ರಬಕವಿ-ಬನಹಟ್ಟಿ: ಮಹಾರಾಷ್ಟ್ರ ಕೊಲ್ಹಾಪೂರ ಕನೇರಿಮಠದಲ್ಲಿ ಫೆ.20 ರಿಂದ 26ರವರೆಗೆ ಜರುಗುವ ಪಂಚಮಹಾಭೂತ ಲೋಕೋತ್ಸವ ಕಾರ್ಯಕ್ರಮಕ್ಕೆ 30 ಲಕ್ಷಕ್ಕೂ ಅಧಿಕ ಭಕ್ತರು ಭಾಗಿಯಾಗಲಿದ್ದು, ಒಂದು ದಿನದ ಪ್ರಸಾದ ಸ್ವೀಕರಿಸುವ 5 ಲಕ್ಷ ಜನ ಭಕ್ತರಿಗೆ ಈ ಭಾಗದ ಹಾಲುಗ್ಗಿ, ಕಿಚಡಿ, ಸಾಂಬಾರು ಉಣಬಡಿಸಲು ತೀರ್ಮಾನಿಸಲಾಯಿತು.
ನಗರದ ಭದ್ರನ್ನವರ ಕಲ್ಯಾಣ ಮಂಟಪದಲ್ಲಿ ರವಿವಾರ ಜರುಗಿದ ಪೂರ್ವಭಾವಿ ಸಭೆಯಲ್ಲಿ ರಬಕವಿ-ಬನಹಟ್ಟಿ, ಮಹಾಲಿಂಗಪುರ ಹಾಗೂ ತೇರದಾಳ ಸೇರಿದಂತೆ ಎಲ್ಲ ಗ್ರಾಮಗಳ ಭಕ್ತರಿಂದ ಸುಮಾರು 35 ಲಕ್ಷ ರೂ. ವೆಚ್ಚದಲ್ಲಿ ಪ್ರಸಾದ ವ್ಯವಸ್ಥೆ ಕಲ್ಪಿಸುವ ಯೋಜನೆ ರೂಪಿಸಲಾಗಿದೆ ಎಂದು ಬಿಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಭೀಮಶಿ ಮಗದುಮ್ ತಿಳಿಸಿದರು.
ಹಳೇ ಹುಬ್ಬಳ್ಳಿ ವೀರಭಿಕ್ಷಾವರ್ತಿ ಮಠದ ಶಿವಶಂಕರ ಸ್ವಾಮೀಜಿ ಮಾತನಾಡಿ, ಆಕಾಶ, ವಾಯು, ಅಗ್ನಿ, ಜಲ, ಪೃಥ್ವಿಗಳ ಜಾಗೃತಿ, ಜೀವನಶೈಲಿ ಸರಿಪಡಿಸಿಕೊಳ್ಳುವ ದೃಷ್ಟಿಯಿಂದ ಕನೇರಿಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮಿಗಳು ಇಂತಹ ಕಾರ್ಯಕ್ರಮ ಆಯೋಜಿಸಿದ್ದಾರೆ ಎಂದು ಹೇಳಿದರು.
ಹುಲ್ಯಾಳದ ಹರ್ಷಾನಂದ ಶ್ರೀಗಳು ಮಾತನಾಡಿ, ಕನೇರಿಯಲ್ಲಿ ಜರುಗುವ ಲೋಕೋತ್ಸವ ಕಾರ್ಯಕ್ರಮ ಒಂದು ವಾರ ಕಾಲ ನಡೆಯಲಿದ್ದು, 25ಕ್ಕೂ ಅಧಿಕ ರಾಜ್ಯಗಳಿಂದ ಜನ ಸೇರಲಿದ್ದಾರೆ. 50ಕ್ಕೂ ಅಧಿಕ ದೇಶಗಳಿಂದ ಅತಿಥಿಗಳ ಆಗಮನವಾಗಲಿದೆ. 300ಕ್ಕೂ ಅಧಿಕ ಜಿಲ್ಲೆಗಳಿಂದ ಸಂಘಟನೆಗಳ ಪ್ರತಿನಿಧಿ ಗಳು, 500ಕ್ಕೂ ಹೆಚ್ಚು ಉಪ ಕುಲಪತಿಗಳು ಸಾಕ್ಷಿಯಾಗಲಿದ್ದಾರೆ. 650 ಎಕರೆ ಪ್ರದೇಶದಲ್ಲಿ ಈ ಲೋಕೋತ್ಸವ ಕಾರ್ಯಕ್ರಮ ಜರುಗಲಿದೆ ಎಂದರು.
ಸಾವಿರಕ್ಕೂ ಅಧಿಕ ಸಾಧು ಸಂತರು, 1500 ಕೃಷಿ ಉಪಕರಣಗಳು, ಉತ್ಪನ್ನಗಳು, ವಿವಿಧ ಜೀವನೋಪಯೋಗಿ ವಸ್ತುಗಳ ಮಳಿಗೆಗಳು ಬರಲಿವೆ. 3 ಸಾವಿರ ಜನರು 3ಡಿ ಮತ್ತು ಕಲಾವಿದರಿಂದ ಕಲಾಪ್ರದರ್ಶನ ಆಯೋಜಿಸಿದ್ದು, 10 ಸಾವಿರದಷ್ಟು ಉದ್ಯೋಗಿ, ವ್ಯಾಪಾರಿಗಳು ಭಾಗವಹಿಸಲಿದ್ದಾರೆ. ಪ್ರಮುಖವಾಗಿ 1ಲಕ್ಷ ಚ.ಅಡಿಯಲ್ಲಿ ಬೃಹತ್ ಸಭಾಮಂಟಪ ತಯಾರಾಗಿದ್ದು, 30ಲಕ್ಷಕ್ಕೂ ಅಧಿಕ ಜನ ಸೇರಲಿದ್ದಾರೆಂದರು.
ಈ ಸಂದರ್ಭದಲ್ಲಿ ಹಳಿಂಗಳಿ ಕಮರಿಮಠದ ಶಿವಾನಂದ ಶ್ರೀಗಳು, ಸಿದ್ಧರಾಜ ಪೂಜಾರಿ, ಅಂಬಾದಾಸ ಕಾಮೂರ್ತಿ, ಬ್ರಿಜ್‌ಮೋಹನ ಡಾಗಾ, ಶಂಕರ ಜಾಲಿಗಿಡದ, ಗಂಗಪ್ಪ ಮುಗತಿ, ಶ್ರೀಶೈಲ ದಭಾಡಿ, ಶ್ರೀಪಾದ ಬಾಣಕಾರ, ಹರ್ಷವರ್ಧನ ಪಟವರ್ಧನ, ಮೋಹನ ಪತ್ತಾರ, ಪ್ರಭಾಕರ ಮೊಳೇದ ಸೇರಿದಂತೆ ಇತರರು ಇದ್ದರು.