ರಬಕವಿ-ಬನಹಟ್ಟಿ : ಸ್ಥಳೀಯ ಜೋಡಣಿದಾರ ನೇಕಾರರ ವಿದ್ಯುತ್ ಮಗ್ಗಗಳ ಮೇಲಿನ ನಿಗದಿತ ಶುಲ್ಕವನ್ನು ರದ್ದುಗೊಳಿಸುವಂತೆ ಆಗ್ರಹಿಸಿ ಜೋಡಣಿದಾರ ನೇಕಾರರು ಇದೇ 20ರಂದು ಸ್ಥಳೀಯ ಬಸ್ ನಿಲ್ದಾಣದ ಮುಂಭಾಗದಲ್ಲಿ ಧರಣಿ ಸತ್ಯಾಗ್ರಹ ನಡೆಸಲಿದ್ದಾರೆ ಎಂದು ನೇಕಾರ ಮುಖಂಡ ಕುಬೇರ ಸಾರವಾಡ ತಿಳಿಸಿದರು.
ಬುಧವಾರ ಅವರು ಸ್ಥಳೀಯ ತಹಶೀಲ್ದಾರ್ ಕಾರ್ಯಾಲಯದಲ್ಲಿ ಗ್ರೇಡ್-2 ತಹಶೀಲ್ದಾರ್ ಎಸ್.ಬಿ.ಕಾಂಬಳೆ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಮತ್ತೊರ್ವ ನೇಕಾರ ಮುಖಂಡ ಬಸವರಾಜ ಮುರಗೋಡ ಮಾತನಾಡಿ, ವಿದ್ಯುತ್ ಮಗ್ಗಗಳ ಮೇಲಿನ ವಿದ್ಯುತ್ ಶುಲ್ಕವನ್ನು ಕಡಿಮೆಗೊಳಿಸುವಂತೆ ಆಗ್ರಹಿಸಿ ಜೋಡಣಿದಾರರ ನೇಕಾರರು ಏಪ್ರಿಲ್ 20 ರಂದು ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಿದ್ದರು. ಆದರೆ ಸರ್ಕಾರ ಇದುವರೆಗೆ ವಿದ್ಯುತ್ ಶುಲ್ಕವನ್ನು ಕಡಿಮೆ ಮಾಡದೆ ಇರುವುದರಿಂದ ನೇಕಾರಿಗೆ ಬಹಳಷ್ಟು ಸಮಸ್ಯೆಯಾಗಿದೆ.
ಈಗಾಗಲೇ ಮಾರುಕಟ್ಟೆಯಲ್ಲಿ ಕಚ್ಚಾ ಸರಕುಗಳು, ಬಣ್ಣ, ಮಜೂರಿ ಹೆಚ್ಚಳ ಹಾಗೂ ಜಿಎಸ್ಟಿಯನ್ನು ವಿಧಿಸಿದ್ದರಿಂದ ನೇಕಾರರಿಗೂ ಹಾಗೂ ನೇಕಾರ ಮಾಲೀಕರಿಗೂ ಬಹಳಷ್ಟು ತೊಂದರೆಯಾಗಿದೆ. ಇದರಿಂದಾಗಿ ಇಲ್ಲಿಯ ಸೀರೆಗಳಿಗೆ ಮಾರುಕಟ್ಟೆ ಇಲ್ಲದಂತಾಗಿದೆ. ಈಗ ವಿದ್ಯುತ್ ನಿಗದಿತ ಶುಲ್ಕವನ್ನು ಹೆಚ್ಚಿಗೆ ಮಾಡಿರುವುದರಿಂದ ಮತ್ತಷ್ಟು ಸಮಸ್ಯೆಯಾಗಿದೆ. ಆದ್ದರಿಂದ ಸರ್ಕಾರ ನಿಗದಿತ ಶುಲ್ಕವನ್ನು ರದ್ದು ಮಾಡುವವರೆಗೆ ಧರಣಿ ಸತ್ಯಾಗ್ರಹ ಮಾಡುತ್ತೇವೆ ಎಂದು ಬಸವರಾಜ ಮುರಗೋಡ ತಿಳಿಸಿದರು.
ಇದನ್ನೂ ಓದಿ : ಉತ್ತರಾಖಂಡ ಸಿಎಂ ಅಭ್ಯರ್ಥಿಯಾಗಿದ್ದ ಕೊಥಿಯಾಲ್ ಆಪ್ ಗೆ ಗುಡ್ ಬೈ
ಈ ಸಂದರ್ಭದಲ್ಲಿ ರವಿ ಬಾಡಗಿ, ಮಹಾದೇವ ನುಚ್ಚಿ, ಸುರೇಶ ಮಠದ, ನಾಮದೇವ ಮಾನೆ ಸೇರಿದಂತೆ ಅನೇಕ ಜೋಡಣಿದಾರ ನೇಕಾರರು ಇದ್ದರು.