ನ್ಯೂಯಾರ್ಕ್: ಅಮೆರಿಕದಲ್ಲಿ ವಿದೇಶಿ ವಲಸಿಗರನ್ನು ಹೊರ ಹಾಕುವ ಯತ್ನದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನಿರತರಾಗಿರುವ ವೇಳೆಯಲ್ಲೇ ಜನಾಂಗೀಯ ದಾಳಿ ನಡೆದಿದ್ದು, ಭಾರತೀಯ ಇಂಜಿನಿಯರ್ ಒಬ್ಬನನ್ನು ಗುಂಡಿಕ್ಕಿ ಹತ್ಯೆಗೈಯಲಾಗಿದ್ದು, ಇಬ್ಬರು ಗುಂಡಿನ ದಾಳಿಯಲ್ಲಿ ಗಾಯಗೊಂಡ ಕಳವಳಕಾರಿ ಘಟನೆ ಗುರುವಾರ ರಾತ್ರಿ ನಡೆದಿದೆ.
ಕನ್ಸಾಸ್‌ನ ಒಲಾತೆ ಎಂಬಲ್ಲಿ ಬಾರೊಂದರಲ್ಲಿ ಜನಾಂಗೀಯ ದಾಳಿ ನಡೆದಿದ್ದು ಹೈದರಾಬಾದ್ ಮೂಲದ ಇಂಜಿನಿಯರ್ ಶ್ರೀನಿವಾಸ್ ಕುಚಿಬೋಟ್ಲಾ (32) ಎನ್ನುವವರನ್ನು ಗುಂಡಿಕ್ಕಿ ಹತ್ಯೆಗೈಯಲಾಗಿದೆ.
ಆ್ಯಡಮ್ ಪುರಿಂಟೋನ್ ಎಂಬ ನಿವೃತ್ತ ನೌಕಾಪಡೆಯ ಸಿಬಂದಿ ಗುಂಡಿನ ದಾಳಿ ನಡೆಸಿದ್ದು , ನಮ್ಮ ದೇಶದಿಂದ ತೊಲಗಿ.. ಎಂದು ಘೋಷಣೆ ಕೂಗಿ ಗುಂಡು ಹಾರಿಸಿದ್ದು ಶ್ರೀನಿವಾಸ್ ಗುಂಡು ತಗುಲಿ ಮೃತಪಟ್ಟರೆ, ಜೊತೆಗಿದ್ದ ಸ್ನೇಹಿತ ಅಲೋಕ್ ಮದಸನಿ ಗಂಭೀರವಾಗಿ ಗಾಯಗೊಂಡಿದ್ದಾರೆ. ತಡೆಯಲು ಬಂದ ಇನ್ನೊಬ್ಬ ವ್ಯಕ್ತಿಯೂ ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ.
ಭಾರತೀಯ ರಾಯಭಾರಿ ಕಚೇರಿ ಗಾಯಾಳು ಮತ್ತು ಮೃತರ ಕುರಿತಾಗಿ ಎಲ್ಲಾ ನೆರವು ನೀಡಲು ಮುಂದೆ ಬಂದಿದ್ದು ತನಿಖೆಗೆ ಸಹಕರಿಸುತ್ತಿದೆ. ಎಫ್ಬಿಐ ಘಟನೆಯ ಕುರಿತು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದೆ.
ಘಟನೆ ಬಗ್ಗೆ ತೀವ್ರ ಕಳವಳ ವ್ಯಕ್ತ ಪಡಿಸಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಹತರಾಗಿರುವ ಶ್ರೀನಿವಾಸ್ ಅವರ ತಂದೆಗೆ ಕರೆ ಮಾಡಿ ಮಾತನಾಡಿದ್ದಾರೆ.
ಶ್ರೀನಿವಾಸ್ ಅವರ ಮೃತ ದೇಹ ಸ್ವದೇಶಕ್ಕೆ ತರಲು ಎಲ್ಲಾ ರೀತಿಯ ನೆರವು ನೀಡುವುದಾಗಿ ಟ್ವೀಟ್ ಮಾಡಿದ್ದಾರೆ.