ಮಂಜನಿಗೆ ಸರ್ಕಾರಿ ನೌಕರಿ ಹಿಡಿದು ತಿಂಗಳ ಬರೋ ಸಂಬಳಕ್ಕೆ ಕೈ ಒಡ್ಡೋ ಮನಸ್ಸಿಲ್ಲ. ಇಂಟರ್‌ನ್ಯಾಶನಲ್ ಲೆವೆಲ್ ಬಿಝಿನೆಸ್ ಮ್ಯಾಗ್ನೆಟ್ ಆಗೋ ಆಸೆ. ಬಿಝಿನೆಸ್ ಮಾಡಲು ಕಾಸು ಬೇಕು. ಮಂಜ ಸಾಲು ಮಾಡುತ್ತಾನೆ, ಬಿಝಿನೆಸ್ ಕೈ ಹಿಡಿಯೋದಿಲ್ಲ. ಮಂಜನ ಸಾಲ ಬೆಳೆಯುತ್ತದೆ. ಸಾಲಗಾರರ ಕಾಟವೂ ಹೆಚ್ಚಾಗುತ್ತದೆ. ಮಂಜ ಯಮಾರಿಸೋದರಲ್ಲಿ ಎತ್ತಿದ ಕೈ. ಹೇಗೋ ಯಾಮಾರಿಸಿಕೊಂಡು ಓಡಾಡುತ್ತಿರುತ್ತಾನೆ.
ಒಂದು ಹಂತದಲ್ಲಿ ಮಂಜ ಬದಲಾಗುತ್ತಾನೆ, ಸಾಲ ಮುಕ್ತ ಮಂಜನ ಜೀವನದಲ್ಲಿ ಹೊಸ ಗಾಳಿ ಕೂಡಾ ಬೀಸುತ್ತದೆ. ಒಂದು ಸಮಯದಲ್ಲಿ ಸಾಲಗಾರರು ಮಂಜನನ್ನು ಅಟ್ಟಾಡಿಸಿಕೊಂಡು ಹೋಗುತ್ತಿದ್ದರೆ, ಈಗ ಮಂಜನೇ ಸಾಲಗಾರರನ್ನು ಓಡಿಸಿಕೊಂಡು ಹೋಗುತ್ತಾನೆ. ಅಂತಹ ಬದಲಾವಣೆ ಮಂಜನಲ್ಲಿ ಆಗಲು ಕಾರಣವೇನು ಎಂಬ ಕುತೂಹಲವಿದ್ದರೆ ನೀವು “ಮಂಜ’ನನ್ನು ನೋಡಬಹುದು.
“ಮೇಲುಕೋಟೆ’ ಮಂಜ ಒಂದು ಔಟ್ ಅಂಡ್ ಔಟ್ ಫ್ಯಾಮಿಲಿ ಸ್ಟೋರಿ. ಫ್ಯಾಮಿಲಿ ಸ್ಟೋರಿ ಎಂದಾಕ್ಷಣ ಇದೊಂದು ಸಿಕ್ಕಾಪಟ್ಟೆ ಸೀರಿಯಸ್ ಸಿನಿಮಾ ಎಂಬ ತೀರ್ಮಾನಕ್ಕೆ ನೀವು ಬರುವಂತಿಲ್ಲ. ಒಂದು ಕ್ಷಣ ಜಗ್ಗೇಶ್ ಅವರನ್ನು ನೆನೆಪಿಸಿಕೊಳ್ಳಿ. ಇದು ಜಗ್ಗೇಶ್ ಸಿನಿಮಾ. ಜಗ್ಗೇಶ್ ಇದ್ದ ಕಡೆ ಹಾಸ್ಯಕ್ಕೆ ಭರವಿಲ್ಲ. ಅದು “ಮೇಲುಕೋಟೆ ಮಂಜ’ ಚಿತ್ರದಲ್ಲೂ ಮುಂದುವರಿದಿದೆ. ಇದು ಪಕ್ಕಾ ಜಗ್ಗೇಶ್ ಸ್ಟೈಲ್ ಸಿನಿಮಾ.
ಡೈಲಾಗ್ ಡೆಲಿವರಿ, ಮ್ಯಾನರೀಸಂ ಮೂಲಕ ಜಗ್ಗೇಶ್ ಇಲ್ಲಿ ಮಜಾ ಕೊಡುತ್ತಾರೆ. ಸಾಲಗಾರರ ಕಾಟ, ಮಂಜನ ಓಟದ ನಡುವೆ ತಂದೆ-ಮಗನ ಬಾಂಧವ್ಯದ ಒಂದೆಳೆಯನ್ನು ಕೂಡಾ ಇಲ್ಲಿ ಸೇರಿಸಲಾಗಿದೆ. ಮಂಜನ ಕಥೆ ಮುಖ್ಯವಾಗಿ ಎರಡು ಟ್ರ್ಯಾಕ್‌ಗಳಲ್ಲಿ ಸಾಗುತ್ತದೆ. ಒಂದು ತಂದೆ-ಮಗನ ಬಾಂಧವ್ಯ, ಮತ್ತೂಂದು ಕಷ್ಟದಲ್ಲಿರುವ ಹುಡುಗಿಗೆ ಸಹಾಯ ಮಾಡುವ ಮಂಜನ ಗುಣ … ಈ ಎರಡೂ ಟ್ರ್ಯಾಕ್‌ಗಳ ಮೂಲಕ ಸಾಗುವ ಮಂಜನ ಯಾನದಲ್ಲಿ ನಗುವಿಗೇನೂ ಭರವಿಲ್ಲ.
