Advertisement

ಭಾರತದ ಕಿರೀಟಕ್ಕೆ ನೊಬೆಲ್‌ ಗರಿ ತಂದುಕೊಟ್ಟ ರವೀಂದ್ರನಾಥ ಠಾಗೋರ್‌

03:06 PM Feb 26, 2021 | Team Udayavani |

ಭಕ್ತಿಯೋಗ, ಕರ್ಮಯೋಗ ಮತ್ತು ಜ್ಞಾನಯೋಗದ ಕುರಿತು ಅಪಾರ ಅರಿವನ್ನು ಹೊಂದಿದ್ದ ಠಾಗೋರ್‌ ಅದನ್ನು ಇತರರಿಗೂ ಬೋಧಿಸುತಿದ್ದರು.

Advertisement

ಮಾನವನ ಕೊನೆಯ ಸತ್ಯವು ಅವನ ಬುದ್ಧಿಶಕ್ತಿಯಲ್ಲಾಗಲಿ, ಐಹಿಕ ಅಥಾವ ಭೌತಿಕ ಸಂಪತ್ತಿನಲ್ಲಾಗಲಿ ಇಲ್ಲ. ಅದು ಆತನ ಅನುಕಂಪದ ಕಲ್ಪನೆಯಲ್ಲಿ, ಅವನ ಹೃದಯವನ್ನು ಬೆಳಗುವ ಕಾಂತಿಯಲ್ಲಿ ,ಅವನ ಸ್ವಾರ್ಥ ತ್ಯಾಗದ ಚಟುವಟಿಕೆಯಲ್ಲಿ ,ಜಾತಿ ವರ್ಣಗಳ ಬೇಲಿಗಳನ್ನು ದಾಟಿ ಜಗತ್ತಿನ ಉದ್ದಗಲಕ್ಕೂ ಪ್ರೀತಿಯನ್ನು ಪಸರಿಸುವ ಸಾಮರ್ಥ್ಯದಲ್ಲಿ ಇರುವುದೆಂದು ಬಲವಾಗಿ ನಂಬಿದವರು ಠಾಗೋರ್‌.

ಗುರುದೇವ್‌ ಎಂಬ ಅಂಕಿತನಾಮದಿಂದ ಖ್ಯಾತಿಯನ್ನು ಪಡೆದ ರವೀಂದ್ರನಾಥ ಠಾಗೋರ್‌ ವಿಶ್ವ ಸಾಹಿತ್ಯದ ನಕ್ಷೆಯಲ್ಲಿ ಭಾರತವನ್ನು ಗುರುತಿಸುವಂತೆ ಮಾಡಿ ವಿಶ್ವಮಾನ್ಯ ಕವಿಯೆನಿಸಿಕೊಂಡಿದ್ದಾರೆ. ಭಾರತಕ್ಕೆ ಸಾಹಿತ್ಯ ಕ್ಷೇತ್ರದಲ್ಲಿ ನೊಬೆಲ್‌ ಪ್ರಶಸ್ತಿ ತಂದುಕೊಟ್ಟ ಮೊತ್ತ ಮೊದಲ ಯುರೋಪೇತರ ವ್ಯಕ್ತಿ ಎಂಬ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಏಷ್ಯಾದಲ್ಲಿ ನೊಬೆಲ್‌ ಪ್ರಶಸ್ತಿ ಗಳಿಸಿದ ಮೊದಲ ಭಾರತೀಯ ಎಂಬ ಹಿರಿಮೆಯೂ ಇವರ ಹೆಸರಿನಲ್ಲಿದೆ.

