ರಬಕವಿ-ಬನಹಟ್ಟಿ: ಕೇಸರಿ ಶಾಲು ಮತ್ತು ಹಿಜಾಬ್ ವಿವಾದ ಹಿನ್ನೆಲೆ ರಬಕವಿ ಬನಹಟ್ಟಿಯಲ್ಲಿ ಶುಕ್ರವಾರ ಸೆಕ್ಷನ್ 144 ನ್ನು ವಿಧಿಸಲಾಗಿತ್ತು.
ಸ್ಥಳೀಯ ಮಂಗಳವಾರ ಪೇಟೆಯಲ್ಲಿಯ ದಿನನಿತ್ಯ ತರಕಾರಿ ಮಾರುಕಟ್ಟೆ, ಗಾಂಧೀಜಿ ಸರ್ಕಲ್ ಹತ್ತಿರ ನಡೆಯುತ್ತಿದ್ದ ಹಣ್ಣು ವ್ಯಾಪಾರವನ್ನು ಪೊಲೀಸ್‌ರು ಸಂಪೂರ್ಣವಾಗಿ ಬಂದ್ ಮಾಡಿಸಿದ್ದರು. ಬೇರೆ ಗ್ರಾಮಗಳಿಂದ ತರಕಾರಿ ಮಾರಲು ಬಂದ ವ್ಯಾಪಾರಸ್ಥರು ಮತ್ತು ರೈತರು ಬಂದ್ ಹಿನ್ನೆಲೆ ತಾವು ತಂದು ತರಕಾರಿಗಳನ್ನು ಬೇರೆ ಸ್ಥಳದಲ್ಲಿ ಮಾರಾಟ ಮಾಡಿ ತೆರಳಿದ್ದಾರೆ.
ಶುಕ್ರವಾರವೂ ನಗರದಲ್ಲಿ ಖಾಕಿ ಪಡೆ
ಶುಕ್ರವಾರವೂ ಅವಳಿ ನಗರದಲ್ಲಿ ಪೊಲೀಸರು ಸಾಕಷ್ಟು ಸಂಖ್ಯೆಯಲ್ಲಿ ಇದ್ದರು. ಸರ್ಕಾರಿ ಪದವಿಪೂರ್ವ ಕಾಲೇಜು, ಬಸ್ ನಿಲ್ದಾಣ, ಜಮಖಂಡಿ ಕುಡಚಿ ರಾಜ್ಯ ಹೆದ್ದಾರಿ ಸೇರಿದಂತೆ ಅನೇಕ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಲಾಗಿತ್ತು.
ಬಂದ್ ನಿಮಿತ್ತವಾಗಿ ಔಷಧಿ ಅಂಗಡಿಗಳು, ಆಸ್ಪತ್ರೆ, ಹಾಲು ಮಾರಾಟ, ಶಾಲಾ ಕಾಲೇಜುಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ಅಲ್ಲದೇ ನಿಗದಿಯಾಗಿದ್ದ ಸಮಾರಂಭಗಳು ನಡೆದವು.
ಜಮಖಂಡಿ ಡಿವೈಎಸ್ಪಿ ಎಂ.ಪಾಂಡುರಂಗಯ್ಯ, ಸಿಪಿಐ ಜಿ.ಕರುಣೇಶಗೌಡ, ಪಿಎಸ್‌ಐ ಸುರೇಶ ಮಂಟೂರ ಸೇರಿದಂತೆ ಅನೇಕ ಪೊಲೀಸ್ ಅಧಿಕಾರಿಗಳು ಇದ್ದರು.