ತಂದೆ-ಮಗನ ಸೆಂಟಿಮೆಂಟ್ ಎಂದಾಕ್ಷಣ ಕಣ್ಣೀರಧಾರೆ ಇದೆಂರ್ಥವಲ್ಲ. ಆ ಭಾವನೆಯನ್ನು ಒಂದೆಳೆಯಲ್ಲಿ ಕಟ್ಟಿಕೊಟ್ಟು ಉಳಿದಂತೆ ಕಾಮಿಡಿಗೆ ಇಲ್ಲಿ ಹೆಚ್ಚು ಪ್ರಾಮುಖ್ಯತೆ ಕೊಡಲಾಗಿದೆ. ಚಿತ್ರದಲ್ಲಿ ಲವ್‌ಸ್ಟೋರಿಯನ್ನು ಹೆಚ್ಚು ಬೆಳೆಸುವ ಗೋಜಿಗೆ ಹೋಗದಿರುವುದು ಸಮಾಧಾನದ ವಿಷಯ. ಕಥೆಯ ವಿಷಯದಲ್ಲಿ “ಮೇಲುಕೋಟೆ ಮಂಜ’ ತೀರಾ ಹೊಸದೇನಲ್ಲ. ಅಪ್ಪ-ಮಗನ ಸಂಬಂಧ, ಕಷ್ಟಕ್ಕೆ ಸಹಾಯ ಮಾಡುವ ಗುಣದ ನಾಯಕನ ಕಥೆಗಳು ಈಗಾಗಲೇ ಸಾಕಷ್ಟು ಬಂದಿವೆ.
ಆದರೆ, ಜಗ್ಗೇಶ್ ಅವರ ಕಾಮಿಡಿಯ ಎದುರು ಕಥೆ ನಿಮ್ಮ ಗಮನಕ್ಕೆ ಬರೋದಿಲ್ಲ. ನಗೋದಿಕ್ಕೆ ಲಾಜಿಕ್ ಬೇಕಿಲ್ಲ, ಹಾಸ್ಯವನ್ನು ಎಂಜಾಯ್ ಮಾಡಬೇಕೇ ಹೊರತು ಬೇರೆಯ ಅಂಶಗಳನ್ನಲ್ಲ ಎಂದು ತೀರ್ಮಾನಿಸಿ ನೀವು ಈ ಸಿನಿಮಾ ನೋಡಿದರೆ ಮಂಜ ನಿಮಗೆ ಇಷ್ಟವಾಗುತ್ತಾನೆ. ಜಗ್ಗೇಶ್ ಕೂಡಾ ಕಥೆಗಿಂತ ಕಾಮಿಡಿ ಟ್ರ್ಯಾಕ್‌ಗಳಿಗೆ ಹೆಚ್ಚು ಒತ್ತುಕೊಟ್ಟಿರೋದು ಎದ್ದು ಕಾಣುತ್ತದೆ. ಕಾಮಿಡಿ ಜೊತೆಗೆ ಮಾಸ್‌ಪ್ರಿಯರನ್ನು, ರಸಿಕರನ್ನು ರಂಜಿಸುವ ಪ್ರಯತ್ನವಾಗಿ ಫೈಟ್, ಐಟಂ ಸಾಂಗ್ ಕೂಡಾ ಇಟ್ಟಿದ್ದಾರೆ.
ಇದಕ್ಕೆ ಕತ್ತರಿ ಹಾಕಿ ಕಾಮಿಡಿ ಟ್ರ್ಯಾಕ್ ಅನ್ನು ಮತ್ತಷ್ಟು ಬೆಳೆಸುವ ಅವಕಾಶ ಕೂಡಾ ಇತ್ತು. ಚಿತ್ರದಲ್ಲಿ ಮಂಜನಾಗಿ ಜಗ್ಗೇಶ್ ನಿಮಗೆ ಇಷ್ಟವಾಗುತ್ತಾರೆ. ಸಾಲಗಾರರನ್ನು ಯಾಮಾರಿಸುವ ಅವರ ಕಲೆ, ಮಿಮಿಕ್ರಿ ಚಮಕ್ ಎಲ್ಲದರಲ್ಲೂ ಜಗ್ಗೇಶ್ ಮಿಂಚಿದ್ದಾರೆ. ನಾಯಕಿ ಐಂದ್ರಿತಾ ಪಾತ್ರಕ್ಕೆ ಹೆಚ್ಚೇನು ಸ್ಕೋಪ್ ಇಲ್ಲ. ಉಳಿದಂತೆ ಶ್ರೀನಿವಾಸ ಪ್ರಭು, ರಂಗಾಯಣ ರಘು, ವೆಂಕಟೇಶ್, ಬ್ಯಾಂಕ್ ಜನಾರ್ಧನ್ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.
ಚಿತ್ರ: ಮೇಲುಕೋಟೆ ಮಂಜ
ನಿರ್ಮಾಣ: ಆರ್.ಕೃಷ್ಣ
ನಿರ್ದೇಶನ: ಜಗ್ಗೇಶ್
ತಾರಾಗಣ: ಜಗ್ಗೇಶ್, ಐಂದ್ರಿತಾ ರೇ, ರಂಗಾಯಣ ರಘು, ಶ್ರೀನಿವಾಸ್ ಪ್ರಭು, ಬ್ಯಾಂಕ್ ಜನಾರ್ಧನ್ ಮತ್ತಿತರರು.
* ರವಿಪ್ರಕಾಶ್ ರೈ