1861 ಮೇ 7ರಂದು ದೇವೇಂದ್ರನಾಥ ಠಾಗೋರ್‌ ಹಾಗೂ ಶಾರದಾ ದಂಪತಿಯ ಪುತ್ರನಾಗಿ ಕೋಲ್ಕತಾದಲ್ಲಿ ಜನಿಸಿದರು. ನಾಲ್ಕು ಗೋಡೆಯ ಮಧ್ಯದ ವಿದ್ಯಾ ಭ್ಯಾಸದಿಂದ ಹಿಂಜರಿದು ಮನೆಯಲ್ಲಿಯೇ ಓದಿ ಜ್ಞಾನವನ್ನು ವೃದ್ಧಿಸಿಕೊಂಡರು. ಮಧ್ಯರಾತ್ರಿ ತನಕ ಓದಿನಲ್ಲಿಯೇ ತಲ್ಲೀನನಾಗಿ ಬಿಡುತ್ತಿದ್ದರು. 1875ರ ಫೆಬ್ರವರಿ 11ರಂದು ಹಿಂದೂ ಮೇಳ ಸಮಾವೇಶದಲ್ಲಿ ತಮ್ಮ ಕೆಲವೊಂದು ಕವನಗಳನ್ನು ವಾಚಿಸಿ ತಮ್ಮ ಕವಿತ್ವವನ್ನು ಸಾರ್ವಜನಿಕವಾಗಿ ಸಾದರಪಡಿಸಿದರು. ತಾವು ಇಂಗ್ಲೆಂಡಿನ ವಿವಿಗೆ ಸೇರಿದ ಸಮಯದಲ್ಲೂ ಭಾರತೀಯರಿಗೆ ಬರಹಗಳನ್ನು ಕಳಿಸುತ್ತಲೇ ಇದ್ದರು. ರವೀಂದ್ರನಾಥರ ಕವನಗಳ ಇಂಗ್ಲಿಷ್‌ ಭಾಷಾಂತರ ಕೃತಿ 1912ರಲ್ಲಿ “ಗೀತಾಂಜಲಿ’ಎಂಬ ನಾಮದೊಂದಿಗೆ ಪ್ರಕಟವಾಯಿತು. ಈ ಕೃತಿಗೆ 1913ರಲ್ಲಿ ಸಾಹಿತ್ಯ ಕ್ಷೇತ್ರದ ನೊಬೆಲ್‌ ಪ್ರಶಸ್ತಿ ದೊರೆಯಿತು.

ಮಹಾತ್ಮಾ ಗುರುದೇವ
ಠಾಗೋರ್‌ ಮತ್ತು ಮಹಾತ್ಮಾ ಗಾಂಧೀಜಿ ಅವರ ನಡುವಿನ ಆತ್ಮೀಯ ಸಂಬಂಧವನ್ನು ಪ್ರಸ್ತಾಪಿಸದೆ ಇದ್ದಲ್ಲಿ ಠಾಗೋರರ ಕುರಿತ ಯಾವುದೇ ಅಧ್ಯಯನವು ಪೂರ್ತಿಯಾಗಲಾರದು. ರಾಜಕೀಯ ವಿಷಯದಲ್ಲಿ ಭಿನ್ನಾಭಿಪ್ರಾಯ ಇದ್ದರೂ ಅವರೊಳಗಿನ ಆಧಾರ ಮತ್ತು ಪ್ರೀತಿಗೆ ಅದರಿಂದ ಕುಂದುಂಟಾಗಲಿಲ್ಲ. ಇಳಿವಯಸ್ಸಿನಲ್ಲಿ ವಿಶ್ವಭಾರತಿಯನ್ನು ನಿಭಾಯಿಸುವುದು ರವೀಂದ್ರರಿಗೆ ಕಷ್ಟದ ಕೆಲಸವಾಗಿತ್ತು.

Advertisement

ಇದಕ್ಕಾಗಿ ಹಣ ಸಂಗ್ರಹಿಸಲು ತಾವು ಹೊಸದಾಗಿ ರಚಿಸಿದ ಸಂಗೀತ ನಾಟಕ “ಚಿತ್ರಾಂಗದ’ ವನ್ನು ಆಡಿಸಲು ತಂಡದೊಂದಿಗೆ ಊರೂರು ಅಲೆಯಬೇಕಾಯಿತು. ಠಾಗೋರರ ಈ ಶ್ರಮವನ್ನು ಕಂಡು ಗಾಂಧೀಜಿಯವರು ತಮ್ಮವರ ಸಹಾಯಪಡೆದು ಹಣ ಸಂಗ್ರಹಿಸಿ ನೀಡಿದರು. ಗಾಂಧೀಜಿಯವರು ಸೆರೆಮನೆಯಲ್ಲಿದ್ದಾಗ ಠಾಗೋರರು ಧೋರಣೆ ಗಳನ್ನು ಟೀಕಿಸಲಿಲ್ಲ. ಏಕೆಂದರೆ ಯಾವುದೇ ವಿವಾದಕ್ಕೆ ಮಿತಿಯನ್ನು ಹಾಕಿ ಕೊಂಡು ಅಲ್ಲಿಂದಾಚೆಗೆ ಅದು ಬೆಳೆಯದಂತೆ ನೋಡಿಕೊಳ್ಳುತ್ತಿದ್ದರು. ಇಂತಹ ಸೌಹಾರ್ದ ಪೂರ್ಣ ವಿಮರ್ಶೆ ಅವರೊಳಗೆ ಬೆಳೆದಿತ್ತು.

