಕ್ಕಿಂತ ಮೇಲಲ್ಲ. ನಮ್ಮ ಪಕ್ಷ ನಿರಂತರವಾಗಿ ಪರಿವರ್ತನೆಗೆ ಒಡ್ಡಿಕೊಳ್ಳುತ್ತದೆ. ಹಾಗೆಯೇ ಎಲ್ಲ ಕಾರ್ಯಕರ್ತರಿಗೂ ಅವಕಾಶ ನೀಡುತ್ತದೆ. ಸುಮಲತಾ, ಪ್ರತಾಪಸಿಂಹ, ಮುನಿಸ್ವಾಮಿ, ಡಿ.ವಿ.ಸದಾನಂದ ಗೌಡ, ಅನಂತ ಕುಮಾರ್‌ ಹೆಗಡೆ ಅವರೂ ಈ ಅಂಶವನ್ನು ಅರ್ಥೈಸಿಕೊಂಡೇ ಅವಕಾಶ ತಪ್ಪಿದ್ದನ್ನು ಒಪ್ಪಿಕೊಂಡಿದ್ದಾರೆ.  ಬಿ.ಎಸ್‌.ಯಡಿಯೂರಪ್ಪ ಅವರಿಗೂ ಇದು ಅರಿವಿದೆ. ಕೇಂದ್ರ ಸಚಿವ ಎ.ನಾರಾಯಣ ಸ್ವಾಮಿ, ಗೋವಿಂದ ಕಾರಜೋಳ ಜತೆಯಾಗಿ ಬಂದೇ ಟಿಕೆಟ್‌ ವಿಚಾರ ಇತ್ಯರ್ಥ ಮಾಡಿಸಿಕೊಂಡಿದ್ದಾರೆ. ಇದರಲ್ಲಿ ಯಾವುದೇ ಭಿನ್ನಮತವಿಲ್ಲ ಎಂದು ಹೇಳಿದರು.

ಈಶ್ವರಪ್ಪ ಉಮೇದುವಾರಿಕೆ ಸಲ್ಲಿಸುವುದಿಲ್ಲ :

ಕೆ.ಎಸ್‌.ಈಶ್ವರಪ್ಪ ನಮ್ಮ ಹಿರಿಯ ನಾಯಕರು. ಅವರಲ್ಲಿ ದೋಷವಿದೆ ಎಂದು ನಾನು ಆರೋಪಿಸುವುದಿಲ್ಲ. ಅವರು ಕೋಪದಲ್ಲಿದ್ದಾರೆ. ಅವರು ನಮ್ಮ ಪಕ್ಷದ ಸಮರ್ಪಿತ ಕಾರ್ಯಕರ್ತ. ಒಬ್ಬೊಬ್ಬರು ಒಂದೊಂದು ರೀತಿ ಕೋಪ ಪ್ರದರ್ಶಿಸುತ್ತಾರೆ. ಗೆದ್ದ ಮೇಲೆ ಬಿಜೆಪಿ ಬೆಂಬಲಿಸುವುದಾಗಿ ಹೇಳಿರುವ ಅವರನ್ನು ಪಕ್ಷ ವಿರೋಧಿ ಎನ್ನಲಾಗುತ್ತದೆಯೇ? ಅವರು ಉಮೇದುವಾರಿಕೆ ಸಲ್ಲಿಸುವುದಿಲ್ಲ. ಸಲ್ಲಿಸಿದರೂ ಹಿಂಪಡೆಯುವ ವಿಶ್ವಾಸವಿದೆ. ಹಾಗಾಗಿ ಯಾವುದೇ ಶಿಸ್ತು ಕ್ರಮ ಕೈಗೊಂಡಿಲ್ಲ ಎಂದರು. ಕೇಂದ್ರ ಸಚಿವ ಪ್ರಹ್ಲಾದ್‌ ಜೋಷಿ ವಿರುದ್ಧ ಕೆಲ ಮಠಾಧೀಶರು ಬೇಸರ ವ್ಯಕ್ತಪಡಿಸಿರುವುದನ್ನು ನಾನು ನೋಡಿದ್ದೇನೆ. ಧರ್ಮಗುರುಗಳ ಜತೆ ಮಾತುಕತೆ ನಡೆಸಿ, ಅವರ ಭಾವನೆ ಅರ್ಥಮಾಡಿಕೊಳ್ಳುತ್ತೇವೆ. ಸಮಸ್ಯೆ ಬಗೆಹರಿಸಲಾಗುವುದು ಎಂದು ರಾಧಾಮೋಹನ್‌ ದಾಸ್‌ ವಿಶ್ವಾಸ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next