ಪ್ರೀತಿ, ಪ್ರೇಮ, ಪ್ರಣಯ ಜೊತೆಗೊಂದು ಸೇಡು…ಇವತ್ತಿನ ಯಂಗ್ ಸ್ಟರ್ಸ್ ಗೆ ತುಂಬಾ ಇಷ್ಟವಾದ ಸಬ್ಜೆಕ್ಟ್. ಇಂತಹ ಕಥೆಗೆ ಬೇರೆ ಬೇರೆ ಆಯಾಮಗಳನ್ನು ನೀಡಿ ಈಗಾಗಲೇ ಅನೇಕ ಸಿನಿಮಾಗಳು ಬಂದಿವೆ. ಈ ವಾರ ತೆರೆಕಂಡಿರುವ “ರಾಧಾ ಸರ್ಚಿಂಗ್ ರಮಣ ಮಿಸ್ಸಿಂಗ್’ ಕೂಡಾ ಇಂತಹ ಅಂಶಗಳ ಜೊತೆ ಸಾಗುವ ಸಿನಿಮಾ. ಹಾಗಂತ ನಿರ್ದೇಶಕರು ರೆಗ್ಯುಲರ್ ಕಥೆಯನ್ನು ಆಯ್ಕೆ ಮಾಡಿಕೊಳ್ಳದೇ ಒಂದಷ್ಟು ಹೊಸ ಪ್ರಯೋಗಗಳ ಮೂಲಕ ಸಿನಿಮಾ ಕಟ್ಟಿಕೊಟ್ಟಿದ್ದಾರೆ.
ಕಾಲೇಜು, ಅಲ್ಲಿನ ಸ್ನೇಹ, ಮೋಜು-ಮಸ್ತಿ ಜೊತೆಗೊಂದು ಅಚಾತುರ್ಯವಾಗಿ ನಡೆಯುವ ಘಟನೆ, ಅಲ್ಲಿಂದ ಹೊಸ ತಿರುವು ಪಡೆದುಕೊಳ್ಳುವ ಸಿನಿಮಾ… ಹೀಗೆ ಸಾಗುವ ಸಿನಿಮಾ ಪ್ರೇಕ್ಷಕರ ಕುತೂಹಲಕ್ಕೆ ಕಾರಣವಾಗುತ್ತಾ ಸಾಗುತ್ತದೆ. ಆ ಮಟ್ಟಿಗೆ ಒಂದು ಪ್ರಯತ್ನವಾಗಿ ಈ ಸಿನಿಮಾವನ್ನು ಮೆಚ್ಚಬಹುದು.
ಇನ್ನು, ಸಿನಿಮಾದ ನಿಜವಾದ ಕಥೆ ತೆರೆದುಕೊಳ್ಳುವುದು ಇಂಟರ್‌ವಲ್ ನಂತರ. ಅಲ್ಲಿವರೆಗೆ ಎಲ್ಲಾ ಸಿನಿಮಾಗಳಂತೆ ಪಾತ್ರ ಪರಿಚಯ, ಸ್ನೇಹಿತರ ಹರಟೆಯಲ್ಲಿ ಫಸ್ಟ್‌ಹಾಫ್ ಮುಗಿದು ಹೋಗುತ್ತದೆ. ಈ ಕಥೆಯಲ್ಲಿ ಹೆಣ್ಣಿನ ಸೇಡಿದೆ, ಹೆಣ್ಣುಮಕ್ಕಳನ್ನು ಕೇವಲವಾಗಿ ನೋಡುವ ದುಷ್ಟರಿಗೊಂದು ಪಾಠವಿದೆ. ಮುಖ್ಯವಾಗಿ ಇದೊಂದು ರಿವೆಂಜ್ ಸ್ಟೋರಿ ಎನ್ನಬಹುದು. ಅದನ್ನು ಬೇರೆ ಬೇರೆ ಘಟನೆಗಳ ಮೂಲಕ ಕಟ್ಟಿಕೊಟ್ಟಿದ್ದಾರೆ. ಹಾಗಂತ ಚಿತ್ರದಲ್ಲಿ ಮನರಂಜನೆಗೆ ಕೊರೆತೆ ಇಲ್ಲ.
ಯುವ ಪ್ರತಿಭೆಗಳಾದ ರಾಘವ್ ಮತ್ತು ಸಂಜನಾ ಬುರ್ಲಿ ಜೋಡಿಯಾಗಿ ನಟಿಸಿದ್ದಾರೆ. ಸಿಕ್ಕಿರುವ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಉಳಿದಂತೆ ಯಮುನಾ ಶ್ರೀನಿಧಿ, ಲತಾ ಗಿರೀಶ್, ರೇಖಾ, ಗೋಪಿನಾಥ್ ಭಟ್, ಚಿರಾಗ್, ಪ್ರದೀಪ್ ತಿಪಟೂರು, ಗುರು ಹೆಗಡೆ, ಯಶಸ್ವಿ ಶಂಕರ್ ಮೊದಲಾದವರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರದ ಛಾಯಾಗ್ರಹಣ, ಸಂಗೀತ ಕಥೆಗೆ ಪೂರಕವಾಗಿದೆ.