ಎರಡನೇ ಜಾಗತಿಕ ಯುದ್ಧವನ್ನು ಕಂಡು ಠಾಗೋರರು ಮೂಕವೇದನೆ ಅನುಭವಿಸಿದರು. ಮಾನವನು ಸ್ವಾರ್ಥಿಯಾಗಿರದೆ ಕರ್ಮ ಯೋಗಿ ಯಾಗಿರಬೇಕು. ಭಿನಾನುಭಿ ಎಂಬ ಭಾವನ್ನು ತೊರೆದು ನಾವು ಎಂಬ ಏಕತೆಯ ಮನೋಭಾವ ಬೆಳೆಸಬೇಕು. ಆಗ ಮಾತ್ರ ಭಗವಂತನ ದರ್ಶನವಾಗುವುದು. ಆ ಆನಂದವೇ ಬ್ರಹ್ಮಜ್ಞಾನ ಎಂದು ಲೋಕಕ್ಕೆ ಸಾರಿದರು. ಮಾನವ ಪ್ರೀತಿಯ ವಸ್ತು ಪರಮಾತ್ಮನಾಗಬೇಕು ಎಂದು ಸಂದೇಶ ನೀಡಿದರು. ಠಾಗೋರ್‌ ಕೇವಲ ಸಾಹಿತಿಯಲ್ಲ, ದೇಶದ ಹೆಮ್ಮೆಯ ಪ್ರತೀಕ, ನಿಸರ್ಗ ಪ್ರೇಮಿ, ದಾರ್ಶನಿಕ ಮಹರ್ಷಿ. ಅಂತಿಮವಾಗಿ ಅವರನ್ನು ಕಾಡಿದ ಅನಾರೋಗ್ಯ ಯಾವುದೇ ಶಸ್ತ್ರ ಚಿಕಿತ್ಸೆಗೂ ಬಗ್ಗಲಿಲ್ಲ. 1941 ಆ. 7ರಂದು ಭಗವಂತನಲ್ಲಿ ಲೀನವಾದಾರು. ಜಗತ್ತನ್ನು ಅಸತ್ಯದಿಂದ ಸತ್ಯದ ಕಡೆಗೆ, ಅಜ್ಞಾನದಿಂದ ಜ್ಞಾನದ ಕಡೆಗೆ ಮೃತ್ಯುವಿನಿಂದ ಅಮರತ್ವದ ಕಡೆಗೆ ಕರೆದೊಯ್ಯುವ ದಾರಿದೀಪವಾಗಿ ಅಮರರಾದರು.

ವಿಶ್ವಭಾರತಿ
ಸೇವಾಕೈಂಕರ್ಯದಲ್ಲಿ ಆಸಕ್ತರಾದ ಠಾಗೋರರು ವಿಶ್ವಭಾರತಿ ಎಂಬ ಹೆಸರಿನಲ್ಲಿ ಅಂತಾರಾಷ್ಟ್ರೀಯ ವಿಶ್ವವಿದ್ಯಾಲಯವನ್ನು ಸ್ಥಾಪಿಸಲು ಉದ್ಯುಕ್ತರಾದರು.ಈ ಸಂಸ್ಥೆಯನ್ನು ಶಾಂತಿನಿಕೇತನ ಎಂಬ ಹೆಸರಿನಿಂದಲೂ ಕರೆಯುತ್ತಾರೆ. 1918ರ ಡಿಸೆಂಬರ್‌ನಲ್ಲಿ ಈ ವಿಶ್ವವಿದ್ಯಾಲಯಕ್ಕೆ ಶಂಕುಸ್ಥಾಪನೆ ನೆರವೇರಿಸಲಾಯಿತು. ವಿಶ್ವಭಾರತಿ ಸ್ಥಾಪನೆಯ ಕೆಲವೇ ತಿಂಗಳಿನಲ್ಲಿ ಜಲಿಯನ್‌ ವಾಲಾಬಾಗ್‌ ಹತ್ಯಾಕಾಂಡ ನಡೆಯಿತು.ಬ್ರಿಟಿಷರ ಅಮಾನವೀಯ ಕ್ರಮವನ್ನು ಪ್ರತಿಭಟಿಸಿದ ಠಾಗೋರರು 1915ರಲ್ಲಿ ತಮಗೆ ಪ್ರದಾನ ಮಾಡಿದ್ದ “ನೈಟ್‌ ಹುಡ್‌’ ಗೌರವವನ್ನು ಹಿಂದಿರುಗಿಸಿದರು.

