ಪ್ರಾಧ್ಯಾಪಕ, ಸಂಸ್ಕೃತ ವಿದ್ವಾಂಸ, ಅರ್ಥಧಾರಿ, ಕಲಾವಿಮರ್ಶಕ, ಲೇಖಕ ಹೀಗೆ ಬಹುಮುಖ ಪ್ರತಿಭಾ ಸಂಪನ್ನ
ಡಾ| ಎಮ್. ರಾಧಾಕೃಷ್ಣ ಭಟ್ ನೋವು ನುಂಗಿ ನಲಿವು ನೀಡಿದ ಆಜಾತಶತ್ರು.
ಪೆರ್ಲದ ಶ್ರೀಪತಿ ಶಾಸ್ತ್ರಿಗಳ ಮನೆತನದಲ್ಲಿ ಮೈಕಾನ ರಾಮಭಟ್- ಸರಸ್ವತಿ ದಂಪತಿ ಪುತ್ರರಾಗಿ ಜನಿಸಿದ ರಾಧಾಕೃಷ್ಣರದು ಪರಂಪರೆಯಿಂದ ಬಂದ ವೈದಿಕ ವಿದ್ಯೆ ಮತ್ತು ಆಂಗ್ಲ ವಿದ್ಯೆಯಲ್ಲಿ ಶ್ರೇಷ್ಟ ಸಾಧನೆ ಮಾಡಿದ ವ್ಯಕ್ತಿತ್ವ. ಚಿನ್ನದ ಪದಕದೊಂದಿಗೆ ಸ್ನಾತಕ, ಸ್ನಾತಕೋತ್ತರ ಪದವಿ ಮುಗಿಸಿ ಕಿನ್ನಿಗೋಳಿಯ ಪಾಂಪೈ ಕಾಲೇಜಿನಲ್ಲಿ ಉಪನ್ಯಾಸಕ ವೃತ್ತಿ ಆರಂಭಿಸಿದರು. ಮುಂದೆ ಶಿರ್ವದ ಸೈಂಟ್ ಮೇರಿಸ್ ಕಾಲೇಜಿನಲ್ಲಿ ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗಿ, ವಿಭಾಗದ ಮುಖ್ಯಸ್ತರಾಗಿ ವೃತ್ತಿ ಮಾಡಿದರು. ಮಂಗಳೂರು ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿ ಗಳಿಸಿದರು.
ಅವರ ತಂದೆ ದೊಡ್ಡ ವೈದಿಕರು. ಏಕಮಾತ್ರ ಪುತ್ರರಾಗಿದ್ದ ರಾಧಾಕೃಷ್ಣರಿಗೆ ಅದನ್ನು ಮುಂದುವರಿಸಲೇ ಬೇಕಾದ ಅನಿವಾರ್ಯತೆ. ಅದಕ್ಕಾಗಿ ಸಂಸ್ಕೃತ ಶಾಸ್ತ್ರ, ವೇದ ವಿದ್ಯೆಯನ್ನು ಅಧ್ಯಯನ ಮಾಡಿ ಅದರಲ್ಲಿ ಪಾಂಡಿತ್ಯ ಪಡೆದರು. ವಿದ್ಯಾರ್ಥಿಯಾಗಿರುವಾಗಲೇ ಸಂಯೋಗ ಕಾದಂಬರಿ ಪ್ರಕಟಿಸಿದವರು. ಅವರ ಹಲವು ಕಥೆಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಕಲಾ ಸಾಧಕರ ವ್ಯಕ್ತಿ ಚಿತ್ರಗಳನ್ನು ಸೊಗಸಾಗಿ ಬರೆದವರು. ಒಳ್ಳೆಯ ವಾಗ್ಮಿ. ಎಳವೆಯಲ್ಲಿ ಯಕ್ಷಗಾನ ವೇಷ ಹಾಕಿದವರು. ಅರ್ಥಧಾರಿಯಾಗಿ ಚಿಂತನಪೂರ್ಣ ಮಾತುಗಾರಿಕೆಯಿಂದ ಆಶುತ್ವ ಮೆರೆದವರು. ಕಿನ್ನಿಗೋಳಿಯ ಯಕ್ಷಲಹರಿ ಸಂಘಟನೆಯಲ್ಲಿ ಸಕ್ರಿಯರಾಗಿದ್ದು ಅದರ ಯಶಸ್ಸಿನಲ್ಲಿ ಮಹತ್ವದ ಪಾತ್ರವಹಿಸಿದ್ದರು. ಸಂಗೀತಾದಿ ಕಲೆಗಳನ್ನು ವೀಕ್ಷಿಸಿ ಕಲಾ ವಿಮರ್ಶೆ ಮಾಡಬಲ್ಲ ಸಹೃದಯಿ. ಕಮ್ಮಟ, ಗೋಷ್ಟಿಗಳಲ್ಲಿ ವಿದ್ವತ್‌ಪೂರ್ಣ ಮಾತುಗಾರಿಕೆಯಿಂದ ಕಾರ್ಯಕ್ರಮದ ಘನತೆ ಹೆಚ್ಚಿಸಿದವರು.ಅವರ ಅಕಾಲಿಕ ಮರಣ ಆಪ್ತವಲಯಕ್ಕೆ ಮರೆಯಲಾಗದ ಆಘಾತ; ಕುಟುಂಕ್ಕೆ, ಶಿಕ್ಷಣ ಕ್ಷೇತ್ರಕ್ಕೆ, ಸಮಾಜಕ್ಕೆ ತುಂಬಲಾರದ ನಷ್ಟ.
ಪೊ›| ನಾರಾಯಣ ಎಂ.ಹೆಗಡೆ