ರಬಕವಿ-ಬನಹಟ್ಟಿ: ರಬಕವಿ ಬನಹಟ್ಟಿ ನಗರಸಭೆಯ ವ್ಯಾಪ್ತಿಯಲ್ಲಿರುವ ಹೊಸೂರಿನ ಸ್ಮಶಾನ ವಕ್ಫ್ ಆಸ್ತಿ ಎಂದು ಉತಾರೆಯಲ್ಲಿ ನಮೂದಾಗಿದೆ.
ಸರ್ವೆ ನಂ. 64 ರಲ್ಲಿಯ 1 ಎಕರೆ 39 ಗುಂಟೆ ಜಾಗ 13.10. 2020 ರಲ್ಲಿ ಖಬರಸ್ತಾನ ಸುನ್ನಿ ವಕ್ಫ್ ಹೆಸರಿನಲ್ಲಿ ನಮೂದಾಗಿದೆ.
ಈ ಮೊದಲು ಸಣ್ಣವ್ವ ಕೋಲಾರ ಎಂಬವರು ಜಾಗವನ್ನು ಸರ್ಕಾರಕ್ಕೆ ನೀಡಿದರನ್ವಯ 1.39 ಎಕರೆ ಮಸಣವಾಟ (ಸ್ಮಶಾನ) ಹಲವಾರು ವರ್ಷಗಳಿಂದ ರುದ್ರಭೂಮಿಯಾಗಿ ಬಳಕೆಯಾಗುತ್ತಿದೆ. 2013 ರಲ್ಲಿ ಇದೇ ಜಾಗದ ಮೇಲೆ ಜಮಖಂಡಿಯ ಭಾರತೀಯ ಸ್ಟೇಟ್ ಬ್ಯಾಂಕ್ ರೂ. 3 ಲಕ್ಷವನ್ನು ಸಾಲವನ್ನು ನೀಡಿದೆ. ಇದು ಕೂಡಾ ಉತಾರೆಯಲ್ಲಿ ನಮೂದಾಗಿದೆ.
ಸ್ಮಶಾನದ ಮೇಲೂ ಕಣ್ಣು: ವಕ್ಫ್ ಭೂತ ರಬಕವಿ ಬನಹಟ್ಟಿ ತಾಲೂಕನ್ನು ಆವರಿಸಿಕೊಂಡಿದೆ. ಈಗ ಹೊಸೂರಿನ ಸ್ಮಶಾನದ ಮೇಲೂ ಬಿದ್ದಿದೆ. ರೈತರ ಒಡೆತನದಲ್ಲಿರುವ ಭೂಮಿಗೆ ದಾಖಲೆಗಳನ್ನು ಸೃಷ್ಠಿಸಿ ಅದು ನಮ್ಮ ವಶದಲ್ಲಿತ್ತು ಎಂದು ತಕರಾರು ತೆಗೆಯುತ್ತಿದ್ದಾರೆ ಎಂದು ತೇರದಾಳ ಶಾಸಕ ಸಿದ್ದು ಸವದಿ ಆರೋಪಿಸಿದ್ದಾರೆ.
ಆದ್ದರಿಂದ ರಬಕವಿ, ಬನಹಟ್ಟಿ ಮತ್ತು ತೇರದಾಳಕ್ಕೆ ಸೇರಿದ ಎಲ್ಲ ರೈತರೂ ಕೂಡಲೇ ಎಚ್ಚೆತ್ತುಕೊಂಡು ತಾಲೂಕು ಕಾರ್ಯಾಲಯಕ್ಕೆ ತೆರಳಿ ತಮ್ಮ ಭೂ ದಾಖಲೆಗಳನ್ನು ಪರಿಶೀಲಿಸಬೇಕು ಎಂದು ಶಾಸಕ ಸವದಿ ತಿಳಿಸಿದರು.