1921ರಂದು ಠಾಗೋರರು ವಿಶ್ವಭಾರತಿಯನ್ನು ರಾಷ್ಟ್ರಕ್ಕೆ ಅರ್ಪಿಸಿದರು. ಇದಕ್ಕೆ 1951ರಲ್ಲಿ ವಿಶ್ವವಿದ್ಯಾಲಯದ ಮಾನ್ಯತೆ ಸಿಕ್ಕಿತು.ಮಕ್ಕಳಿಗೆ ಆಧ್ಯಾತ್ಮಿಕ, ಭೌದ್ಧಿಕ ಮತ್ತು ಭಾವನಾತ್ಮಕ ವಿಷಯಗಳನ್ನು ಮುಕ್ತ ವಾತಾ ವರಣದಲ್ಲಿ ಕಲಿಯುವ ಅವಕಾಶವನ್ನು ಈ ಸಂಸ್ಥೆ ಮಾಡಿಕೊಟ್ಟಿತು. ವಿಶ್ವಶಾಂತಿ ಮತ್ತು ವಿಶ್ವಬಾಂಧವ್ಯವನ್ನು ಸಾಧಿಸುವುದು ವಿಶ್ವಭಾರತಿ ಸಂಸ್ಥೆಯ ಗುರಿಯಾಗಿತ್ತು. ಇದರಲ್ಲಿ ಅವರ ಜಮೀನು, ಕಟ್ಟಡ, ಗ್ರಂಥಾಲಯ, ನೊಬೆಲ್‌ ಪ್ರಶಸ್ತಿಯ ಹಣ ಮತ್ತು ಅವರು ಸಂಗ್ರಹಿಸಿದ ಪುಸ್ತಕಗಳು ಸೇರಿದ್ದವು. ಅಮರ್ತ್ಯ ಸೇನ್‌, ಸತ್ಯಜಿತ್‌ ರೇ, ಗಾಯತ್ರಿ ದೇವಿ, ಇಂದಿರಾ ಗಾಂಧಿ ಇಲ್ಲಿ ಕಲಿತ ಪ್ರಮುಖ ವ್ಯಕ್ತಿಗಳು.

ಎರಡು ರಾಷ್ಟ್ರ ಗೀತೆಗಳ ಜನಕ
ಬ್ರಿಟಿಷ್‌ ಆಡಳಿತವನ್ನು ಬಹಿರಂಗವಾಗಿ ಖಂಡಿಸಿದ ಠಾಗೋರ್‌ ಭಾರತೀಯ ಸ್ವಾತಂತ್ರ್ಯ ಚಳವಳಿಯನ್ನು ಬೆಂಬಲಿಸಿದವರು. ಠಾಗೋರ್‌ ರಚಿಸಿದ ಎರಡು ಗೀತೆಗಳಿಗೆ ರಾಷ್ಟ್ರ ಮನ್ನಣೆ ಲಭಿಸಿದೆ. “ಜನ ಗಣ ಮನ’ ವನ್ನು ಭಾರತದ ರಾಷ್ಟ್ರ ಗೀತೆಯಾಗಿ ಅಂಗೀಕರಿಸಲಾದರೆ “ಅಮರ್‌ ಶೋನರ್‌ ಬಾಂಗ್ಲಾ’ ಬಾಂಗ್ಲಾದೇಶದ ರಾಷ್ಟ್ರಗೀತೆಯಾಗಿದೆ.

ಬಹುಮುಖ ಪ್ರತಿಭೆ
ಠಾಗೋರರು ಬಹುಮುಖ ಪ್ರತಿಭೆಯನ್ನು ಹೊಂದಿದ್ದರು.ಅವರ ಕನಸುಗಳು, ಅಶೋತ್ತರಗಳು ಕಥೆ, ಕವನ, ಕಾದಂಬರಿ, ನಾಟಕ, ಪ್ರಬಂಧಗಳ ರೂಪದಲ್ಲಿ ಅಭಿವ್ಯಕ್ತಗೊಳ್ಳುತ್ತಿದ್ದವು. ಕಾವ್ಯ ಸಾಹಿತ್ಯದಲ್ಲಿ ಜನಪ್ರಿಯತೆಯನ್ನು ಪಡೆದರು. ವರ್ಣಚಿತ್ರ ರಚನೆಯನ್ನು ಸ್ವಲ್ಪ ವಿಳಂಬವಾಗಿ ಆರಂಭಿಸಿದರು ಅವರೊಳಗೆ ಸುಪ್ತವಾಗಿದ್ದ ಚಿತ್ರಕಾರ ಇಳಿವಯಸ್ಸಿನಲ್ಲೂ ಹೊರಬಂದ. ಫ್ರಾನ್ಸ್‌, ಇಂಗ್ಲೆಂಡ್‌, ಜರ್ಮನಿ, ಡೆನ್ಮಾರ್ಕ್‌, ರಷ್ಯಾ ಮತ್ತು ಅಮೆರಿಕಗಳಂತಹ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಇವರ ಚಿತ್ರಗಳು ಪ್ರದರ್ಶನಗೊಂಡವು. ಅವರು ರಚಿಸಿದ ಚಿತ್ರಗಳ ಅರ್ಥವನ್ನು ಗ್ರಹಿಸಿಕೊಳ್ಳುವುದೇ ಒಂದು ಸಾಹಸವಾಗಿತ್ತು. ಪಾಶ್ಚತ್ಯ ವಿಮರ್ಶಕರು ವರ್ಣಚಿತ್ರಗಳನ್ನು ‘ ನವ್ಯಕಲೆ’ ಎಂಬುದಾಗಿ ಶ್ಲಾ ಸುತ್ತಿದ್ದರು. ಚಿತ್ರಲಿಪಿ ಎಂಬ ಪುಸ್ತಕ ರವೀಂದ್ರರ ಚಿತ್ರಕಲಾ ಕೌಶಲವನ್ನು ಪರಿಚಯಿಸುತ್ತದೆ.

ಇಳಿವಯಸ್ಸಿನಲ್ಲೂ ನಾನಾ ಪ್ರದೇಶಗಳಿಗೆ ಭೇಟಿಕೊಟ್ಟು ಹೊಸ ಹೊಸ ಅನುಭವಗಳನ್ನು ಗಳಿಸುತ್ತಿದ್ದರು. ನಾನಾ ಪ್ರದೇಶಗಳ ಜನರನ್ನು ಅರ್ಥೈಸಿಕೊಳ್ಳುವಲ್ಲಿ ಮತ್ತು ಅವರ ರಾಷ್ಟ್ರದ ಬಗ್ಗೆ ತಿಳಿದುಕೊಳ್ಳುವಲ್ಲಿ ರವೀಂದ್ರನಾಥರು ಆಸಕ್ತಿಯನ್ನು ವಹಿಸಿದ್ದರು.ತಮ್ಮ ಸಾಹಿತ್ಯಗಳಲ್ಲಿ ಇವುಗಳನ್ನು ಪ್ರಸ್ತಾವಿಸಿದ್ದಾರೆ.

ಹೊಸದನ್ನು ತಿಳಿಯುವ ಕುತೂಹಲ, ಅಪರಿಚಿತರನ್ನು ಪರಿಚಿತರನ್ನಾಗಿ ಮಾಡುವ ಚಾಣಾಕ್ಷತನ ಅವರ ಸ್ವಭಾವದಲ್ಲಿ ಬೆರೆತುಕೊಂಡಿತ್ತು. ಇದರಿಂದಾಗಿ ಸ್ವದೇಶ ಹಾಗೂ ವಿದೇಶಿಗರ ಅಭಿಮಾನವನ್ನು ಗಳಿಸಿಕೊಂಡರು. ಇವರ ಕೃತಿಗಳು ನಾನಾ ಭಾಷೆಗಳಿಗೆ ತರ್ಜುಮೆಗೊಳ್ಳಲು ಇದು ಸಹಕಾರಿಯಾಗಿತ್ತು. ಸಂಕುಚಿತ ರಾಷ್ಟ್ರೀಯತೆ ಅವರಲ್ಲಿ ಎಂದಿಗೂ ಇರಲಿಲ್ಲ.

-ಸುನೀತಾ ಮಯ್ಯ, ಬಿ. ಎಡ್‌. ಕೇಂದ್ರ ಚಾಲ, ಕಾಸರಗೋಡು

Advertisement

Udayavani is now on Telegram. Click here to join our channel and stay updated with the latest news.

Next